
ರಾಯಚೂರು: ಇನ್ನೇನು 4 ತಿಂಗಳು ಕಳೆದಿದ್ದರೆ ಆ ಮನೆಯಲ್ಲಿ ಮಗು ಅಳುವ ಸದ್ದು ಕೇಳುತ್ತಿತ್ತು. ನಾನು ತಾಯಿಯಾಗುತ್ತೇನೆ ಎಂಬ ಖುಷಿಯಲ್ಲಿದ್ದಳು ಆಕೆ. ಆದರೆ ಇಂದು ಆಕೆಯೂ ಇಲ್ಲ ಮಗುವೂ ಇಲ್ಲ. ತನ್ನ ವಂಶದ ಕುಡಿ ಹುಟ್ಟುವ ಮುನ್ನವೇ ಮಾವನಾದವನು ಗರ್ಭಿಣಿಯನ್ನು ಯಾರೂ ಇಲ್ಲದ ವೇಳೆ ಕತ್ತು ಹಿಸುಕಿ ಕೊಂದಿದ್ದಾನೆ. ಸಾಯುವ ಮುನ್ನ ತನ್ನ ಜೀವ, ಮಗುವಿನ ಜೀವ ಉಳಿಸಿಕೊಳ್ಳಲು ಆಕೆ ಮನೆಯೊಳಗಿಂದ ನರಳುತ್ತಾ ಬಂದು ಜಗಲಿಯಲ್ಲಿ ವಿಲ ವಿಲ ಒದ್ದಾಡಿ ಪ್ರಾಣಬಿಟ್ಟಿದ್ದಾಳೆ. ಇಡೀ ಗ್ರಾಮವೇ ಆಕೆಯ ಸಾವಿಗೆ ಮರುಕ ಪಡುತ್ತಿದೆ. ಇದು ನಡೆದಿರುವುದು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಚಿಕ್ಕಹಣಗಿ ಗ್ರಾಮದಲ್ಲಿ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗರ್ಭಿಣಿ ಸೊಸೆಯನ್ನು ಮಾವನೇ ಕತ್ತು ಸೀಳಿ ಕೊಂದು ಹಾಕಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮೃತ ದುರ್ದೈವಿಯನ್ನು ರೇಖಾ ನಾಗರಾಜ (24) ಎಂದು ಗುರುತಿಸಲಾಗಿದ್ದು, ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು. ಆರೋಪಿ ಮಾವ ಸಿದ್ದಪ್ಪ (50) ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ಗಮನಿಸಿ ಚಾಕುವಿನಿಂದ ಸೊಸೆಯ ಕುತ್ತಿಗೆಗೆ ಇರಿದು, ಬಳಿಕ ಮುಖಕ್ಕೂ ಚಾಕು ಚುಚ್ಚಿ ಪರಾರಿಯಾಗಿದ್ದ ಬಳಿಕ ಆತನನ್ನು ಬಂಧಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ರೇಖಾ ಪ್ರಾಣ ಉಳಿಸಿಕೊಳ್ಳುವ ಉದ್ದೇಶದಿಂದ ಮನೆಯಿಂದ ನರಳುತ್ತಾ ಹೊರಬಂದಿದ್ದಾಳೆ. ಬಳಿಕ ಮನೆ ಮುಂದೆ ಇರುವ ಕಟ್ಟೆಯ ಮೇಲೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ದೃಶ್ಯ ಕಂಡ ಗ್ರಾಮಸ್ಥರು ಕಣ್ಣೀರು ಸುರಿಸಿದ್ದಾರೆ.
ಸುಮಾರು ಮೂರು ವರ್ಷಗಳ ಹಿಂದೆ ರೇಖಾ ಹಾಗೂ ನಾಗರಾಜ್ ವಿವಾಹವಾಗಿತ್ತು. ಆರಂಭದಲ್ಲಿ ಗಂಡನ ಮನೆಯವರು ರೇಖಾವನ್ನು ಚೆನ್ನಾಗಿ ನೋಡಿಕೊಂಡಿದ್ದರು. ಆದರೆ ಆರು ತಿಂಗಳ ನಂತರ ಹೊಲ ಹಾಗೂ ಮನೆ ಕೆಲಸದ ವಿಚಾರವಾಗಿ ಅತ್ತೆ-ಮಾವನೊಂದಿಗೆ ಆಗಾಗ ಜಗಳ ಉಂಟಾಗುತ್ತಿತ್ತು. ಈ ಕಾರಣದಿಂದ ರೇಖಾ ಮತ್ತು ನಾಗರಾಜ್ ಚಿಕ್ಕಹಣಗಿಯಿಂದ ಹಿರೇಹಣಗಿಗೆ ತೆರಳಿ ಪ್ರತ್ಯೇಕವಾಗಿ ವಾಸವಿದ್ದರು.
ರೇಖಾ ಗರ್ಭಿಣಿಯಾಗಿರುವುದು ತಿಳಿದ ನಂತರ, ಅತ್ತೆ-ಮಾವರು “ಬೇರೆ ಮನೆ ಏಕೆ? ನಮ್ಮ ಮನೆಗೆ ಬನ್ನಿ” ಎಂದು ಹೇಳಿ ಅವರನ್ನು ಮತ್ತೆ ಚಿಕ್ಕಹಣಗಿಗೆ ಕರೆದುಕೊಂಡು ಬಂದಿದ್ದರು. ಆದರೆ ಇತ್ತೀಚೆಗೆ ಮತ್ತೆ ಹೊಲ-ಮನೆ ಕೆಲಸದ ವಿಚಾರವಾಗಿ ಸೊಸೆ ಮತ್ತು ಮಾವನ ನಡುವೆ ಜಗಳ ಹೆಚ್ಚಾಗಿತ್ತು. ನಿನ್ನೆ ಕೂಡ ಸಣ್ಣ ವಿಷಯಕ್ಕೆ ಜಗಳ ನಡೆದು, ಅದೇ ಜಗಳವು ಭೀಕರ ಅಂತ್ಯ ಕಂಡಿದೆ.
5 ತಿಂಗಳ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೇ, ಮಾವ ಸಿದ್ದಪ್ಪ ಸೊಸೆಯ ಮೇಲೆ ಚಾಕುವಿನಿಂದ ದಾಳಿ ನಡೆಸಿ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾನೆ. ಮಾಹಿತಿ ತಿಳಿದ ಕೂಡಲೇ ರೇಖಾ ತವರು ಮನೆಯವರು ಸ್ಥಳಕ್ಕೆ ಧಾವಿಸಿದ್ದು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆಯ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯಾದ ರೇಖಾಳ ಮಾವ ಸಿದ್ದಪ್ಪ, ಗಂಡ ನಾಗರಾಜ್ ಹಾಗೂ ಅತ್ತೆ ಬಸಮ್ಮ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದಾರೆ. ಸದ್ಯ ಆರೋಪಿ ಸಿದ್ದಪ್ಪನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ. ತನಿಖೆಯ ನಂತರ ಕೊಲೆಗೆ ನಿಖರ ಕಾರಣ ತಿಳಿಯಲಿದೆ ಎಂದು ಡಿಎಸ್ಪಿ ಚಂದ್ರಶೇಖರ ಮಾಹಿತಿ ನೀಡಿದ್ದಾರೆ.
ಈ ಘಟನೆ ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಗರ್ಭಿಣಿ ಮಹಿಳೆಯ ಮೇಲಿನ ಈ ಅಮಾನವೀಯ ಕೃತ್ಯ ಜಿಲ್ಲೆಯಲ್ಲಿ ತೀವ್ರ ಖಂಡನೆಗೆ ಕಾರಣವಾಗಿದೆ.