ಚಿಕ್ಕಮಗಳೂರು : ಸಂಭ್ರಮದ ಮನೆಯಲ್ಲಿ ಸೂತ: ಸ್ವಚ್ಛತೆ ವೇಳೆ ವಿದ್ಯುತ್ ಸ್ಪರ್ಶಿಸಿ ಗರ್ಭಿಣಿ ದಾರುಣ ಸಾವು

By Suvarna News  |  First Published Oct 14, 2022, 11:12 AM IST

Chikkamagaluru News: ಮನೆಯ ಗೃಹ ಪ್ರವೇಶದ ಸಲುವಾಗಿ ಸ್ವಚ್ಛತಾ ಕೆಲಸ ಮಾಡುವ ವೇಳೆ ವಿದ್ಯುತ್ ಅವಘಡ ಸಂಭವಿಸಿದ್ದು, ಗರ್ಭಿಣಿ ಮಹಿಳೆ ಅವಘಡಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್,  ಚಿಕ್ಕಮಗಳೂರು

ಚಿಕ್ಕಮಗಳೂರು (ಅ. 14): ಮನೆಯ ಗೃಹ ಪ್ರವೇಶದ ಸಲುವಾಗಿ ಸ್ವಚ್ಛತಾ ಕೆಲಸ ಮಾಡುವ ವೇಳೆ ವಿದ್ಯುತ್ ಅವಘಡ ಸಂಭವಿಸಿದ್ದು, ಗರ್ಭಿಣಿ ಮಹಿಳೆ ಅವಘಡಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಸಾಕ್ಷಿಯಾಗಿದೆ.  ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹೊಸ ಪಟ್ಟಣ ಸಮೀಪದ ಮನೆಯ ಗೃಹ ಪ್ರವೇಶಕ್ಕಾಗಿ ಮನೆಯನ್ನು ಸ್ವಚ್ಚಗೊಳಿಸುತ್ತಿದ್ದ ವೇಳೆ ವಿದ್ಯುತ್ ಶಾಕ್‌ನಿಂದ ಗರ್ಭಿಣಿ ಮಹಿಳೆ ಮೃತಪಟ್ಟಿದ್ದರೆ, ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಂಗರವಳ್ಳಿ ಗ್ರಾಮದಲ್ಲಿ ನಡೆದಿದೆ. ಹೊನ್ನೆಕುಡಿಗೆ ಗ್ರಾಮದ ಸಾಲೂರಿನ ನಿವಾಸಿ ಸಂಧ್ಯಾ (25) ಮೃತ ಮಹಿಳೆ. 

Tap to resize

Latest Videos

ಇಲ್ಲಿನ ಹಂಗರವಳ್ಳಿ ಗ್ರಾಮದ ನಿವಾಸಿ ಮಹೇಶ್ ಆಚಾರ್ಯ ಅವರು ತಮ್ಮ ಹೊಸ ಮನೆಯ ಗೃಹ ಪ್ರವೇಶದ ಸಂಭ್ರಮದಲ್ಲಿ ಸಿದ್ಧತೆಗಳನ್ನು ಕೈಗೊಂಡಿದ್ದು, ಶುಕ್ರವಾರ ಮನೆಯ ಗೃಹಪ್ರವೇಶವಿತ್ತು. ಇದಕ್ಕಾಗಿಯೆ ಸ್ವಚ್ಛತಾ ಕಾರ್ಯಗಳನ್ನು ಕುಟುಂಬಸ್ಥರು ಮಾಡುತಿದ್ದರು. ಮಹೇಶ್‌ ಆಚಾರ್ಯ ಅವರ ತಮ್ಮನ ಹೆಂಡತಿಯ ತಂಗಿ, ನರಸಿಂಹರಾಜಪುರ ತಾಲೂಕಿನ ಹೊನ್ನೆಕುಡಿಗೆ ಗ್ರಾಮದ ಸಾಲೂರಿನ ನಿವಾಸಿ ಪ್ರಸನ್ನ ಅವರ ಪತ್ನಿ ಸಂಧ್ಯಾ (25) ಮೃತ ಮಹಿಳೆ. ಕಳೆದ ಒಂದು ವರ್ಷದ ಹಿಂದೆ ಇವರಿಗೆ ಮದುವೆಯಾಗಿದ್ದು ಮೃತ ಸಂಧ್ಯಾ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. 

Bengaluru Rains: ವಿದ್ಯುತ್ ಸ್ಪರ್ಶಿಸಿ ಯುವತಿ ಬಲಿ; ಬೆಸ್ಕಾಂ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾವು..?

ಸಂಧ್ಯಾರವರ ಈ ದಾರುಣ ಅಂತ್ಯದಿಂದ ಗ್ರಾಮದಲ್ಲಿ  ಸೂತಕದ ವಾತಾವರಣ ನಿರ್ಮಾಣವಾಗಿದ್ದು ಕುಟುಂಬಸ್ಥರು ಅತೀವ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹಂಗರವಳ್ಳಿ ಗ್ರಾಮದ ನಿವಾಸಿ ಮಹೇಶ್ ಆಚಾರ್ಯ ಮರಗೆಲಸ ವೃತ್ತಿ ಮಾಡುತ್ತಿದ್ದಾರೆ. ಇಂದು ಇವರ ಮನೆಯ ಗೃಹಪ್ರವೇಶದ ನಿಮಿತ್ತವಾಗಿ ಮನೆಯ ಗೃಹ ಪ್ರವೇಶಕ್ಕೆ ಬಂದಿದ್ದ ಸಂಧ್ಯಾ ಹಾಗೂ ಮನೆಯವರು ಸೇರಿ ಬುಧವಾರ ಹಳೆಯ ಮನೆಯ ಹತ್ತಿರ ಸ್ವಚ್ಚಗೊಳಿಸುತ್ತಿದ್ದ ಸಂಧರ್ಭ ಮರ ಕತ್ತರಿಸುವ ಪ್ಲೇಮಿಂಗ್ ಮಷಿನನ್ನು ಬೇರೆಡೆಗೆ ಸ್ಥಳಾಂತರಿಸುವ ಸಮಯದಲ್ಲಿ ತುಂಡಾಗಿದ್ದ ವಿದ್ಯುತ್  ವೈರ್‌ನಿಂದ ವಿದ್ಯುತ್ ಹರಿದು ತೀವ್ರ ವಿದ್ಯುತ್ ಶಾಕ್‌ಗೆ ಒಳಗಾಗಿದ್ದ ಸಂಧ್ಯಾ ಅವರನ್ನು ಕಾರಿನಲ್ಲಿ ಚಿಕ್ಕಮಗಳೂರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. 

ಇವರ ಜೊತೆ ಕೆಲಸ ಮಾಡುತ್ತಿದ್ದ ಸಂಧ್ಯಾ ಅವರ ಅಕ್ಕ ಶಾಲಿನಿ, ತಾಯಿ ಕಮಲಾಕ್ಷಿ, ಮಹೇಶ್ ಆಚಾಯ ಅವರ ಚಿಕ್ಕಮ್ಮ ಲಕ್ಷ್ಮಿ, ತಮ್ಮ ದಿನೇಶ್ ಆಚಾರ್ಯ ಅವರಿಗೆ ತೀವ್ರ ಗಾಯಗಳಾಗಿದ್ದು ಇವರನ್ನು ಚಿಕ್ಕಮಗಳೂರು ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಿನಿ ಹಾಗೂ ಕಮಲಾಕ್ಷಿ ಅವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.ಮೃತ ಸಂಧ್ಯಾ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಯನ್ನು ಜಿಲ್ಲಾ ಆಸ್ಪತ್ರೆ ಯಲ್ಲಿ ನಡೆಸಿ ಮೃತದೇಹವನ್ನು ಹಸ್ತಾಂತರ ಮಾಡಲಾಯಿತು.ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ತಹಸೀಲ್ದಾರ್ ವಿನಯ್ ಸಾಗರ್ , ಆಲ್ದೂರು ಪಿಎಸ್‌ಐ ಸಜಿತ್‌ಗೌಡ, ಎಎಸ್‌ಐ ಪರಮೇಶ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

click me!