* ಜೂ. 21ರಿಂದ ಎಲ್ಲರಿಗೂ ಉಚಿತ ಲಸಿಕೆ
* ಆನ್‌ಲೈನ್ ಹಾಗೂ ಆನ್‌ಸೈಟ್ ರಜಿಸ್ಟರ್‌ಗೆ ಅವಕಾಶ
* ಕೊರೋನಾದಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯುವುದು ಮುಖ್ಯ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಜೂ.17): ಜೂ. 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಲಸಿಕಾಕರಣದಲ್ಲಿ ತೊಂದರೆಯಾಗದಂತೆ ನಿಭಾಯಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಹೆಚ್ಚುವರಿ ಕೇಂದ್ರ ತೆರೆಯಲು ಸನ್ನದ್ಧವಾಗಿದೆ. ಲಸಿಕೆ ಪಡೆಯಲು ಆನ್‌ಲೈನ್‌ನಲ್ಲಿ ರಜಿಸ್ಟರ್ ಮಾಡಬೇಕೆಂದೇನೋ ಇಲ್ಲ. ‘ಆನ್‌ಸೈಟ್ ರಜಿಸ್ಟರ್’ ಮಾಡಿಕೊಂಡು ಲಸಿಕೆ ಪಡೆಯಬಹುದು.
ಕೊರೋನಾದಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯುವುದು ಮುಖ್ಯ. ಆರಂಭದಲ್ಲಿ ಆರೋಗ್ಯ ಕ್ಷೇತ್ರ, ಬಳಿಕ ವಿವಿಧ ಇಲಾಖೆಗಳ ಕೊರೋನಾ ವಾರಿಯರ್ಸ್, 60 ವರ್ಷ ಮೇಲ್ಪಟ್ಟವರಿಗೆ, ಬಳಿಕ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಯಿತು. ಬಳಿಕ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತು. ಆದರೆ ಲಸಿಕೆ ಕೊರತೆಯಿಂದ ಇದನ್ನು ತಡೆಹಿಡಿದು ಆದ್ಯತಾ ಗುಂಪುಗೆ ಮಾತ್ರ ನೀಡಲಾಗುತ್ತಿದೆ.
ಈ ವರೆಗೆ ಜಿಲ್ಲೆಯಲ್ಲಿ ಮೊದಲ ಹಂತದ ಡೋಸ್ ಪಡೆದವರ ಸಂಖ್ಯೆ 3,18,086 ಜನರಿದ್ದರೆ, ಎರಡು ಡೋಸ್ ಪಡೆದವರ ಸಂಖ್ಯೆ 74,689 ಇದೆ. ಒಟ್ಟು 3,92,775 ಜನರಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 19.88 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು ಇನ್ನೂ 15 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಬೇಕಿದೆ. ನಿತ್ಯ 5 ಸಾವಿರಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಆದರೂ ಲಸಿಕಾ ಕೇಂದ್ರಕ್ಕೆ ಹೋಗಿ ವಾಪಸ್ ಬರುವವರ ಸಂಖ್ಯೆ ಹೆಚ್ಚಿದೆ.
ಧಾರವಾಡ: ಕೋವಿಡ್ ನಿರ್ಮೂಲನೆಗೆ ನಡೀತು ಹೋಮ-ಹವನ
ಎಷ್ಟು ಲಸಿಕೆ ಕೇಂದ್ರ:
ಸದ್ಯ 32 ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಟಗುಪ್ಪಿ ಆಸ್ಪತ್ರೆ ಸೇರಿದಂತೆ 20 ನಗರ ಸಮುದಾಯ ಆರೋಗ್ಯ ಕೇಂದ್ರ, 3 ತಾಲೂಕಾಸ್ಪತ್ರೆ, ಕಿಮ್ಸ್, ಜಿಲ್ಲಾಸ್ಪತ್ರೆ ಹಾಗೂ ರೈಲ್ವೆ ಆಸ್ಪತ್ರೆ ಸೇರಿದಂತೆ ಒಟ್ಟು 58 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಈಗಲೇ ಕೆಲವೊಂದು ಲಸಿಕಾ ಕೇಂದ್ರಗಳು ಕೊರೋನಾ ಹಾಟ್‌ಸ್ಪಾಟ್ ಆದಂತಾಗಿವೆ. ಹೀಗಾಗಿ ಎಲ್ಲರಿಗೂ ಲಸಿಕೆ ಕೊಡಲು ಪ್ರಾರಂಭಿಸಿದರೆ ಲಸಿಕಾ ಕೇಂದ್ರಗಳಲ್ಲಿ ಇನ್ನಷ್ಟುಜನಜಂಗುಳಿ ಆಗುವ ಸಾಧ್ಯತೆ ಇದೆ. ಸೇರುವ ಜನರನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಈ ಕಾರಣ ಹೆಚ್ಚುವರಿ ಲಸಿಕಾ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲೆಯಲ್ಲಿ 188 ಉಪ ಆರೋಗ್ಯ ಕೇಂದ್ರಗಳಿವೆ ಅಲ್ಲೂ ಲಸಿಕೆ ಪ್ರಾರಂಭಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿನ ಜನತೆಗೆ ಲಸಿಕೆ ಪಡೆಯಲು ಅನುಕೂಲವಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಕೊಡದಿರಲು ಜಿಲ್ಲಾಡಳಿತ ನಿರ್ಧರಿಸಿದೆ. ಖಾಸಗಿ ಆಸ್ಪತ್ರೆಗಳು ತಾವಾಗಿಯೇ ಲಸಿಕೆ ತರಿಸಿಕೊಂಡು ನೀಡಬಹುದಾಗಿದೆ.
ಆನ್‌ಸೈಟ್ ರಜಿಸ್ಟರ್:
ಇನ್ನೂ ಮೊದಲು 18 ವರ್ಷದ ಮೇಲ್ಪಟ್ಟವರು ಲಸಿಕೆ ಪಡೆಯಲು ಆ್ಯಪ್ ಅಥವಾ ಆನ್‌ಲೈನ್‌ನಲ್ಲಿ ರಜಿಸ್ಟರ್ ಮಾಡಬೇಕಿತ್ತು. ಹೀಗೆ ಆನ್‌ಲೈನ್‌ನಲ್ಲಿ ರಜಿಸ್ಟರ್ ಮಾಡಿಕೊಂಡು ಶೆಡ್ಯೂಲ್ ಆದ ಸಮಯದಲ್ಲಿ ತೆರಳಬೇಕಿತ್ತು. ಆದರೆ ಇದೀಗ ‘ಆನ್‌ಸೈಟ್ ರಜಿಸ್ಟರ್’ ಅಂದರೆ ಲಸಿಕಾ ಕೇಂದ್ರದಲ್ಲೇ ಮಾಡಿ ಲಸಿಕೆ ಪಡೆದುಕೊಳ್ಳಬಹುದು. ಇದರೊಂದಿಗೆ ಆನ್‌ಲೈನ್‌ನಲ್ಲೂ ರಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.
ಜೂ. 21ರಿಂದ ಎಲ್ಲರಿಗೂ ಉಚಿತವಾಗಿ ನೀಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಯಾರಿ ನಡೆಸಿದೆ. ಆದರೆ ಲಸಿಕೆ ಎಷ್ಟುಪ್ರಮಾಣದಲ್ಲಿ ಬರುತ್ತದೆ ಎಂಬುದರ ಮೇಲೆ ನಿಂತಿದೆ. ಜಿಲ್ಲೆಗೆ ಸಾಕಷ್ಟುಲಸಿಕೆ ಸರಬರಾಜು ಮಾಡಿದರೆ ಸಮಸ್ಯೆಯಾಗದು.
ಜೂ. 21ರಿಂದ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿದೆ. ಇದಕ್ಕಾಗಿ ಹೆಚ್ಚುವರಿ ಲಸಿಕಾ ಕೇಂದ್ರ ತೆರೆದು ಗೊಂದಲಕ್ಕೆ ಅವಕಾಶ ನೀಡದಂತೆ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಆನ್‌ಲೈನ್ ಹಾಗೂ ಆನ್‌ಸೈಟ್ ರಜಿಸ್ಟರ್‌ಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
188 ಉಪ ಆರೋಗ್ಯ ಕೇಂದ್ರಗಳಲ್ಲೂ ಲಸಿಕಾ ಕೇಂದ್ರ ತೆರೆಯಲಾಗುತ್ತಿದೆ. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಜನರಿಗೆ, ನಗರವಾಸಿಗಳಿಗೆ ಸಮಸ್ಯೆಯಾಗದಂತೆ ಹೆಚ್ಚು ಜನಜಂಗುಳಿ ಆಗದಂತೆ ವ್ಯವಸ್ಥಿತವಾಗಿ ಲಸಿಕೆ ನೀಡಲಾಗುವುದು ಎಂದು ವ್ಯಾಕ್ಸಿನ್ ನೋಡಲ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ ಹೇಳಿದ್ದಾರೆ.