ಹಫ್ತಾ ನೀಡುವಂತೆ ಗರ್ಭಿಣಿಗೆ ಹೊಟ್ಟೆಗೆ ಒದ್ದು ಗರ್ಭಪಾತವಾಗುವಂತೆ ಮಾಡಿದ ಹೇಯ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು [ಮಾ.16]: ಕಾನೂನ್ಮಾತಕವಾಗಿ ಬಾಡಿಗೆ ತಾಯ್ತನ ಧರಿಸಿದ್ದ ಮಹಿಳೆಯಿಂದ ಹಫ್ತಾ ವಸೂಲಿಗೆ ತೆರಳಿದ್ದ ಮಹಿಳಾ ಸಂಘಟನೆಯ ಕಿಡಿಗೇಡಿಗಳು ಮಹಿಳೆಗೆ ಕಾಲಿನಿಂದ ಒದ್ದು, ಗರ್ಭಪಾತ ಮಾಡಿಸಿರುವ ಹೇಯಕೃತ್ಯ ನಗರದಲ್ಲಿ ನಡೆದಿದೆ.
ಮೈಕೋ ಲೇಔಟ್ ನಿವಾಸಿ 27 ವರ್ಷದ ಸಂತ್ರಸ್ತೆಗೆ ಗರ್ಭಪಾತವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿಗಳಾದ ಬೊಮ್ಮನಹಳ್ಳಿಯ ಸ್ವಾತಿ ಮಹಿಳಾ ಸಂಘಟನೆಯ ಪೂಜಾ, ಪ್ರೇಮಾ, ಆಶಾ, ರೀಟಾ, ಪ್ರಮೀಳಾ ಮತ್ತು ಮಂಜುನಾಥ್ ಎಂಬುವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಬೇಗೂರು ಪೊಲೀಸರು ಹೇಳಿದ್ದಾರೆ.
undefined
ಪಾಲು ನೀಡುವಂತೆ ಬೆದರಿಕೆ:
27 ವರ್ಷದ ಮಹಿಳೆ ಬಡವರಾಗಿದ್ದು, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬಾಡಿಗೆ ತಾಯ್ತನಕ್ಕೆ ಒಪ್ಪಿಕೊಂಡರೆ ತುಸು ಹಣ ಬರಲಿದ್ದು, ಜೀವನ ನಿರ್ವಹಣೆ ಮಾಡಬಹುದು ಎಂಬ ಕಾರಣಕ್ಕೆ ಬಾಡಿಗೆ ತಾಯ್ತನಕ್ಕೆ ಮಹಿಳೆ ಒಪ್ಪಿದ್ದರು. ವಿಶ್ವಾಸ್ ಫರ್ಟಿಲಿಟಿ ಸೆಂಟರ್ ಮೂಲಕ ಬಾಡಿಗೆ ತಾಯಿಯಾಗಿದ್ದರು.
ಮದುರೀಮ ನಾಗ್ ಮತ್ತು ದೀಪಾಂಜನಾಗ್ ದಂಪತಿಯ ಪ್ರನಾಳ ಶಿಶು ವಿಧಾನದಲ್ಲಿ ಗರ್ಭಧರಿಸಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ವಿಶ್ವಾಸ್ ಫರ್ಟಿಲಿಟಿ ಸೆಂಟರ್‌ನ ಬಾಡಿಗೆ ತಾಯಂದಿರನ್ನು ನೋಡಿಕೊಳ್ಳುವ ಸಾಯಿ ಆರ್ಟ್ ಬ್ಯಾಂಕ್ ಸಂಸ್ಥೆಯ ಮಾಲೀಕರಾದ ಗೀತಾ ಅವರ ಪಿ.ಜಿ(ಪೇಯಿಂಗ್ ಗೆಸ್ಟ್)ಯಲ್ಲಿ ಸಂತ್ರಸ್ತೆಯನ್ನು ಪೋಷಣೆ ಮಾಡಲಾಗುತ್ತಿತ್ತು. ಆರೋಪಿಗಳು ಪಿಜಿಗೆ ನುಗ್ಗಿ ನಾವು ಬೊಮ್ಮನಹಳ್ಳಿಯ ‘ಸ್ವಾತಿ ಮಹಿಳಾ ಸಂಘಟನೆ’ ಸದಸ್ಯರು, ಬಾಡಿಗೆ ತಾಯ್ತನಕ್ಕೆ ಪಡೆಯುತ್ತಿರುವ ಹಣದಲ್ಲಿ ತಮಗೂ ಪಾಲು ನೀಡುವಂತೆ (ಹಫ್ತಾ) ಕೇಳಿದ್ದಾರೆ. ಸಂಘಟನೆಗೆ ಹಣ ಕೊಡಲು ಮಹಿಳೆ ನಿರಾಕರಿಸಿದ್ದು, ಈ ವೇಳೆ ಆರೋಪಿತರು ಮಹಿಳೆಗೆ ಗರ್ಭಪಾತ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿದ್ದರು. ಈ ವೇಳೆ ಮಹಿಳೆ ಹೊಟ್ಟೆಪಾಡಿಗೆ ಬಾಡಿಗೆ ತಾಯ್ತನ ಪಡೆದಿದ್ದೇನೆ. ದಯವಿಟ್ಟು, ತೊಂದರೆ ಕೊಡದಂತೆ ಮನವಿ ಮಾಡಿಕೊಂಡಿದ್ದರು. ಆದರೂ ಸುಮ್ಮನಾಗದ ಆರೋಪಿಗಳು ಎಚ್ಚರಿಕೆ ನೀಡಿ ಮತ್ತೆ ಬರುವುದಾಗಿ ಹೇಳಿ ಹೋಗಿದ್ದರು.
ದಾವಣಗೆರೆಯಲ್ಲಿ ಕರೋನಾಕ್ಕೆ ಲಸಿಕೆ, ಹಾಕಿಸಿಕೊಂಡವರೇ ಪುಣ್ಯವಂತರು!..
ಮಾ.11ರಂದು ರಾತ್ರಿ 10 ಗಂಟೆಗೆ ಮತ್ತೊಮ್ಮೆ ಪಿ.ಜಿಗೆ ಬಂದ ಆರೋಪಿಗಳು, ‘ಈ ಮೊದಲು ಹೇಳಿದಂತೆ ಮಾಮೂಲಿ ಕೊಡಬೇಕೆಂದು ಹೇಳಲಾಗಿತ್ತು. ಇಷ್ಟುದಿನಗಳಾದರೂ ಏಕೆ ನೀಡಿಲ್ಲ ಎಂದು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ. ಬಳಿಕ ಆಕೆಯ ಕೂದಲನ್ನು ಹಿಡಿದು ಎಳೆದಾಡಿ ಮನಸೋ ಇಚ್ಛೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಕೆಯ ಮೇಲಿನ ಹಲ್ಲೆ ತಡೆಯಲು ಮುಂದಾದ ಪಿಜಿ ಮುಖ್ಯಸ್ಥೆ ಗೀತಾ ಹಾಗೂ ಇತರೆ ಯುವತಿಯರಿಗೂ ಥಳಿಸಿದ್ದಾರೆ. ಈ ವೇಳೆ ಸಂತ್ರಸ್ತೆ, ತಾನೂ ಗರ್ಭಿಣಿಯಾಗಿದ್ದೇನೆ ಹೊಡೆಯಬೇಡಿ ಎಂದು ಅಂಗಲಾಚಿದರೂ ದುಷ್ಕರ್ಮಿಗಳು, ಆಕೆಯನ್ನು ಬಿಳಿಸಿ ಕಾಲಿನಲ್ಲಿ ಒದ್ದಿದ್ದಾರೆ.
ಈ ವೇಳೆ ಸಂತ್ರಸ್ತೆಗೆ ತೀವ್ರ ರಕ್ತಸ್ರಾವವಾಗಿದ್ದು, ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ಆದರೂ ಬಿಡದ ಆರೋಪಿ ಮಹಿಳೆಯರು ಗರ್ಭಪಾತ ಮಾಡಿಯೇ ಹೋಗುತ್ತೇವೆ ಎಂದು ಕಾಲಿನಿಂದ ಹೊಟ್ಟೆಗೆ ಒದ್ದಿದ್ದಾರೆ. ಪರಿಣಾಮ ಸಂತ್ರಸ್ತೆ ಅರೆಪ್ರಜ್ಞಾ ಸ್ಥಿತಿ ತಲುಪಿಸಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಪಿ.ಜಿ. ಸಿಬ್ಬಂದಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸಂತ್ರಸ್ತೆಯನ್ನು ತಪಾಸಣೆ ನಡೆಸಿದ ವೈದ್ಯರು ಮಹಿಳೆಗೆ ಗರ್ಭಪಾತವಾಗಿರುವುದಾಗಿ ತಿಳಿಸಿದ್ದರು. ಘಟನೆ ಸಂಬಂಧ ಮಹಿಳೆ ಕೊಟ್ಟದೂರಿನ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದರು.