ಪ್ರಯಾಣಿಕರಿಗೆ ಅನುಕೂಲ: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ಸೇವೆ

By Suvarna NewsFirst Published Jan 12, 2020, 1:29 PM IST
Highlights

ಬೆಳಗ್ಗೆ 5 ರಿಂದ ರಾತ್ರಿ 10ರ ವರೆಗೆ ಈ ಸೇವೆ ಲಭ್ಯ| 1.6 ಕಿ.ಮೀಗೆ 28 ರು. ದರ ನಿಗದಿ| ಏಳು ವರ್ಷದ ಹಿಂದೆ ಹಳೆಯ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ಸೇವೆ ಪ್ರಾರಂಭಿಸಲಾಗಿತ್ತು| ಕೆಲವೇ ದಿನಗಳಲ್ಲಿ ಅವು ಬಾಗಿಲು ಮುಚ್ಚಿದ್ದವು|

ಹುಬ್ಬಳ್ಳಿ(ಜ.12): ನಗರದ ರೈಲ್ವೆ ನಿಲ್ದಾಣದಿಂದ ಮತ್ತೆ ಪ್ರಿ-ಪೇಯ್ಡ್ ಆಟೋ ಸೇವೆ ಪ್ರಾರಂಭವಾಗಿದೆ. ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡ್ ಚಾಲನೆ ನೀಡಿದ್ದಾರೆ. 

ಬೆಂಗಳೂರು ಮೂಲದ ಪ್ರಿ-ಪೇಯ್ಡ್ ಆಟೋ ಮತ್ತು ಟ್ಯಾಕ್ಸಿ ಸರ್ವಿಸ್ ಈ ಸೌಲಭ್ಯವನ್ನು ಕಲ್ಪಿಸುತ್ತಿದೆ. ಪೊಲೀಸರು ಮೇಲ್ವಿಚಾರಣೆ ಮಾಡಲಿದ್ದಾರೆ. ಬೆಳಗ್ಗೆ 5 ರಿಂದ ರಾತ್ರಿ 10 ರ ವರೆಗೆ ಈ ಸೇವೆ ಲಭ್ಯವಿರುತ್ತದೆ. 1.6 ಕಿ.ಮೀಗೆ 28 ರು. ದರ ನಿಗದಿಪಡಿಸಲಾಗಿದೆ. ನಗರದೊಳಗಿನ ಎಲ್ಲ ಸ್ಥಳಗಳಿಗೆ ಮತ್ತು ಧಾರವಾಡ ಎಸ್‌ಡಿಎಂ ವೈದ್ಯಕೀಯ ಕಾಲೇಜುವರೆಗೆ ಸೇವೆಗಳನ್ನು ಒದಗಿಸಲಿದ್ದಾರೆ. ಇಲ್ಲಿನ ರೈಲ್ವೆ ನಿಲ್ದಾಣದ ಎದುರಿಗೆ ಕಾರ್ಯನಿರ್ವಹಿಸಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಚಾಲನೆ ನೀಡಿದ ಅರವಿಂದ ಮಾಲಖೇಡ್ ಮಾತನಾಡಿ, ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಿಪೇಯ್ಡ್ ಆಟೋ ಹಾಗೂ ಟ್ಯಾಕ್ಸಿ ಸೇವೆ ಕಲ್ಪಿಸಲಾಗುತ್ತಿದೆ. ಪ್ರಯಾಣಿಕರಿಂದ ದುಪ್ಪಟ್ಟು ಚಾರ್ಜ್ ವಸೂಲಿ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರಿಗೆ ಸುರಕ್ಷತೆಯ ಮನೋಭಾವವೂ ಇದರಲ್ಲಿರುತ್ತದೆ ಎಂದರು. 

ಈ ವೇಳೆ ವಿಭಾಗೀಯ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಸೆಂಥಿಲ್‌ಕುಮಾರ್, ಆರ್‌ಪಿಎಫ್ ವಿಭಾಗೀಯ ಭದ್ರತಾ ಆಯುಕ್ತ ವಲ್ಲೇಶ್ವರ ಟೋಕ್ಲಾ, ಪ್ರಿಪೇಯ್ಡ್ ಸರ್ವೀಸ್ ನೀಡುವ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಹಲವರಿದ್ದರು. 

ಹಿಂದೆ ಆದಂತೆ ಆಗದಿರಲಿ: 

ಹಿಂದೆ ಏಳು ವರ್ಷದ ಹಿಂದೆ ಹಳೆಯ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ಸೇವೆ ಪ್ರಾರಂಭಿಸಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಅವು ಬಾಗಿಲು ಮುಚ್ಚಿದ್ದವು. ಸಾರ್ವಜನಿಕರಿಗೆ ಸರಿಯಾದ ಸೇವೆಯನ್ನೇ ನೀಡಿರಲಿಲ್ಲ. ಪೊಲೀಸ್ ಇಲಾಖೆ ಕೂಡ ಅದರ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ನಗರದಲ್ಲಿ ಆಟೋ ಸೇವೆಯೆಂದರೆ ದುಪ್ಪಟ್ಟು ದರ ತೆತ್ತಲೇಬೇಕೆಂಬ ಭಾವನೆ ಸಾರ್ವಜನಿಕರಲ್ಲಿದೆ. ಇದೀಗ ರೈಲ್ವೆ ನಿಲ್ದಾಣದಲ್ಲಿ ತೆರೆದಿರುವ ಪ್ರಿಪೇಯ್ಡ್ ಆಟೋ ಸೇವೆ ಕೂಡ ಅದೇ ರೀತಿ ಆಗದಿರಲಿ. ಜೊತೆಗೆ ಬಸ್ ನಿಲ್ದಾಣಗಳಲ್ಲೂ ಪ್ರಿಪೇಯ್ಡ್ ಆಟೋ ಸೇವೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.
 

click me!