ಸರಳ ಮಡಿಕೇರಿ ದಸರಾಗೆ ಮಂಜಿನ ನಗರಿಯಲ್ಲಿ ಸಿದ್ಧತೆ

By Kannadaprabha News  |  First Published Oct 4, 2021, 12:12 PM IST
  • ಐತಿಹಾಸಿಕ ಮಡಿಕೇರಿ ದಸರಾ ಉತ್ಸವವು ಕೊರೋನಾ ಕಾರಣದಿಂದಾಗಿ ಈ ಬಾರಿಯೂ ಸರಳ
  • ಸರಳ ಹಾಗೂ ಸಾಂಪ್ರದಾಯಿಕ ದಸರೆಗೆ ಮಂಜಿನ ನಗರಿಯಲ್ಲಿ ಸಿದ್ಧತೆ 

 ಮಡಿಕೇರಿ (ಅ.04):  ಐತಿಹಾಸಿಕ ಮಡಿಕೇರಿ (Madikeri) ದಸರಾ (Dasara) ಉತ್ಸವವು ಕೊರೋನಾ (Covid) ಕಾರಣದಿಂದಾಗಿ ಈ ಬಾರಿಯೂ ಸರಳ ರೀತಿಯಲ್ಲಿ ನಡೆಯುತ್ತಿದ್ದು, ಸರಳ ಹಾಗೂ ಸಾಂಪ್ರದಾಯಿಕ ದಸರೆಗೆ ಮಂಜಿನ ನಗರಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಅ.7ರಂದು ಮಡಿಕೇರಿಯ ಪಂಪಿನ ಕೆರೆಯಲ್ಲಿ ಸಂಜೆ 5.30ಕ್ಕೆ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವದ (karaga Utsav) ಮೂಲಕ ಮಡಿಕೇರಿ ದಸರಾ ಆರಂಭವಾಗಲಿದೆ. ಈ ಬಾರಿ ಒಂದು ಕರಗದೊಂದಿಗೆ 25 ಮಂದಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅಲ್ಲದೆ ಕರಗಗಳು ನಗರದ ಮನೆ ಮನೆಗೆ ಭೇಟಿ ನೀಡಲಿದೆ.

Tap to resize

Latest Videos

ಮಡಿಕೇರಿ : ಪ್ರವಾಸಿ ತಾಣಗಳಿಗೆ 10 ದಿನಗಳವರೆಗೆ ನಿರ್ಬಂಧ

ಭರದಿಂದ ಸಾಗಿದ ಸ್ವಚ್ಛತಾ ಕಾರ್ಯ:  ದಸರಾ ಹಿನ್ನೆಲೆಯಲ್ಲಿ ಈಗಾಗಲೇ ನಗರಸಭೆಯ ವತಿಯಿಂದ ಮಡಿಕೇರಿ ನಗರದ ವಿವಿಧ ಕಡೆಗಳಲ್ಲಿ ಶುಚಿತ್ವ ಕಾರ್ಯ ನಡೆಯುತ್ತಿದೆ. ಕರಗಗಳಿಗೆ ಪೂಜೆ ಸಲ್ಲಿಸುವ ಪಂಪಿನ ಕೆರೆ, ವಿವಿಧ ದೇವಾಲಯಗಳ ಸಮೀಪ, ಪ್ರಮುಖ ರಸ್ತೆಗಳಲ್ಲಿ ಸುಮಾರು 40 ಮಂದಿ ಪೌರ ಕಾರ್ಮಿಕರು ಸ್ವಚ್ಛತೆಯಲ್ಲಿ ತೊಡಗಿದ್ದಾರೆ.

ಅ.15ರಂದು ರಾತ್ರಿ ಮಡಿಕೇರಿಯ ದಶ ದೇವಾಲಯಗಳ (Temple) ಮಂಟಪಗಳ ಶೋಭಾಯಾತ್ರೆ ನಡೆಯಲಿವೆ. ಒಂದು ಮಂಟಪದಲ್ಲಿ 100 ಮಂದಿಗೆ ಅವಕಾಶ ನೀಡಲಾಗಿದ್ದು, ಬೆಳಗ್ಗೆ ಬನ್ನಿ ಕಡಿಯಲಾಗುತ್ತದೆ. ಆದರೆ ಶೋಭಾಯಾತ್ರೆ ವೇಳೆ ಹೆಚ್ಚಿನ ಜನ ಸಂದಣಿಗೆ ಈ ಬಾರಿಯೂ ಅವಕಾಶ ಇರುವುದಿಲ್ಲ.

ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ

ಕಥಾಸಾರಾಂಶ, ಸ್ಪರ್ಧೆ ಇಲ್ಲ : ಈ ಬಾರಿಯ ಮಡಿಕೇರಿ ದಸರಾದ ದಶಮಂಟಪಗಳ ಶೋಭಾಯಾತ್ರೆ ಕೂಡ ಸರಳ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಲಿದೆ. ದಶಮಂಟಪಗಳ ಶೋಭಾಯಾತ್ರೆ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆ. ಆದರೆ ಈ ಬಾರಿ ಮಂಟಪಗಳಲ್ಲಿ ಕಥಾ ಸಾರಾಂಶವನ್ನು ಒಳಗೊಂಡಿರುವುದಿಲ್ಲ. ಮಂಟಪಗಳಿಗೆ ಸ್ಪರ್ಧೆ ಇರುವುದಿಲ್ಲ. ಮೂರ್ತಿಗಳ ಚಲನವಲನ ಕೂಡ ಇರುವುದಿಲ್ಲ. ಬದಲಾಗಿ ದೇವರ ಮೂರ್ತಿಯೊಂದಿಗೆ ಶೋಭಾಯಾತ್ರೆ ನಡೆಯಲಿದೆ.

ಒಂದು ಮಂಟಪಕ್ಕೆ ಒಂದು ಟ್ಯಾಕ್ಟರ್‌ ಹಾಗೂ ಒಂದು ವಾಹನಕ್ಕೆ ಅವಕಾಶ ಮಾಡಿಕೊಡುವಂತೆ ದಶ ಮಂಟಪ ಸಮಿತಿ ಜಿಲ್ಲಾಡಳಿತದೊಂದಿಗೆ ಮನವಿ ಮಾಡಿಕೊಂಡಿದೆ. ಆದರೆ ಈ ಬಗ್ಗೆ ಜಿಲ್ಲಾಧಿಕಾರಿ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ. ಈ ಬಾರಿಯೂ ಡಿ.ಜೆ ಇರುವುದಿಲ್ಲ. ಬದಲಾಗಿ ವಾದ್ಯಗೋಷ್ಠಿ ಇರುವ ಸಾಧ್ಯತೆಯಿದೆ.

ಮಡಿಕೇರಿ ದಸರಾ ಎಂದರೆ ದಶಮಂಪಟಗಳ ಶೋಭಾಯಾತ್ರೆ ಮೂಲಕ ಇರುಳನ್ನು ಬೆಳಕಾಗಿಸುತ್ತಿತ್ತು. ಇದಕ್ಕೆ ಹಲವು ಕಲಾವಿದರು ಹಗಲಿರುಳು ಎಂದು ದುಡಿಯುತ್ತಿದ್ದರು. ಸರಳ ದಸರಾ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಹಲವು ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮ ಇರುವುದಿಲ್ಲ: ಈ ಬಾರಿ ಕರಗ ಉತ್ಸವ ಹಾಗೂ ಶೋಭಾಯಾತ್ರೆ ಹೊರತು ಪಡಿಸಿದರೆ ಯಾವುದೇ ಸಭಾ ಕಾರ್ಯಕ್ರಮ ನಡೆಯುವುದಿಲ್ಲ. ಇತ್ತೀಚೆಗೆ ಮಡಿಕೇರಿ ದಸರಾ ಸಮಿತಿಯಿಂದ ವಿವಿಧ ಉಪ ಸಮಿತಿಗಳನ್ನು ಮಾಡಲಾಗಿತ್ತು. ಆದರೆ ಸರಳ ದಸರಾ ಹಿನ್ನೆಲೆಯಲ್ಲಿ ಈ ವರ್ಷ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮವೂ ಇರುವುದಿಲ್ಲ.

ಮಡಿಕೇರಿ ದಸರಾ ಈ ಬಾರಿಯೂ ಸರಳ ರೀತಿಯಲ್ಲಿ ನಡೆಯುವ ಬಗ್ಗೆ ಈಗಾಗಲೇ ನಿರ್ಧಾರ ಆಗಿದೆ. ಶೋಭಾಯಾತ್ರೆ ವೇಳೆ ಒಂದು ಟ್ಯಾಕ್ಟರ್‌ ಹಾಗೂ ವಾಹನಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಇದಲ್ಲದೆ ವಾದ್ಯಗೋಷ್ಠಿಗೆ ಅವಕಾಶ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಧಾರ ಆಗಲಿದೆ.

- ಉಮೇಶ್‌ ಸುಬ್ರಮಣಿ, ಅಧ್ಯಕ್ಷರು ದಶ ಮಂಟಪ ಸಮಿತಿ ಮಡಿಕೇರಿ ದಸರಾ.

ಈ ಬಾರಿ ಸರಳ ದಸರಾ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂಟಪದಲ್ಲಿ ಯಾವುದೇ ಕಥಾ ಸಾರಾಂಶ ಇರುವುದಿಲ್ಲ. ಮಂಟಪದಲ್ಲಿ ದೇವರ ಮೂರ್ತಿಯನ್ನು ಇಟ್ಟು ಶೋಭಾಯಾತ್ರೆ ಮಾಡುತ್ತೇವೆ.

- ಸುನಿಲ್‌, ಕಲಾವಿದ, ಮಡಿಕೇರಿ.

ದಸರಾ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ನಗರದಲ್ಲಿ ಸ್ವಚ್ಛತಾ ಕೆಲಸ ನಡೆಯುತ್ತಿದೆ. ಪಂಪಿನ ಕೆರೆ, ವಿವಿಧ ದೇವಾಲಯಗಳ ಸಮೀಪ, ಪ್ರಮುಖ ರಸ್ತೆಗಳಲ್ಲಿ ಸುಮಾರು 40 ಮಂದಿ ಪೌರ ಕಾರ್ಮಿಕರು ಸ್ವಚ್ಛತೆಯಲ್ಲಿ ತೊಡಗಿದ್ದಾರೆ

- ರಾಮದಾಸ್‌, ಪೌರಯುಕ್ತ ಮಡಿಕೇರಿ ನಗರಸಭೆ.

click me!