ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಭರ್ಜರಿ ಸಿದ್ಧತೆ

By Suvarna NewsFirst Published Dec 29, 2019, 9:29 AM IST
Highlights

ಹಂಪಿ ಉತ್ಸವಕ್ಕೆ ಸಿದ್ಧತೆ| ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ|ಸ್ವಚ್ಛತೆ, ರಸ್ತೆ ಅಭಿವೃದ್ಧಿ ಸೇರಿ ಮೂಲ ಸೌಕರ್ಯ ಕಾಮಗಾರಿ ಪ್ರಾರಂಭ| ಹೊಸಪೇಟೆಯಿಂದ ಹಂಪಿಗೆ ಸಂಪರ್ಕಿಸುವ ರಸ್ತೆಯ ಎರಡು ಬದಿಯಲ್ಲಿ ಬೆಳೆದು ನಿಂತಿರುವ ಮುಳ್ಳುಗಿಡಗಳನ್ನು ಕಡಿದು ಸ್ವಚ್ಛಗೊಳಿಸುತ್ತಿದ್ದಾರೆ|
 

ಸಿ.ಕೆ. ನಾಗರಾಜ್ 

ಹೊಸಪೇಟೆ(ಡಿ.29): ಜ. 10 ಮತ್ತು 11 ರಂದು ಎರಡು ದಿನ ನಡೆಯುವ ಹಂಪಿ ಉತ್ಸವಕ್ಕೆ ಸಿದ್ಧತೆ ಪ್ರಾರಂಭಗೊಂಡಿದ್ದು, ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಹಂಪಿಯಲ್ಲಿ ಸಾಕಷ್ಟು ಪ್ರದೇಶಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿತ್ತು. ಅಲ್ಲದೇ ಮೂಲ ಸೌಲಭ್ಯ ಇಲ್ಲದೆ ಪ್ರವಾಸಿಗರು ನಿತ್ಯವೂ ಪರದಾಡುವಂತಹ ಸ್ಥಿತಿ ಹಂಪಿಯಲ್ಲಿ ನಿರ್ಮಾಣವಾಗಿತ್ತು. ಹಂಪಿ ಉತ್ಸವದ ನೆಪದಲ್ಲಿಯಾದರೂ ಜಿಲ್ಲಾಡಳಿತ ಸ್ವಚ್ಛತಾ ಕಾರ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ. 

ಉತ್ಸವ ನಡೆಯುವ ವೇದಿಕೆಗಳ ಮುಂದೆ ಹಾಗೂ ದಾರಿಯಲ್ಲಿ ಬೆಳೆದಿರುವ ಮುಳ್ಳುಗಿಡಗಳನ್ನು ಕಡಿದು ಹಾಕುವುದು, ರಸ್ತೆ ಬದಿಯಲ್ಲಿ ಅಥವಾ ಸ್ಮಾರಕಗಳ ಮುಂದೆ ಬಿದ್ದಿರುವ ತಗ್ಗು- ಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಮಿಕರು ತೊಡಗಿದ್ದಾರೆ. 

ಹೊಸಪೇಟೆಯಿಂದ ಹಂಪಿಗೆ ಸಂಪರ್ಕಿಸುವ ರಸ್ತೆಯ ಎರಡು ಬದಿಯಲ್ಲಿ ಬೆಳೆದು ನಿಂತಿರುವ ಮುಳ್ಳುಗಿಡಗಳನ್ನು ಕಡಿದು ಸ್ವಚ್ಛಗೊಳಿಸುತ್ತಿದ್ದಾರೆ. ಉತ್ಸವಕ್ಕೆ ಅಗತ್ಯವಾಗಿರುವ ವಿದ್ಯುತ್ ಸೌಲಭ್ಯ ಕಲ್ಪಿಸಲು ಜೆಸ್ಕಾಂನವರು ಹಂಪಿಯಲ್ಲಿ 11 ಕೆವಿಯ ಹೊಸ ವಿದ್ಯುತ್ ತಂತಿಯನ್ನು 3 ಕಿಮೀ ದೂರದವರೆಗೆ ಅಳವಡಿಸುತ್ತಿದ್ದಾರೆ. ಕೃಷ್ಣ ದೇವಸ್ಥಾನದಿಂದ ಗಾಯತ್ರಿ ಪೀಠದವರೆಗಿನ ವೇದಿಕೆಗಳಿಗೆ ದಿನದ 24 ತಾಸು ವಿದ್ಯುತ್ ಪೂರೈಸಲು ಕಾಮಗಾರಿ ನಡೆಯುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಂಪಿ ವ್ಯಾಪ್ತಿಯಲ್ಲಿ 200 ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತಿದೆ. ಇದರೊಂದಿಗೆ 100 ಕಿಲೋ ವ್ಯಾಟ್‌ನ 17 ಟಿಸಿಗಳು, 63 ಕೆವಿಯ 6 ಟಿಸಿಗಳು, 250 ಕೆವಿಯ 6 ಟಿಸಿಗಳನ್ನು ಅಳವಡಿಸಲಾಗುತ್ತಿದೆ. ಜನವರಿ 5 ರೊಳಗೆ ವಿದ್ಯುತ್ ಸೌಲಭ್ಯ ದೊರೆಯಲಿದೆ. ಹೊಸಪೇಟೆಯಿಂದ ಕಮಲಾಪುರಕ್ಕೆ ಹೋಗುವ ರಸ್ತೆಯಲ್ಲಿ ಹಂಪಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಿಂದ ಅಂದರೆ ಹಂಪಿ ದ್ವಾರ ಬಾಗಿಲಿನಿಂದ ಕಡ್ಡಿರಾಂಪುರ ತಾಂಡಾವರೆಗೆ ಶಾಸಕರ ಅನುದಾನದಲ್ಲಿ 1.55 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ. ಈ ರಸ್ತೆಯು 7 ಮೀಟರ್ ಅಗಲದಲ್ಲಿ 1.35 ಕಿಮೀ ದೂರದವರೆಗೆ ನಿರ್ಮಿಸಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರು, ಹಂಪಿ ಉತ್ಸವ ಸಿದ್ಧತೆ ಭರದಿಂದ ಆರಂಭವಾಗಿದೆ. ಹಂಪಿಯಲ್ಲಿ ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ರಸ್ತೆಗಳ ಅಭಿವೃದ್ಧಿ ಹಾಗೂ ಉತ್ಸವಕ್ಕೆ ಬರುವ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗದಂತೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹಂಪಿ ಉತ್ಸವವನ್ನು ಜನೋತ್ಸವವಾಗಿ ಆಚರಿಸಲು ಸಕಲ ಸಿದ್ಧತೆಯನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
 

click me!