ಬಡವರ ಹಣ ನುಂಗಿ ಪೋಸ್ಟ್‌ ಮಾಸ್ಟರ್‌ ಪರಾರಿ: ಕಂಗಾಲಾದ ಜನತೆ

By Kannadaprabha News  |  First Published Jan 19, 2020, 2:46 PM IST

ಇಬ್ಬರು ಪ್ರಾಣವನ್ನೇ ತೆತ್ತರು ಪುಡಿಗಾಸು ಕೊಡಲಿಲ್ಲ| ಕೆದಕಿದಷ್ಟು ಆಳಕ್ಕೆ ಹೋಗುತ್ತಿದೆ ಮಾದಿನೂರು ಪೋಸ್ಟ್ ಮಾಸ್ಟರ್ ಕತೆ| ರೊಚ್ಚಿಗೆದ್ದ ಜನತೆ| ಹಣ ಪಾವತಿ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ|


ಸೋಮರಡ್ಡಿ ಅಳವಂಡಿ 

ಕೊಪ್ಪಳ(ಜ.19):  ವ್ಯಥೆ-1: ಉರಿಬಿಸಿಲಲ್ಲಿ ದುಡಿದು ಬಂದಿದ್ದರಲ್ಲಿಯೇ ಉಪವಾಸವಿದ್ದು ಉಳಿತಾಯ ಮಾಡಿ ಕೂಡಿಟ್ಟ ಹಣ ಇಲ್ಲಾಂದ್ರ ಹ್ಯಾಂಗ್ರಿ ಸರ್, ಸರ್ಕಾರದ್ದು ಪೋಸ್ಟ್ ಆಫೀಸು ಅಂತಾ ನಾವು ಇಟ್ಟಿದ್ದೇವು. ಆದರೆ, ಈಗ ಅದನ್ನೇ ಹಾಕಿಕೊಂಡು ಹೋಗಿದ್ದಾರೆ ಎಂದರೆ ನಾವು ಯಾರನ್ನು ಕೇಳಬೇಕು. 

Tap to resize

Latest Videos

ತಾಯಮ್ಮ 

ವ್ಯಥೆ-2: ಮಗಳ ಮದುವೆಗೆಂದು ದುಡಿದಿದ್ದರಲ್ಲಿಯೇ ಉಳಿಸಿ ಹಣ ಕಟ್ಟಿದ್ದೇವು. ಮದುವೆ ನಿಶ್ಚಯವಾದರೂ ಪೋಸ್ಟ್ ಮಾಸ್ಟರ್ ಹಣವನ್ನು ನೀಡಲೇ ಇಲ್ಲ. ಮನೆ ಮುಂದೆ ಪರಿಪರಿಯಾಗಿ ಬೇಡಿದರೂ ಕೊಡಲಿಲ್ಲ. 

ಗಾಳೆಪ್ಪ ಮಾದಿನೂರು 

ವ್ಯಥೆ-3: ಉಳಿತಾಯ ಮಾಡಿದ ಹಣವನ್ನು ನುಂಗಿ ನೀರು ಕುಡಿದಿದ್ದು ಅಲ್ಲದೆ ಕೇಳಲು ಹೋದವರಿಗೆ ಯಾಮಾರಿಸಿದ್ದಾನೆ. ಇವತ್ತಲ್ಲ ನಾಳೆ ಬಂದೀತು ಎಂದು ಪೋಸ್ಟ್ ಮಾಸ್ಟರ್ ಮನೆಗೆ ಸುತ್ತಾಡಿ ಸುತ್ತಾಡಿ ಚಿಂತೆಯಲ್ಲಿ ಇಬ್ಬರು ತೀರಿಯೇ ಹೋಗಿದ್ದಾರೆ. 

ಕೊಪ್ಪಳ ತಾಲೂಕಿನ ಮಾದಿನೂರು ಗ್ರಾಮದ ಪೋಸ್ಟ್ ಮಾಸ್ಟರ್ ಪ್ರಸನ್ನ ಪೋರೋಹಿತ ಮಾಡಿದ ಅವಾಂತರ ಒಂದೊಂದೆ ಬೆಳಕಿಗೆ ಬರಲಾರಂಭಿಸಿವೆ. ಅನೇಕರು ಮೋಸ ಹೋಗಿದ್ದು, ಹಿಡಿಶಾಪ ಹಾಕುತ್ತಿದ್ದಾರೆ. ಮೋಸ ಇಂದು ನಿನ್ನೆಯದಲ್ಲ, ಕಳೆದ ನಾಲ್ಕಾರು ವರ್ಷಗಳಿಂದ ಮೋಸ ಮಾಡುತ್ತಲೇ ಬಂದಿದ್ದಾನೆ. ಕೂಡಿಟ್ಟ ಹಣ ಜಗಳ ಮಾಡಿದರೆ ಹೋದೀತು ಎಂದು ಆತನ ಮನೆಗೆ ಪ್ರದಕ್ಷಿಣೆ ಹಾಕುತ್ತಲೇ ಪರಿಪರಿಯಾಗಿ ಬೇಡಿದರೂ ಪೋಸ್ಟ್ ಮಾಸ್ಟರ್ ಪುಡಿಗಾಸೂ ನೀಡಿಲ್ಲ. ಅದರಲ್ಲೂ ಓದಲು, ಬರೆಯಲು ಬಾರದಿರುವವರೇ ಹೆಚ್ಚು ಮೋಸ ಹೋಗಿರುವುದು. ಅನಕ್ಷರಸ್ಥರಾಗಿದ್ದರೂ ದುಡಿದ ಹಣದಲ್ಲಿ ಉಳಿತಾಯ ಮಾಡಿದ್ದಾರೆ. ಬದುಕು ಕಟ್ಟಿಕೊಳ್ಳಲು ಅನೇಕರು ಉಳಿತಾಯವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಪೋಸ್ಟ್ ಮಾಸ್ಟರ್ ಪ್ರಸನ್ನ ಮಾತ್ರ ಇವರಾರಿಗೂ ಸೊಪ್ಪು ಹಾಕಿಲ್ಲ. ಯಾರು ಜಗಳವಾಡಿದ್ದಾರೋ ಅವರಿಗೆ ಒಂದಿಷ್ಟು ಕೊಟ್ಟು ಸುಮ್ಮನಿರಿಸಿದ್ದಾರೆ. 

ಒಂದೂವರೆ ಕೋಟಿ ರು. ಪೋಸ್ಟ್‌ ಮಾಸ್ಟರ್‌ ಪಾಲು

ವಿಷಯ ಗೊತ್ತಾಗಿ ಕೆಲವರು ಮಧ್ಯಸ್ಥಿಕೆ ವಹಿಸಿ ತಮಗೊಂದಿಷ್ಟು ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಇಡೀ ಪ್ರಕರಣ ಮೂರ್ನಾಲ್ಕು ವರ್ಷಗಳಾದರೂ ಬೆಳಕಿಗೆ ಬಂದಿಲ್ಲ. ಇವತ್ತಲ್ಲ ನಾಳೆ ಬರುತ್ತದೆ ಎಂದು ಜನರು ಸುಮ್ಮನಾಗಿದ್ದಾರೆ. ಒಂದೆರಡು ಬಾರಿ ಪಂಚಾಯಿತಿ ಮಾಡಿದ ವೇಳೆಯಲ್ಲಿ ಹೊಲ ಮಾರಿಯಾದರೂ ಹಣ ಕೊಡುತ್ತೇನೆ ಎಂದು ಪ್ರಸನ್ನ ಹೇಳಿದ್ದಾರೆ, ಕೆಲವರದು ಕೊಟ್ಟಿದ್ದಾನೆ. ಆದರೆ, ಅಂಚೆ ಕಚೇರಿಯ ಹಣ ಎತ್ತಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಸುಮಾರು 10 ರಿಂದ 12 ಲಕ್ಷ ಪಾವತಿ ಮಾಡಿದ್ದಾನೆ. ಈತನ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಅಂಚೆ ಕಚೇರಿಯಿಂದ ಕಿತ್ತು ಹಾಕಲಾಗಿದೆ. ಆಗಲೇ ಜನರು ರೊಚ್ಚಿಗೆದ್ದು, ಆಕ್ರೋಶಗೊಂಡಿದ್ದಾರೆ. ಇದಾದ ಮೇಲೆಯೇ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಸಮಗ್ರ ತನಿಖೆಗೆ ಆಗ್ರಹ ಪ್ರಕರಣ ಕೇವಲ ಪೋಸ್ಟ್ ಮಾಸ್ಟರ್ ಪ್ರಸನ್ನ ಸುತ್ತ ಮಾತ್ರ ಇಲ್ಲ. ಇದರಲ್ಲಿ ಕೆಲವು ಅಧಿಕಾರಿಗಳ ಕೈವಾಡವೂ ಇದೆ. ಪ್ರಕರಣದ ಕುರಿತು ಪಂಚಾಯಿತಿಯಾದಾಗಲೇ ಬಯಲಿಗೆ ಬಂದಿದೆ. ಆದರೆ, ಇದನ್ನು ಮೇಲಧಿಕಾರಿಗಳು ಎಚ್ಚರ ವಹಿಸಿದ್ದರೆ ಮೋಸ ಹೋಗುವವರಾದರೂ ಕಡಿಮೆಯಾಗುತ್ತಿದ್ದರು. ಆದರೆ, ಇದನ್ನು ಮಾಡದೆ ಇರುವುದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಸುಮಾರು 1 ರಿಂದ 1.5 ಕೋಟಿ ವಂಚನೆಯಾಗಿದ್ದು, ಅಮಾಯಕರೇ ಮೋಸಕ್ಕೀಡಾಗಿದ್ದಾರೆ. ಹೀಗಾಗಿ, ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ಮಾಡುವ ಅಗತ್ಯವಿದೆ. 

ಅಂಚೆ ಕಚೇರಿ ಮೇಲೆ ಬೇಕು ನಿಗಾ: 

ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಅಂಚೆ ಇಲಾಖೆಯ ಮೂಲಕ ಪಾವತಿ ಮಾಡಲು ಶುರು ಮಾಡಿದ ಮೇಲೆ ಅಂಚೆ ಕಚೇರಿಯಲ್ಲಿ ಇದ್ದ ಕೆಲವರು ಇದ್ದಕ್ಕಿದ್ದಂತೆ ಶ್ರೀಮಂತರಾಗಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕವಾಗಿ ನಾಲ್ಕಾರು ಸಾವಿರ ಸಂಬಳ ಪಡೆಯುವರು ಹಾಗೂ ಅಂಚೆ ತಲುಪಿಸುವ ಸಾಮಾನ್ಯ ನೌಕರರು ಕಾರು ಖರೀದಿಸಿರುವ ಉದಾಹರಣೆಗಳು ಇವೆ. ಈ ಬಗ್ಗೆಯೂ ತನಿಖೆಯಾಗಬೇಕು. ಇನ್ನು ಅಂಚೆ ಇಲಾಖೆಯ ಮೂಲಕ ಸರ್ಕಾರ ಅನೇಕ ಪ್ರೋತ್ಸಾಹಧನ ಮತ್ತು ವೃದ್ಧಾಪ್ಯ ವೇತನ ಮೊದಲಾದವು ಬಟಾವಡೆಯಾಗುತ್ತವೆ. ಇಲ್ಲಿಯೂ ದೊಡ್ಡ ಪ್ರಮಾಣದ ಮೋಸ ನಡೆಯುತ್ತಿದೆ. ಇದೆಲ್ಲದರ ಕುರಿತು ತನಿಖೆಯಾಗುವ ಅಗತ್ಯವಿದೆ

ಭಾರಿ ದೊಡ್ಡ ಪ್ರಮಾಣದ ವಂಚನೆಯೇ ಆಗಿದ್ದು, ಇದರ ಸಮಗ್ರ ತನಿಖೆಯಾಗಬೇಕು. ಕೂಡಲೇ ಅಮಾಯಕರಿಗೆ ಅಂಚೆ ಇಲಾಖೆಯ ಸಿಬ್ಬಂದಿಯೇ ರುಜು ಮಾಡಿಕೊಟ್ಟಿರುವ ದಾಖಲೆ ಇರುವುದರಿಂದ ಅವರ ಉಳಿತಾಯದ ಹಣ ಪಾವತಿ ಮಾಡಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷರು ಡಿ.ಎಚ್. ಪೂಜಾರ ಹೇಳಿದ್ದಾರೆ.
 

click me!