Power Crisis: ಶ್ರೀಮಂಗಲ ಸರಬರಾಜು ಕೇಂದ್ರದ ಎದುರು ಪ್ರತಿಭಟನೆ

By Kannadaprabha News  |  First Published Jul 26, 2022, 8:23 AM IST

ಶ್ರೀಮಂಗಲ ವಿದ್ಯುತ್‌ ಸರಬರಾಜು ಉಪ ಕೇಂದ್ರದ ವ್ಯಾಪ್ತಿಗೆ ಸರಬರಾಜಾಗುವ ವಿದ್ಯುತ್‌ ಮಾರ್ಗದಲ್ಲಿ ದಿನನಿತ್ಯ ಅಡಚಣೆಯಾಗುತ್ತಿರುವುದನ್ನು ಖಂಡಿಸಿ ಶ್ರೀಮಂಗಲ ಚೇಂಬರ್‌ ಆಫ್‌ ಕಾಮರ್ಸ್‌ ಸಂಘಟನೆ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಿದರು.


ಶ್ರೀಮಂಗಲ (ಜು.26} :  ಶ್ರೀಮಂಗಲ ವಿದ್ಯುತ್‌ ಸರಬರಾಜು ಉಪ ಕೇಂದ್ರದ ವ್ಯಾಪ್ತಿಗೆ ಸರಬರಾಜಾಗುವ ವಿದ್ಯುತ್‌ ಮಾರ್ಗದಲ್ಲಿ ದಿನನಿತ್ಯ ಅಡಚಣೆಯಾಗುತ್ತಿದ್ದು, ಈ ಬಗ್ಗೆ ಸೆಸ್‌್ಕ ಅಧಿಕಾರಿಗಳು ಹಾಗೂ ಲೈನ್‌ಮೆನ್‌ಗಳಿಗೆ ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ವಿದ್ಯುತ್‌ ಉಪಕೇಂದ್ರದ ಎದುರು ಶ್ರೀಮಂಗಲ ಚೇಂಬರ್‌ ಆಫ್‌ ಕಾಮರ್ಸ್‌ ಸಂಘಟನೆ ನೇತೃತ್ವದಲ್ಲಿ ಹಲವು ಸಂಘ ಸಂಸ್ಥೆಗಳು ಹಾಗೂ ಸಾರ್ವನಿಕರು ಪ್ರತಿಭಟನೆ ನಡೆಸಿದರು.

ಶ್ರೀಮಂಗಲ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ(shrimangala chamber of commerce) ಮಾಣೀರ ಮುತ್ತಪ್ಪ(Maneer Muttappa) ಮಾತನಾಡಿ, ವಿದ್ಯುತ್‌ ಉಪ ಕೇಂದ್ರಕ್ಕೆ ತುರ್ತು ಸಂದರ್ಭ ಹಾಗೂ ವಿದ್ಯುತ್‌ ಅಡಚಣೆಯ ದೂರುಗಳ ಬಗ್ಗೆ ದೂರವಾಣಿಗೆ ಕರೆಮಾಡಿದರೆ ಇಲ್ಲಿನ ಕಿರಿಯ ಅಭಿಯಂತರ ಹಾಗೂ ಲೈನ್‌ಮೆನ್‌ಗಳು ಕರೆ ಸ್ವೀಕರಿಸುವುದಿಲ್ಲ. ಕಚೇರಿಗೆ ಬಂದರೆ ಯಾವುದೇ ಒಬ್ಬ ಸಿಬ್ಬಂದಿ, ಅಧಿಕಾರಿಗಳು ಲಭ್ಯವಿರುವುದಿಲ್ಲ. ಎಲ್ಲಿ ಹೋಗಿದ್ದಾರೆ ಎಂದು ಕೇಳಿದರೂ ಉತ್ತರಿಸುವುದಿಲ್ಲ. ಶ್ರೀಮಂಗಲ ವಿದ್ಯುತ್‌ ಸರಬರಾಜು ಉಪಕೇಂದ್ರದಿಂದ ಬಿರುನಾಣಿ, ಟಿ. ಶೆಟ್ಟಿಗೆರಿ, ನಾಲ್ಕೇರಿ, ಕುಟ್ಟ, ಬೀರುಗ, ಕುರ್ಚಿ, ಪರಕಟಗೇರಿವರೆಗೆ ಮಾರ್ಗಗಳಿವೆ. ಅವುಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಮತ್ತು ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್‌ ವ್ಯತ್ಯಯ ಉಂಟಾಗುತ್ತಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.

Tap to resize

Latest Videos

ಸತತ 6 ಗಂಟೆ ಕಾರ್ಯಾಚರಣೆ ಬಳಿಕ ಗ್ರಾಮಕ್ಕೆ ವಿದ್ಯುತ್‌ ಮರು ಸಂಪರ್ಕ

ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಮಾತನಾಡಿ, ಶ್ರೀಮಂಗಲ ವಿದ್ಯುತ್‌ ಉಪಕೇಂದ್ರದ ವ್ಯಾಪ್ತಿ ಬಹಳ ವಿಸ್ತಾರವಾಗಿದ್ದು, ಹೆಚ್ಚಿನ ಮಳೆ ಹಾಗೂ ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿಗೆ ಕಾಯಂ ಕಿರಿಯ ಅಭಿಯಂತರರು ಕೇಂದ್ರದಲ್ಲಿಯೇ ಇದ್ದು, ಕಾರ್ಯ ನಿರ್ವಹಿಸಬೇಕಾಗಿದೆ. ಸೆಸ್‌್ಕ ಇಲಾಖೆ ಲೈನ್‌ಮೆನ್‌ಗಳನ್ನು ಬಡ್ತಿ ನೀಡಿ ನಾಮಕಾವಸ್ಥೆಗೆ ಕಿರಿಯ ಅಭಿಯಂತರರನ್ನಾಗಿ ಆ ಸ್ಥಾನಕ್ಕೆ ಅರ್ಹತೆ ಇಲ್ಲದವರನ್ನು ನಿಯೋಜಿಸುತ್ತಿದೆ. ಮಳೆಗಾಲಕ್ಕೆ ಮುನ್ನ ಮಾರ್ಗದ ಸಮೀಪ ಇರುವ ಮರ ಕೊಂಬೆಗಳನ್ನು ತೆರವು ಮಾಡಬೇಕಾಗಿದ್ದರೂ ಇಲಾಖೆಯಿಂದ ಈ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳು ಹಾಗೂ ಲೈನ್‌ಮೆನ್‌ಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಭಾಗದ ಜನರು ವಿದ್ಯುತ್‌ ಕಡಿತ ಅನುಭವಿಸುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಉಸ್ತುವಾರಿ ಕಿರಿಯ ಅಭಿಯಂತರ ನದಾಫ್‌ ಆಗಮಿಸಿ, ಇಲಾಖೆಯ ಹಿರಿಯ ಅಧಿಕಾರಿಗಳು ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ತಕ್ಷಣ ಶ್ರೀಮಂಗಲಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇಲಾಖೆಯೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಈ ಸಮಸ್ಯೆಗಳು ಬಗೆಹರಿಯಬೇಕಾಗಿರುವುದರಿಂದ ಅವರ ಗಮನಕ್ಕೆ ಈ ವಿಷಯವನ್ನು ತರಲಾಗುವುದು ಎಂದು ಭರವಸೆ ನೀಡಿದರು.

ವಿದ್ಯುತ್ ಅವಘಡದಿಂದ ಶಾಶ್ವತ ಅಂಗವೈಕಲ್ಯ, ವೇತನವಿಲ್ಲ, ಸೌಲಭ್ಯವಿಲ್ಲ, ಸಿಬ್ಬಂದಿಗೆ ಮೆಸ್ಕಾಂ ಅನ್ಯಾಯ

ಈ ಹಿನ್ನೆಲೆಯಲ್ಲಿ ಆ.1ರಂದು ಶ್ರೀಮಂಗಲ ಗ್ರಾ.ಪಂ. ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಶ್ರೀಮಂಗಲ ಚೇಂಬರ್‌ ಆಫ್‌ ಕಾಮರ್ಸ್‌, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಮತ್ತು ಕೊಡಗು ಬೆಳೆಗಾರರ ಒಕ್ಕೂಟದ ಶ್ರೀಮಂಗಲ ಹೋಬಳಿ ವಿಭಾಗದಿಂದ ಸೆಸ್‌್ಕ ಇಲಾಖೆಯ ಎಸ್‌.ಇ., ಇ.ಇ. ಎ.ಇ.ಇ. ಮತ್ತು ಜೆ.ಇ. ಅವರೊಂದಿಗೆ ಸಾರ್ವಜನಿಕ ಸಂವಾದ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಣೀರ ಮುತ್ತಪ್ಪ ತಿಳಿಸಿದರು.

ಈ ಸಂದರ್ಭ ಶ್ರೀಮಂಗಲ ಹೋಬಳಿ ಬೆಳೆಗಾರರ ಒಕ್ಕೂಟ ಅಧ್ಯಕ್ಷ ಕಾಳಿಮಾಡ ತಮ್ಮುಮುತ್ತಣ್ಣ, ಕಾರ್ಯದರ್ಶಿ ಬಾಚಂಗಡ ದಾದಾದೇವಯ್ಯ, ಕುಟ್ಟಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಮುಕ್ಕಾಟೀರ ನವೀನ್‌ ಅಯ್ಯಪ್ಪ, ಟಿ-ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಯಂಡಮಾಡ ವಿಶ್ವನಾಥ್‌, ರೈತ ಮುಖಂಡ ಪೆಮ್ಮಣಮಾಡ ರಮೇಶ್‌, ಪ್ರಮುಖ ಬೆಳೆಗಾರರಾದ ಸಿ.ಎ.ರಘು, ಅಯ್ಯಮಾಡ ತಿಮ್ಮಯ್ಯ, ಅಯ್ಯಮಾಡ ಸೊಮೇಶ್‌, ಚಂಗುಲಂಡ ರಾಜಪ್ಪ, ಕಾಳಿಮಾಡ ದಿಲೀಪ್‌, ಬಾದುಮಂಡ ಪೂಣಚ್ಚ, ಬಾದುಮಂಡ ಪಮ್ಮಿ ರಮೇಶ್‌, ತಡಿಯಂಗಡ ಗಣೇಶ್‌, ಮಚ್ಚಮಾಡ ಕಾಶಿ, ತೀತೀರ ಕರುಂಬಯ್ಯ, ಮೀದೇರಿರ ವಿಜಯ್‌, ಅಜ್ಜಮಾಡ ಶಂಬು, ಕೋಟ್ರಮಾಡ ರೋ‚ಶನ್‌, ಮಾಣೀರ ದರ್ಶನ್‌, ಕೋಟ್ರಮಾಡ ನಿತಿನ್‌ ಮತ್ತಿತರರು ಭಾಗವಹಿಸಿದ್ದರು.

ಶ್ರೀಮಂಗಲ ಠಾಣಾಧಿಕಾರಿ ರವಿಶಂಕರ್‌ ನೇತೃತ್ವದಲ್ಲಿ ಬಂದೋಬಸ್‌್ತ ಕಲ್ಪಿಸಲಾಗಿತ್ತು.

click me!