ಪ್ರಮೋದ್ ಮುತಾಲಿಕ್‌ ಹೂಡಿದ್ದ ಮಾನಹಾನಿ ದಾವೆ, ಬಿಜೆಪಿ ಸುನೀಲ್‌ ವಿರುದ್ಧದ ವಾರಂಟ್‌ಗೆ ಹೈಕೋರ್ಟ್‌ ತಡೆ

By Kannadaprabha NewsFirst Published Aug 9, 2024, 12:11 PM IST
Highlights

ಮುತಾಲಿಕ್‌ರನ್ನು ‘ಟೈಗರ್‌ ಗ್ಯಾಂಗ್‌’ಗೆ ಹೋಲಿಸಿದ್ದ  ಸುನೀಲ್‌ ಕುಮಾರ್‌ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ತೀವ್ರ ತರಾಟೆಗೆತ್ತಿಕೊಂಡ ನ್ಯಾಯಾಲಯ  

ಬೆಂಗಳೂರು (ಆ.9): ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ ಪ್ರಕರಣ ಸಂಬಂಧ ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ವಿ.ಸುನೀಲ್‌ಕುಮಾರ್‌ ವಿರುದ್ಧ ವಿಚಾರಣಾ ನ್ಯಾಯಾಲಯ ಜಾರಿ ಮಾಡಿರುವ ವಾರೆಂಟ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ವಿಚಾರಣಾ ನ್ಯಾಯಾಲಯ ಜಾರಿ ಮಾಡಿರುವ ವಾರೆಂಟ್‌ ಪ್ರಶ್ನಿಸಿ ವಿ.ಸುನೀಲ್‌ ಕುಮಾರ್‌ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದರು.

Latest Videos

ಅಕ್ರಮ ಸಂಬಂಧದ ಭಯಾನಕ ಅಂತ್ಯ - ಬೆರಳು ಕತ್ತರಿಸಿ, ಮೂಳೆ ಮುರಿದು, ಕಣ್ಣು ಕಿತ್ತು ಮರ್ಮಾಂಗವನ್ನೇ ಕಟ್ ಮಾಡಿದ್ರು!

ಸುನೀಲ್‌ ಕುಮಾರ್ ವಿರುದ್ಧದ ವಾರೆಂಟ್‌ಗೆ ತಡೆಯಾಜ್ಞೆ ನೀಡಲು ಮೊದಲಿಗೆ ನ್ಯಾಯಮೂರ್ತಿಗಳು ನಿರಾಕರಿಸಿದರು. ಆದರೆ, ಪಕ್ಷ ವಿಪ್‌ ಜಾರಿ ಮಾಡಿದ್ದರಿಂದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಸುನೀಲ್‌ ಕುಮಾರ್‌ ಪರ ವಕೀಲ ಎಂ.ವಿನೋದ್‌ ಕುಮಾರ್‌ ನ್ಯಾಯಪೀಠದ ಗಮನಕ್ಕೆ ತಂದರು. ಅದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಸುನೀಲ್‌ ವಿರುದ್ಧದ ವಾರೆಂಟ್‌ಗೆ ತಡೆಯಾಜ್ಞೆ ನೀಡಿದರು. ಇದಕ್ಕೂ ಮುನ್ನ ನ್ಯಾಯಮೂರ್ತಿಗಳು, ಸುನೀಲ್‌ ಕುಮಾರ್‌ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಚುನಾವಣೆ ಸಂದರ್ಭದಲ್ಲಿ ಅರ್ಜಿದಾರರು, ಪ್ರಮೋದ್‌ ಮುತಾಲಿಕ್‌ ವಿರುದ್ಧ ಹೇಳಿಕೆ ನೀಡಿದ್ದಾರೆ. ಮುತಾಲಿಕ್‌ ನೀಡಿದ ಹೇಳಿಕೆಗೆ ಪ್ರತಿ ಹೇಳಿಕೆ ನೀಡಲಾಗಿದೆ. ಹೇಳಿಕೆಗೆ ಪ್ರತಿ ಹೇಳಿಕೆ ನೀಡಿದಾಗ ಮಾನನಷ್ಟ ಪ್ರಕರಣವಾಗುವುದಿಲ್ಲ ಎಂದು ಸುಪ್ರಿಂ ಕೋರ್ಟ್‌ ತೀರ್ಪು ನೀಡಿದೆ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಒಪ್ಪದ ನ್ಯಾಯಮೂರ್ತಿಗಳು, ಅರ್ಜಿದಾರರು ನೀಡಿರುವ ಹೇಳಿಕೆಯನ್ನು ಓದಿದರೆ, ಮೇಲ್ನೋಟಕ್ಕೆ ಇದು ಮಾನಹಾನಿಕಾರ ಎಂಬುದು ಸ್ಪಷ್ಟವಾಗುತ್ತದೆ ಎಂದು ನುಡಿದರು.

ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ, ಹತ್ಯೆಗೆ ಸಿಕ್ತು ಬಿಗ್ ಟ್ವಿಸ್ಟ್!

ಚುನಾವಣೆ ಸಮಯವೆಂದು ಏನು ಬೇಕಾದರೂ ಮಾತನಾಡಬಹುದೇ, ಅರ್ಜಿದಾರರು ನೀಡಿರುವ ಹೇಳಿಕೆಯನ್ನು ವಿಚಾರಣಾ ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿ, ಏಕೆ ಕಾಗ್ನಿಜೆನ್ಸ್‌ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ವಿವರಿಸಿದೆ. ಹೇಳಿಕೆ ನೀಡುವುದಕ್ಕೆ ಒಂದು ಮಿತಿ ಇರಬೇಕು? ಟೈಗರ್‌ ಗ್ಯಾಂಗ್‌, ಗೋಕಾಕ್ ಏನು? ದೂರುದಾರರು ಆ ಟೈಗರ್‌ ಗ್ಯಾಂಗಿನ ಭಾಗವೇ? ಅರ್ಜಿದಾರರು ಹೇಗೆ ಆ ಹೇಳಿಕೆ ನೀಡಿದರು? ಚುನಾವಣೆ ಸಮಯವೆಂದು ಇಷ್ಟಬಂದಂತೆ ಮಾತನಾಡಲಾಗದು. ಇದು ನಿಜಕ್ಕೂ ಮಾನನಷ್ಟ ಪ್ರಕರಣವಾಗಿದೆ. ಮಾನಹಾನಿ ಹೇಳಿಕೆ ನೀಡುವುದು ಸಾರ್ವಜನಿಕ ಶಾಂತಿಭಂಗ ಉಂಟು ಮಾಡಲು ಕಾರಣವಾಗುತ್ತದೆ. ಜನಸಾಮಾನ್ಯನೊಬ್ಬ ಮಾತನಾಡಿದರೆ ಪರವಾಗಿಲ್ಲ. ಆದರೆ, ಜನರ ಪ್ರತಿನಿಧಿಯಾದ ಶಾಸಕರು ಈ ರೀತಿ ಮಾತನಾಡಬಾರದು ಎಂದು ನ್ಯಾಯಮೂರ್ತಿಗಳು ಚಾಟಿ ಬೀಸಿದರು.

ಪ್ರಕರಣದ ವಿವರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸುನೀಲ್‌ ಕುಮಾರ್‌ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್‌ ಮುತಾಲಿಕ್‌ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸುನೀಲ್‌ ಕುಮಾರ್‌ ಗೆದ್ದಿದ್ದರು. ಚುನಾವಣಾ ಫಲಿತಾಂಶದ ನಂತರ 2023ರ ಮೇ 14ರಂದು ಕಾರ್ಕಳ ಬಂಡಿಮಠ ಬಸ್‌ ನಿಲ್ದಾಣ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಸುನೀಲ್‌ ಕುಮಾರ್‌, ‘ಪ್ರಮೋದ್ ಮುತಾಲಿಕರೇ, ಹಣಕ್ಕೋಸ್ಕರ ಉತ್ತರ ಕರ್ನಾಟಕದಲ್ಲಿ ಹಿಂದುಗಳ ಹತ್ಯೆಯನ್ನು ಟೈಗರ್‌ ಗ್ಯಾಂಗಿನ ನೆಪದಲ್ಲಿ ಎಷ್ಟು ಬಾರಿ ಮಾಡಿಸಿದಿರಿ? ಆ ಹತ್ಯೆಯನ್ನು ಮಾಡಿದಂತಹವರು ಇವತ್ತಿಗೂ ಸಹ ಕಲಬುರಗಿ ಜೈಲಿನಲ್ಲಿ ಇದ್ದಾರೆ’ ಎಂದಿದ್ದರು.

ಇದರಿಂದ ಸುನೀಲ್‌ ಕುಮಾರ್‌ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪ್ರಮೋದ್‌ ಮುತಾಲಿಕ್‌ 2023ರ ಸೆ.7ರಂದು ಬೆಂಗಳೂರಿನ ಸಿಜೆಎಂ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು.

click me!