21ರಂದು ಶೇ. 7.5 ಮೀಸಲಿಗಾಗಿ ಪ್ರತಿಭಟನೆ| ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ: ಪ್ರಸನ್ನಾನಂದ ಶ್ರೀ ಎಚ್ಚರಿಕೆ| ಅಧಿಕಾರಕ್ಕೆ ಬಂದ ಮೇಲೆ ಯಡಿಯೂರಪ್ಪ ವಾಲ್ಮೀಕಿಗಳನ್ನು ಮರೆತಿದ್ದಾರೆ:ಸ್ವಾಮೀಜಿ| ನಮ್ಮ ಬೇಡಿಕೆ ಈಡೇರುವರೆಗೂ ಪ್ರತಿಭಟನೆ|
ಹಾವೇರಿ(ಅ.14): ರಾಜ್ಯ ಸರ್ಕಾರ ವಾಲ್ಮೀಕಿ ಸಮಾಜದ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ವಾಲ್ಮೀಕಿ ಸಮಾಜದ ಕಳೆದ ನಾಲ್ಕು ದಶಕದ ಬೇಡಿಕೆಯಾಗಿರುವ ಶೇ. 7.5ರಷ್ಟು ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತಾ ಬರಲಾಗುತ್ತಿದೆ. ಆದರೆ ಸರ್ಕಾರ ವಾಲ್ಮೀಕಿ ಜನಾಂಗದ ಬೇಡಿಕೆಗೆ ಸ್ಪಂದಿಸದೇ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡುತ್ತಿದೆ. ಆದ್ದರಿಂದ ಅ. 21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಮಂಗಳವಾರ ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘವು ಆಯೋಜಿಸಿದ್ದ ಜಿಲ್ಲಾ ಜನಜಾಗೃತಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಈ ಹಿಂದೆ ಶೇ. 7.5ರ ಮೀಸಲು ಜಾರಿಗೆ ಆಗ್ರಹಿಸಿ ರಾಜನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ನ್ಯಾ. ನಾಗಮೋಹನದಾಸ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ವರದಿ ನೀಡಿ ಹಲವರು ತಿಂಗಳುಗಳೇ ಉರುಳಿವೆ. ಆದರೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ಹಿಂದೇಟು ಹಾಕುತ್ತಿದೆ. ಸರ್ಕಾರ ತಕ್ಷಣ ನಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೆ. 21ರಂದು ತಾವು ಏಕಾಂಗಿಯಾಗಿ ಬೆಂಗಳೂರಿನ ಫ್ರೀಡ್‌ಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ.
ಸರ್ಕಾರ ಅ. 31ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುತ್ತದೆ. ಅಂದು ಸಮಾಜದ ಬಂಧುಗಳು ಈ ಜಯಂತಿಯಲ್ಲಿ ಭಾಗವಹಿಸಬಾರದು. ಅ. 30ರಂದು ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸಬೇಕು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾಜದವರು ಆಗಮಿಸಿ ಅ. 31ರಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಸಮಸ್ತ ವಾಲ್ಮೀಕಿ ಜನಾಂಗದವರು ಕೈಜೋಡಿಸಬೇಕೆಂದು ಕೋರಿದರು.
ಹರಪನಹಳ್ಳಿ: ವಾಲ್ಮೀಕಿ ಜಾತ್ರೆಯೊಳಗೆ ಐದು ಬೇಡಿಕೆ ಈಡೇರಲಿ
ಚಕಾರ ಎತ್ತದ ಬಿಎಸ್‌ವೈ:
ಚುನಾವಣೆ ಬಂದಾದ ರಾಜಕೀಯ ಪಕ್ಷಗಳು ವಾಲ್ಮೀಕಿ ಸಮಾಜದ ಬಗ್ಗೆ ಕಣ್ಣೀರು ಸುರಿಸುತ್ತವೆ. ನಮ್ಮ ಸಮಾಜವನ್ನು ವೋಟ್ ಬ್ಯಾಂಕ್‌ನ್ನಾಗಿ ಮಾಡಿಕೊಂಡಿವೆ. ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿಕೆ ನೀಡಿದ್ದರು. ಆದರೆ ಅವರು ಈಗ ಚಕಾರ ಎತ್ತುತ್ತಿಲ್ಲ. 2020ರ ವಾಲ್ಮೀಕಿ ಜಾತ್ರೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪರಿಶಿಷ್ಟಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವುದಾಗಿ ಭರವಸೆ ನೀಡಿದ್ದರು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಜತೆಗೆ ಮಹರ್ಷಿ ವಾಲ್ಮೀಕಿ ಮಂದಿರವನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಡಿ.ಎಂ. ಸಾಲಿ, ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ, ಸಮಾಜದ ಹಿರಿಯರಾದ ಸೋಮನಗೌಡ ಪಾಟೀಲ, ಅಮೃತಗೌಡ ಪಾಟೀಲ, ಮಂಜುಳಾ ಕರಬಸಮ್ಮನವರ ಮೊದಲಾದವರು ಇದ್ದರು.
ಮೀಸಲಾತಿ ಯಾರಪ್ಪನ ಮನೆ ಆಸ್ತಿಯಲ್ಲ
ಮೀಸಲಾತಿ ಯಾರಪ್ಪನ ಮನೆ ಆಸ್ತಿಯಲ್ಲ. ಅದು ಸಂವಿಧಾನಬದ್ಧ ಹಕ್ಕು, ನಾವು ಅದನ್ನೇ ಕೇಳುತ್ತಿದ್ದೇವೆ. ಅದಕ್ಕಾಗಿ ನಮ್ಮ ಹೋರಾಟ ಎಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 42 ವರ್ಷಗಳಿಂದ ವಾಲ್ಮೀಕಿ ಸಮಾಜವು ಶೇ. 7.5 ಮೀಸಲಾತಿಗೆ ಹೋರಾಟ ಮಾಡುತ್ತಿದೆ. ಸರ್ಕಾರಗಳು ಅಶ್ವಾಸನೆ ನೀಡುತ್ತಿದ್ದು, ಆದರೆ ಜಾರಿಗೆ ತರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ಸಮಾಜ ಹೋರಾಟ ಆರಂಭಿಸುವುದು ಕಷ್ಟ. ಆದರೆ ಹೋರಾಟ ಶುರುವಾದರೆ ನಮ್ಮನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಬೇಡರ ಶಾಪ ಕೆಟ್ಟದ್ದು, ನಮ್ಮ ಶಾಪದಿಂದ ಸಮ್ಮಿಶ್ರ ಸರ್ಕಾರ ಬಿದ್ದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಲಾಯಕ್ ಸರ್ಕಾರಗಳು. ಸಿಎಂ ಯಡಿಯೂರಪ್ಪ ಈ ಕೂಡಲೇ ಸಂಪುಟ ಸಭೆ ಕರೆದು ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಅನುಷ್ಠಾನಗೊಳಿಸಬೇಕು. ಅಧಿಕಾರಕ್ಕೆ ಬಂದ ಮೇಲೆ ಯಡಿಯೂರಪ್ಪನವರು ನಮ್ಮನ್ನು ಮರೆತಿದ್ದಾರೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅ. 21ರಿಂದ ಬೆಂಗಳೂರಿನಲ್ಲಿ ನಾನು ಧರಣಿ ಸತ್ಯಾಗ್ರಹ ಕೈಗೊಳ್ಳುತ್ತೇನೆ. ಸರ್ಕಾರಕ್ಕೆ 10 ದಿನಗಳ ಕಾಲಾವಕಾಶ ನೀಡುತ್ತೇನೆ. ಒಂದು ವೇಳೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಅ. 31ರಂದು ವಾಲ್ಮೀಕಿ ಜಯಂತಿಯಂದು ವಾಲ್ಮೀಕಿ ಸಮಾಜಕ್ಕೆ ಬೆಂಗಳೂರು ಚಲೋ ಕರೆ ನೀಡುತ್ತೇನೆ. ನಮ್ಮ ಬೇಡಿಕೆ ಈಡೇರುವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.