ತುಂಗಭದ್ರಾ ಹಾಗೂ ವರದಾ ನದಿಯ ಪ್ರವಾಹಕ್ಕೆ ಮೆಕ್ಕೆಜೋಳ, ಹತ್ತಿ, ಮೆಣಸಿಕಾಯಿ, ಟೊಮ್ಯಾಟೋ, ಮುಳುಗಾಯಿ, ಸೌತೆ, ರೇಷ್ಮೆ, ಶೇಂಗಾ, ಅಡಕೆ, ಪೇರಲ, ಚಿಕ್ಕು, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಜಲಾವೃತವಾಗಿ ಹಾನಿಗೆ ಒಳಗಾಗಿವೆ.
ಹಾವೇರಿ/ಗುತ್ತಲ(ಜು.17): ಮಳೆಯಬ್ಬರ ಕಡಿಮೆಯಾಗಿದ್ದರೂ ಜಿಲ್ಲೆಯಲ್ಲಿ ಹರಿಯುತ್ತಿರುವ ನದಿಗಳು ಉಕ್ಕೇರಿ ಹರಿಯುತ್ತಿವೆ. ಇದರಿಂದ ತುಂಗಭದ್ರಾ ಹಾಗೂ ವರದಾ ನದಿಗಳ ಅಬ್ಬರದಿಂದಾಗಿ ತಾಲೂಕಿನ ಗುತ್ತಲ ಹೋಬಳಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು ಸಾವಿರಾರು ಎರಕೆ ಪ್ರದೇಶದಲ್ಲಿನ ಬೆಳೆ ಜಲಾವೃತಗೊಂಡಿವೆ. ಶುಕ್ರವಾರ ರಾತ್ರಿಯಿಂದಲೇ ತುಂಗಭದ್ರಾ ನದಿಯ ಅಪಾಯ ಮಟ್ಟಮೀರಿ ಹರಿಯುತ್ತಿದ್ದು ಶನಿವಾರ ಸಂಜೆ ನದಿಯ ನೀರಿನ ಮಟ್ಟ 8 ಮೀ. ತಲುಪಿದ್ದು ಅನೇಕ ಗ್ರಾಮಗಳ ಸಂಚಾರ ಸ್ಥಗಿತಗೊಂಡಿದೆ. ವರದಾ ನದಿ ಪ್ರವಾಹದಿಂದ ಕೆಲವು ಸೇತುವೆಗಳು ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದೆ.
ಚೌಡಯ್ಯದಾನಪುರ- ಕಂಚಾರಗಟ್ಟಿ ರಸ್ತೆ ಸಂಚಾರ ಬಂದ್ ಆಗಿದೆ. ತುಂಗಭದ್ರಾ ನದಿಯ ಅಬ್ಬರಕ್ಕೆ ಕಂಚಾರಗಟ್ಟಿ, ನರಶೀಪುರ, ಹರಳಹಳ್ಳಿ, ಹಾವನೂರ, ಹುರಳಿಹಾಳ, ಗಳಗನಾಥ, ಗುಯಿಲಗುಂದಿ, ಮೇವುಂಡಿ ಹಾಗೂ ತೆರೆದಹಳ್ಳಿ ಗ್ರಾಮಗಳ ಸಾವಿರಾರು ಎಕರೆ ಪ್ರದೇಶ ಜಲಾವೃತಗೊಂಡಿದೆ.
undefined
ಕೊಪ್ಪಳ: ತುಂಗಭದ್ರಾ ನದಿಯಲ್ಲಿ ನೀರುನಾಯಿಗಳ ಚೆಲ್ಲಾಟ
ಇನ್ನು ವರದಾ ನದಿಯ ಗಳಗನಾಥ ಗ್ರಾಮದ ಬಳಿ ತುಂಗಭದ್ರಾ ನದಿಯೊಂದಿಗೆ ಸಂಗಮವಾದ ಸ್ಥಳವಾಗಿದ್ದು ಈ ಸಂಗಮ ಸ್ಥಳದ ಹಿಂಭಾಗದಲ್ಲಿ ಬರುವ ಗಳಗನಾಥ, ಬೆಳವಿಗಿ, ನೀರಲಗಿ, ಮರೋಳ, ಹಾಲಗಿ, ಮರಡೂರ, ಅಕ್ಕೂರ, ಹೊಸರಿತ್ತಿ, ಕಿತ್ತೂರ, ಕೆಸರಳ್ಳಿ, ಕೋಣನತಂಬಿಗಿ, ಹಂದಿಗನೂರ ಗ್ರಾಮಗಳಲ್ಲಿನ ಸಾವಿರಾರು ಎಕರೆ ಪ್ರದೇಶ ವರದಾ ನದಿಯ ಪಾಲಾಗಿವೆ.
ತುಂಗಭದ್ರಾ ಹಾಗೂ ವರದಾ ನದಿಯ ಪ್ರವಾಹಕ್ಕೆ ಮೆಕ್ಕೆಜೋಳ, ಹತ್ತಿ, ಮೆಣಸಿಕಾಯಿ, ಟೊಮ್ಯಾಟೋ, ಮುಳುಗಾಯಿ, ಸೌತೆ, ರೇಷ್ಮೆ, ಶೇಂಗಾ, ಅಡಕೆ, ಪೇರಲ, ಚಿಕ್ಕು, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಜಲಾವೃತವಾಗಿ ಹಾನಿಗೆ ಒಳಗಾಗಿವೆ. ಕೃಷಿ ಮತ್ತು ತೋಟಗಾರಿಕೆಯ ಎರಡು ಬೆಳೆಗಳು ಸೇರಿ ಸುಮಾರು 3 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾದ ಬಗ್ಗೆ ಅಂದಾಜಿಸಲಾಗಿದೆ.
ಪ್ರವಾಹದಲ್ಲಿ ಸಿಲುಕಿರುವ ನವಿಲುಗಳು:
ಗುತ್ತಲ ಹೋಬಳಿಯ ಅಕ್ಕೂರ ಗ್ರಾಮದಲ್ಲಿ ಅನೇಕ ನವಿಲುಗಳು ಪ್ರವಾಹದ ಮಧ್ಯ ಸಿಲುಕಿದ್ದು, ಶುಕ್ರವಾರದಿಂದ ಅವುಗಳು ಹೆಚ್ಚಾಗಿ ಕೂಗುತ್ತಿದ್ದು, ಅವುಗಳಿಗೆ ಆಹಾರದ ಕೊರೆತೆ ಇರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ಡಿಸಿಎಫ್ ಬಾಲಕೃಷ್ಣ ಅವರು ನವಿಲುಗಳಿಗೆ ಆಹಾರ ಒದಗಿಸುವ ಅಥವಾ ರಕ್ಷಣೆಗೆ ಕ್ರಮಕೈಗೊಳ್ಳುವುದಾಗಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಹಾಲಗಿ- ಮರೋಳ ಮಧ್ಯದ ವರದಾ ಸೇತುವೆ ಮೇಲೆ ಅಪಾರ ಪ್ರಮಾಣ ನೀರು ಹರಿಯುತ್ತಿದ್ದರೂ ಸಹ ಅಪಾಯವನ್ನು ಲೆಕ್ಕಿಸದೇ ಸೇತುವೆ ದಾಟುತ್ತಿರುವ ಜನರು, ಸೆಲ್ಪಿ ತೆಗೆದುಕೊಳ್ಳುವಲ್ಲಿ ನಿರತಾಗಿದ್ದ ಯುವಕ- ಯುವತಿಯರಿಗೆ ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಮಂತ ಹದಗಲ್ ಎಚ್ಚರಿಕೆ ನೀಡಿ ಸೇತುವೆ ಸಂಚಾರಕ್ಕೆ ನಿರ್ಭಂದಿಸಿದರು. ಅನೇಕರು ಇವರ ಮಾತನ್ನು ಲೆಕ್ಕಿಸದೇ ಸಂಚಾರವನ್ನು ಮುಂದೆವರೆಸಿದಾಗ ಗುತ್ತಲ ಠಾಣೆಯ ಪೊಲೀಸರಿಗೆ ದೂರವಾಣಿ ಮೂಲಕ ಪರಿಸ್ಥಿತಿಯನ್ನು ತಿಳಿಸಿ ಸಂಚಾರ ನಿರ್ಭಂದಿಸುವಂತೆ ವಿನಂತಿಸಿದರು.
ಶುಕ್ರವಾರ ಸಂಜೆಯ ವರೆಗೆ ಗುತ್ತಲ ಹೋಬಳಿಯಲ್ಲಿ ಪ್ರಮುಖ ಬೆಳೆಗಳಾದ ಹತ್ತಿ 450 ಹೆಕ್ಟೇರ್, ಮೆಕ್ಕೆಜೋಳ 300 ಹೆಕ್ಟೇರ್ ನಷ್ಟುಹಾನಿಯಾಗಿದ್ದು ಇನ್ನೂ ಅನೇಕ ಬೆಳೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು ಹಾನಿ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಎಲ್ಲ ಬೆಳೆಗಳು ಸೇರಿ ಸುಮಾರು 1 ಸಾವಿರದಿಂದ 1500 ಹೆಕ್ಟೇರ್‌ನಷ್ಟು ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದ್ದು. ಇನ್ನೆರಡು ದಿನಗಳಲ್ಲಿ ಹಾನಿ ಪ್ರಮಾಣ ನಿಖರವಾಗಿ ತಿಳಿಯಲಿದೆ ಅಂತ ಗುತ್ತಲ ಆರ್‌ಎಸ್‌ಕೆ ಕೃಷಿ ಅಧಿಕಾರಿ ಪುಟ್ಟರಾಜ ಹಾವನೂರ ತಿಳಿಸಿದ್ದಾರೆ.
ಸೇತುವೆ ಮುಳುಗಡೆ, ಪರದಾಡಿದ ಗರ್ಭಿಣಿ
ಗುತ್ತಲ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಹಿನ್ನೆಲೆ ವರದಾ ನದಿಯ ಪ್ರವಾಹ ಹೆಚ್ಚಾಗಿ ಶನಿವಾರ ಬೆಳಗ್ಗೆಯಿಂದ ಬೆಳವಗಿ- ನೀರಲಗಿ ಮಧ್ಯೆದ ಸೇತುವೆ ಮುಳುಗಡೆಯಾಗಿದ್ದು ಗರ್ಭಿಣಿಯೋರ್ವಳು ನೀರಿನಲ್ಲಿಯೇ ಆಶಾ ಕಾರ್ಯಕರ್ತೆಯೊಂದಿಗೆ ಮುಳುಗಡೆಯಾಗಿರುವ ಸೇತುವೆಯಲ್ಲಿಯೇ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಕೋಲಾರ ಜಿಲ್ಲೆಗೆ ಅವಧಿಗೂ ಮುನ್ನವೇ ಮುಂಗಾರು ಮಳೆ ಆಗಮನ!
ಸಮೀಪದ ಗುಯಿಲಗುಂದಿ ಗ್ರಾಮದ ದೀಪಾ ಭೀಮಪ್ಪ ದೊಡ್ಮನಿ ಎಂಬ ಗರ್ಭಿಣಿಯೋರ್ವಳು ಹೆರಿಗೆ ನೋವಿನಿಂದ ಬಳಲುತ್ತಿರುವಾಗ ಮನೆಯವರು ದಿಕ್ಕು ತೋಚದಂತಾಗಿದ್ದಾರೆ. ಹೆರಿಗೆ ನೋವು ಹೆಚ್ಚಾಗಿದ್ದರಿಂದ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ವಾಹನ ಬರುವಂತೆ ಕೋರಿದ್ದಾರೆ. ಬೆಳವಗಿ ಗ್ರಾಮದ ಸೇತುವೆಯ ಮೇಲೆ ವಾಹನ ಚಲಾಯಿಸಲು ಆಗದೇ ಇರುವುದನ್ನು ಗಮನಿಸಿದ ಆ್ಯಂಬುಲೆನ್ಸ್ ಸಿಬ್ಬಂದಿ ಹಾಗೂ ಅಶಾ ಕಾರ್ಯಕರ್ತೆ ಗೀತಾ ಬದನೆಕಾಯಿ ಗರ್ಭಿಣಿಗೆ ಧೈರ್ಯ ತುಂಬಿ ನದಿಯನ್ನು ಜಾಗರೂಕತೆಯಿಂದ ನಡೆದು ಸಾಗಲು ತಿಳಿಸಿ ಅವಳನ್ನು ಜಾಗರೂಕತೆಯಿಂದ ನದಿ ದಾಟಿಸುವಲ್ಲಿ ಯಶಸ್ವಿಯಾಗಿದ್ದು, ಕೂಡಲೇ ಅವಳನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಆಶಾ ಕಾರ್ಯಕರ್ತೆ ಹಾಗೂ ಆ್ಯಂಬುಲೆನ್ಸ್ ಫೈಲೆಟ್ ಬಸವರಾಜ ಗೊರವರ, ಇಎಂಟಿ ಅರುಣಕುಮಾರ ಸನದಿ ಅವರಿಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.
ಸುಮಾರು 3-4 ವರ್ಷಗಳಿಂದ ಬೆಳವಗಿ- ನೀರಲಗಿ ಗ್ರಾಮದ ಸೇತುವೆ ಮುಳುಗಡೆಯಾಗಿ ಜನತೆ ಕಷ್ಟವನ್ನು ಎದುರಿಸುತ್ತಿದ್ದು. ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಶ್ವತ ಪರಿಹಾರ ದೊರಕಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ. ನೆರೆಯಿಂದ ಗ್ರಾಮೀಣ ಭಾಗದ ಜನರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸುವರೆ ಎಂದು ಜಾತಕ ಪಕ್ಷಿಯಂತೆ ಕಾಯುವಂತಾಗಿದೆ ಅಂತ ಗುಯಿಲಗುಂದಿ ಗ್ರಾಮಸ್ಥ ಬಾಬಾಕಲಂದರ ತೊಂಡುರ ತಿಳಿಸಿದ್ದಾರೆ.