* ಮತಾಂತರ ಕಡಿವಾಣಕ್ಕೊಂದು ಬಿಗಿ ಕಾನೂನು ಬೇಕು
* ಅ. 30, 31ರಂದು ಗಂಗಾವತಿಯಲ್ಲಿ ಹಿಂದುತ್ವ ಸಮಾವೇಶ
* ನಂಜನಗೂಡಿನಲ್ಲಿ ದೇವಾಲಯ ತೆರವುಗೊಳಿಸಿರುವುದು ಅಕ್ಷಮ್ಯ ಅಪರಾಧ
ಗಂಗಾವತಿ(ಸೆ.26): ರಾಜ್ಯದಲ್ಲಿ ಇಸ್ಲಾಂ(Islam), ಇಸಾಯಿ ಮತ್ತು ಕಮ್ಯುನಿಷ್ಟ ಶಕ್ತಿಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗುತ್ತಿವೆ. ಮತ್ತು ಹಿಂದುತ್ವದ(Hindutva) ವಿರುದ್ಧ ನಿರಂತರ ದಾಳಿ ಮಾಡುತ್ತಾ ಬರುತ್ತಿವೆ. ಇಂತಹ ಶಕ್ತಿಯ ವಿರುದ್ಧ ಹೋರಾಟ ನಡೆಸಿ ಹಿಂದೂ ಸಮಾಜದ ಶಕ್ತಿ ಹೆಚ್ಚಿಸಲು ಮುಂಬರುವ ಅಕ್ಟೋಬರ್ 30 ಮತ್ತು 31 ರಂದು ಗಂಗಾವತಿಯಲ್ಲಿ ಹಿಂದು ಸಂಘಟನೆಗಳ ಒಕ್ಕೂಟದ ಸಮಾವೇಶ ನಡೆಸಲಾಗುತ್ತಿದೆ ಎಂದು ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್(Pramod Mutalik) ಹೇಳಿದ್ದಾರೆ.
ಶನಿವಾರ ನಗರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವದ ಆಧಾರದಲ್ಲಿ ಭಾರತ ಬಲಿಷ್ಠವಾಗುತ್ತಿದೆ. ಕರ್ನಾಟಕದಲ್ಲೂ ಹಿಂದುಗಳು ಒಗ್ಗೂಡುವ ಅವಶ್ಯಕತೆ ಇದೆ. ಇತ್ತೀಚಿಗೆ ದೇವಸ್ಥಾನಗಳನ್ನು ಧ್ವಂಸ ಮಾಡುವ ಹುನ್ನಾರ ನಡೆಯುತ್ತಿದೆ. ಸರ್ಕಾರ ಮಸೀದಿ, ಚರ್ಚ್‌ಗಳನ್ನು ಬಿಟ್ಟು ಕೇವಲ ಹಿಂದು ದೇವಾಲಯಗಳನ್ನು ಮಾತ್ರ ಒಡೆಯುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶನವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಸುಪ್ರೀಂಕೋರ್ಟ್ ಕೇವಲ ಹಿಂದೂ ದೇವಾಲಯಗಳನ್ನು ಮಾತ್ರ ಒಡೆಯಬೇಕು ಎಂದು ನಿರ್ದೇಶಿಸಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಬರುವ ಎಲ್ಲ ಧರ್ಮಿಯರ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವಂತೆ ಸೂಚಿಸಿದೆ. ಆದರೆ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಕೇವಲ ಹಿಂದೂ ದೇವಾಲಯಗಳು ಮಾತ್ರ ಕಣ್ಣಿಗೆ ಕಾಣುತ್ತಿವೆ. ಇದನ್ನು ನಾವು ಖಂಡಿಸುತ್ತಿದ್ದೇವೆ ಎಂದರು.
undefined
ಕೊಪ್ಪಳದಲ್ಲಿ ಮತ್ತೊಂದು ಹೇಯ ಕೃತ್ಯ: ದೇಗುಲ ಪ್ರವೇಶಿಸಿದ ದಲಿತನಿಗೆ 11,000 ದಂಡ
ನಂಜನಗೂಡಿನಲ್ಲಿ ದೇವಾಲಯ ತೆರವುಗೊಳಿಸಿರುವುದು ಅಕ್ಷಮ್ಯ ಅಪರಾಧ. ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಜಗದೀಶ ಕಾರಂತಜೀ ನೇತೃತ್ವದಲ್ಲಿ ದೇವಸ್ಥಾನ ರಕ್ಷಣೆಗೆ ಹೋರಾಟ ನಡೆದಿದ್ದು, ನಾವು ಇದನ್ನು ಬೆಂಬಲಿಸಿ ಸರ್ಕಾರದ ನಿಲುವನ್ನು ಖಂಡಿಸಿದ್ದೇವೆ. ಹಿಂದು ಸಂಘಟನೆಗಳ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ದೇವಾಲಯ ರಕ್ಷಣೆಗೆ ವಿಧೇಯಕ ಮಂಡಿಸಿದೆ. ಆದರೆ, ಇದರಲ್ಲೂ ಕೂಡಾ ದೇವಾಲಯ ರಕ್ಷಣೆಗೆ ಯಾವುದೇ ಅಂಶವಿಲ್ಲ. ಹೀಗಾಗಿ ಸರ್ಕಾರ ಮಂಡಿಸಿರುವ ವಿಧೇಯಕವನ್ನು ನಾವು ವಿರೋಧಿಸುತ್ತಿದ್ದೇವೆ. ಹಿಂದೂ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ಒಡೆಯಬಾರದು ಎಂದರು. ಈ ಸಂದರ್ಭದಲ್ಲಿ ಶ್ರವಣಕುಮಾರ ರಾಯ್ಕರ್, ವಿಠಲ ನಾವಡೆ, ಕಾಶಿನಾಥ, ಹುಸೇನಪ್ಪ ಸ್ವಾಮಿ, ಪಂಪಾಪತಿ ಇದ್ದರು.
ಅಸ್ಪೃಶ್ಯತೆ ಆಚರಣೆ ಮಾಡುವವರನ್ನು ಗಲ್ಲಿಗೇರಿಸಿ
ದಲಿತ ಬಾಲಕ ದೇವಸ್ಥಾನ ಪ್ರವೇಶ ಮಾಡಿದರೆ ಅವರ ಕುಟುಂಬಕ್ಕೆ ದಂಡ ಹಾಕುವುದು ಅತ್ಯಂತ ಅಮಾನವೀಯವಾಗಿದೆ. ಇಂತಹ ಘಟನೆಯನ್ನು ಖಂಡಿಸುತ್ತೇನೆ, ಅಸ್ಪೃಶ್ಯತೆ(Untouchability) ಆಚರಣೆ ಮಾಡುವವರನ್ನು ಗಲ್ಲಿಗೇರಿಸುವಂತಾಗಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪದ ಪ್ರಮೋದ್ ಮುತಾಲಿಕ್ ಹೇಳಿದರು.
ಗಂಗಾವತಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳದ ಮಿಯ್ಯಾಪುರ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದರು. ಅಸ್ಪೃಶ್ಯತೆ ನಿವಾರಣೆಗಾಗಿ ಈಗಾಗಲೇ ಹಿಂದೂ(Hindu) ಸಂಘಟನೆ ಪಣತೊಟ್ಟಿದ್ದು, ಅದನ್ನು ಮಾಡುವ ದಿಸೆಯಲ್ಲಿ ಪ್ರಯತ್ನ ನಡೆಯುತ್ತಿದೆ. ಈ ಅಸ್ಪೃಶ್ಯತೆ ಆಚರಣೆಯಿಂದಲೇ ದೇಶದಾದ್ಯಂತ ಮತಾಂತರವಾಗುತ್ತಿದೆ. ದೇಶದಲ್ಲಿ ಕ್ರಿಶ್ಚಿಯನ್ ಮತಾಂತರ ಬ್ರಿಟಿಷ್ ಕಾಲದಿಂದಲೂ ನಡೆಯುತ್ತಿದೆ. ದಾವಣಗೇರಿ, ಕೋಲಾರ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮತಾಂತರಗೊಂಡಿದ್ದಾರೆ. ಲಿಂಗಾಯತರು, ಬ್ರಾಹ್ಮಣರು, ಒಕ್ಕಲಿಗರೂ ಸಹ ಮತಾಂತರಗೊಂಡಿದ್ದಾರೆ. ದೇಶದಾದ್ಯಂತ ನಡೆಯುತ್ತಿರುವ ಮತಾಂತರ ತಡೆಯಲು ವಿಶೇಷ ಕಾನೂನು ಅಗತ್ಯ ಎಂದು ಪ್ರತಿಪಾದಿಸಿದರು.