ತುಂಗಭದ್ರಾ ನದಿಗೆ ಸ್ನಾನಕ್ಕೆಂದು ಇಳಿದ ಅರ್ಚಕ ನೀರು ಪಾಲು: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ

By Suvarna NewsFirst Published Jul 15, 2022, 10:09 PM IST
Highlights

ಪೂಜೆ ಮಾಡಲೆಂದು ಹೋದ ಅರ್ಚಕ ಪೂಜೆಗೂ ಮೊದಲು ಸ್ನಾನಕ್ಕೆಂದು ತುಂಗಭದ್ರಾ ನದಿಗೆ ತೆರಳಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. 

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ಕರಾಯಚೂರು: ಕಳೆದ 10-15 ದಿನಗಳಿಂದ ‌ಮಲೆನಾಡಿನಲ್ಲಿ ನಿರಂತರವಾಗಿ ‌ಮಳೆ ಸುರಿಯುತ್ತಿದೆ. ಮಲೆನಾಡಿನಲ್ಲಿ ಆಗುತ್ತಿರುವ ಮಹಾ ಮಳೆಯಿಂದಾಗಿ ತುಂಗಭದ್ರಾ ‌ಡ್ಯಾಂ ಸಂಪೂರ್ಣವಾಗಿ ಭರ್ತಿ ಆಗಿದ್ದು, ತುಂಗಭದ್ರಾ ನದಿಗೆ 1ಲಕ್ಷ 53 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಬಿಡುಗಡೆ ‌ಮಾಡಲಾಗಿದೆ. ಇದರಿಂದಾಗಿ ತುಂಗಭದ್ರಾ ‌ನದಿ ಅಪಾಯ ಮಟ್ಟ ಮೀರಿ ತುಂಬಿ ಹರಿಯುತ್ತಿದೆ. ಹೀಗಾಗಿ ರಾಯಚೂರು ಜಿಲ್ಲಾಡಳಿತ ನದಿ ತೀರದಲ್ಲಿ ಬರುವ 23ಕ್ಕೂ ಹೆಚ್ಚು ಹಳ್ಳಿಯಲ್ಲಿ ನದಿ ತೀರಕ್ಕೆ ತೆರಳದಂತೆ ಡಂಗುರ ಸಾರಿದೆ. ಆದಾಗ್ಯೂ ಸಹ ಇಂದು ಬೆಳಗ್ಗೆ ತುಂಗಭದ್ರಾ ನದಿಗೆ ಸ್ನಾನಕ್ಕೆ ಹೋದ ಅರ್ಚಕರೊಬ್ಬರು ನೀರುಪಾಲಾಗಿದ್ದಾರೆ.

ಸಿಂಧನೂರು ತಾಲೂಕಿನ ಮುಕ್ಕಂದಾ ಗ್ರಾಮದ ಅರ್ಚಕ ನಿಂಗಪ್ಪ ಬೆಳಗ್ಗೆ ‌5-00 ಗಂಟೆಗೆ ಮನೆಯಿಂದ ತುಂಗಭದ್ರಾ ನದಿ ದಡದಲ್ಲಿರುವ ಕರಿವೀರೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲೆಂದು  ಹೋಗಿದ್ದಾರೆ. ಪೂಜೆಗೆ ಹೋದವರು ಬೆಳಗ್ಗೆ 11-00 ಗಂಟೆಯವರೆಗೆ ಮನೆಗೆ ಬಾರದೇ ಇದ್ದುದರಿಂದ ಹುಡುಕಾಟ ನಡೆಸಿದಾಗ ನಿಂಗಪ್ಪ ಧರಿಸಿದ್ದ ಕನ್ನಡಕ, ಬಟ್ಟೆಬರೆ ಉರುಗೋಲು ಗುಡಿ ಕಟ್ಟೆಯ ಮೇಲೆ ಸಿಕ್ಕಿದೆ. ಆದರೆ ನಿಂಗಪ್ಪ ಸುಳಿವು ಪತ್ತೆಯಾಗಿಲ್ಲ. ಸುತ್ತಮುತ್ತಲು ನದಿಯ ದಡದಲ್ಲಿ ದಡೇಸೂರುವರೆಗೆ ಹೋಗಿ ಹುಡುಕಾಡಿದರೂ ನಿಂಗಪ್ಪ ಪತ್ತೆಯಾಗಿಲ್ಲದಿರುವುದರಿಂದ ಪೂಜೆಗೆ ಮೊದಲು ಸ್ನಾನಕ್ಕೆ ಹೋದವರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಗ್ರಾಮಕ್ಕೆ ದೌಡಾಯಿಸಿದ ಅಧಿಕಾರಿಗಳ ತಂಡ 

ತುಂಗಭದ್ರಾ ‌ನದಿಯಲ್ಲಿ ದಿನೇ ದಿನೇ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಜಿಲ್ಲಾಡಳಿತ ‌ಕಳೆದ ಒಂದು ವಾರದಿಂದ ನದಿಗೆ ಇಳಿಯಬಾರದು. ನದಿಯಲ್ಲಿ ‌ನೀರಿನ ರಭಸ ಹೆಚ್ಚಾಗಿದೆ. ಅಪಾಯವಾಗುತ್ತೆ ಅಂತ ಎಚ್ಚರಿಕೆ ನೀಡುತ್ತಾ ಬಂದ್ರೂ ಸಹ ಅರ್ಚಕ ನಿಂಗಪ್ಪ ತುಂಗಭದ್ರಾ ‌ನದಿಯಲ್ಲಿ ‌ಸ್ನಾನ ಮಾಡಲು ಹೋಗಿ ಈಗ ನೀರುಪಾಲಾಗಿದ್ದಾರೆ. ಈ ಮಾಹಿತಿ ತಿಳಿದ ಕೂಡಲೇ ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು ‌ಸಿಂಧನೂರು ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೊತೆಗೆ ಗ್ರಾಮಸ್ಥರಿಗೆ ನದಿಗೆ ಇಳಿಯದಂತೆ ಸೂಚನೆ ನೀಡಿದರು.

ಅರ್ಚಕನಿಗಾಗಿ ಶೋಧ ಕಾರ್ಯ: 

ಅರ್ಚಕ ನಿಂಗಪ್ಪ ನಾಪತ್ತೆಯಾದ ‌ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಸಿಂಧನೂರು ತಹಸೀಲ್ದಾರ್ ಅರುಣ್ ಕುಮಾರ ದೇಸಾಯಿ, ಸಿಂಧನೂರು ಸಿಪಿಐ ಉಮೇಶ್ ಕಾಂಬ್ಳೆ , ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ತಂಡ ನಾಪತ್ತೆಯಾದ ಅರ್ಚಕನಿಗಾಗಿ ‌ಅಪಾಯಮಟ್ಟದಲ್ಲಿ ಹರಿಯುತ್ತಿರುವ ತುಂಗಭದ್ರಾ ‌ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದ್ರೂ ನಾಪತ್ತೆಯಾದ ಅರ್ಚಕ ನಿಂಗಪ್ಪ  ಸುಳಿವು ಮಾತ್ರ ಪತ್ತೆಯಾಗುತ್ತಿಲ್ಲ. ಈ ಕುರಿತು ‌ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

click me!