ಕೊಡಗಿನಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ, ಅಗತ್ಯ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

By Suvarna News  |  First Published Jun 22, 2023, 9:28 PM IST

ಕೊಡಗು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವಂತೆ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. 


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜೂ.22): ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವಂತೆ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದಲ್ಲಿ ಸಂಭವಿಸಬಹುದಾದ ಅನಾಹುತ ತಡೆಯುವ ಸಂಬಂಧ ಅಗತ್ಯ ಮುನ್ನೆಚ್ಚರ ವಹಿಸುವ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಇದುವರೆಗೆ 300 ಮಿ.ಮೀ. ಕಡಿಮೆ ಮಳೆಯಾಗಿದೆ. ಆದರೂ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವ್ಯಾಪಕ ಮಳೆಯಾದಲ್ಲಿ, ಮಳೆಯಿಂದ ಉಂಟಾಗಬಹುದಾದ ಅವಘಡವನ್ನು ತಪ್ಪಿಸಲು ಅಗತ್ಯ ಕಟ್ಟೆಚ್ಚರ  ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

Tap to resize

Latest Videos

undefined

ಹೆಚ್ಚಿನ ಮಳೆಯಿಂದ ಉಂಟಾಗಬಹುದಾದ ಪ್ರಾಣ ಹಾನಿ, ಜಾನುವಾರು ಹಾನಿ, ಆಸ್ತಿ-ಪಾಸ್ತಿ ಹಾನಿ ಹೀಗೆ ಪ್ರತಿಯೊಂದರ ಬಗ್ಗೆ ಎಚ್ಚರ ವಹಿಸಬೇಕಿದೆ. ಅದಕ್ಕಾಗಿ ಎಲ್ಲಾ ಅಧಿಕಾರಿಗಳು ತಮ್ಮ ಹಂತದಲ್ಲಿ ತಂಡೋಪಾದಿಯಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಸ್ಥಳೀಯರಿಗೆ ಮಾಹಿತಿ ನೀಡುವಂತಾಗಬೇಕು ಎಂದು ವೆಂಕಟ್ ರಾಜಾ ಅವರು ಸೂಚಿಸಿದರು.

ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲಿಸಿ ಹೆಚ್ಚಿನ ಮಳೆಯಿಂದ ಪ್ರವಾಹ, ಬರೆ ಕುಸಿತ ಮತ್ತಿತರ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಅಧಿಕಾರಿಗಳು ರಜೆ ಹೋದಲ್ಲಿ ಮುಂಚಿತವಾಗಿ ಮಾಹಿತಿ ನೀಡಿ ಕೇಂದ್ರ ಸ್ಥಾನದಿಂದ ತೆರಳಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಲೋಕೋಪಯೋಗಿ, ಪಂಚಾಯತ್ ರಾಜ್, ನಗರ/ಪಟ್ಟಣ ಸ್ಥಳೀಯ ಸಂಸ್ಥೆಗಳು, ಸೆಸ್ಕ್, ನೀರಾವರಿ, ಅರಣ್ಯ, ಕಂದಾಯ, ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ದೇವದುರ್ಗ ತಹಸೀಲ್ದಾರ್ ನ ಅಂಧಾ ಕಾನೂನಿಗೆ ಬೀದಿಗೆ ಬಂದ ಬಡ ಕುಟುಂಬ!

ಚರಂಡಿ ಹಾಗೂ ಸೇತುವೆಯಲ್ಲಿ ನೀರು ಸರಾಗವಾಗಿ ಹೋಗುವಂತೆ ಸರಿಪಡಿಸುವುದು. ಸೆಸ್ಕ್ ವಿಭಾಗದ ಅಧಿಕಾರಿಗಳು ಹಳೇ ವಿದ್ಯುತ್ ಕಂಬಗಳ ಬದಲಾವಣೆ, ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ಬದಲಿಸುವುದು ಹೀಗೆ ಹಲವು ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿ ಅವರು ಮಾಹಿತಿ ಪಡೆದರು. ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ತಾ.ಪಂ.ಇಒಗಳು ಸೇರಿದಂತೆ ಎಂಜಿನಿಯರ್ ಗಳು ಚರಂಡಿ, ಸೇತುವೆ ಬಗ್ಗೆ ಕೂಡಲೇ ವರದಿ ನೀಡಬೇಕು. ಪಂಚಾಯತ್ ಪಿಡಿಒಗಳು ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಸೂಚಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಪಂ. ಅಧಿಕಾರಿಗಳು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚಿಸಿದರು.

ಕರ್ನಾಟಕದಲ್ಲಿನ್ನು ಪ್ರತಿಯೊಬ್ಬರಿಗೂ ಜಾತಿ ಪ್ರಮಾಣಪತ್ರ: ಜಯಪ್ರಕಾಶ್‌ ಹೆಗ್ಡೆ

ಅಂಗನವಾಡಿಗಳು, ಶಾಲೆಗಳ ಸುಸ್ಥಿತಿ ಬಗ್ಗೆ ಗಮನಹರಿಸಬೇಕು. ಜಾನುವಾರುಗಳಿಗೆ ಔಷಧಿ ಮತ್ತಿತರವನ್ನು ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿ.ಪಂ.ಸಿಇಒ ಅವರು ಸೂಚಿಸಿದರು. ಈ ಬಾರಿ ಜೂನ್ ತಿಂಗಳಲ್ಲಿ ಕಡಿಮೆ ಮಳೆಯಾಗಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗದಂತೆ ಎಚ್ಚರವಹಿಸಬೇಕು. ಜೊತೆಗೆ ನೀರಿನ ಟ್ಯಾಂಕ್ ಶುಚಿಗೊಳಿಸಿ ಸ್ವಚ್ಛತೆಯತ್ತ ಗಮನಹರಿಸಬೇಕು ಎಂದು ಡಾ.ಎಸ್.ಆಕಾಶ್  ಅವರು ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಮಾತನಾಡಿ ಮಳೆ ಹಾನಿ ಹಾಗೂ ಮುನ್ನೆಚ್ಚರ ಬಗ್ಗೆ ವಿವಿಧ ಇಲಾಖೆ ಹಂತದಲ್ಲಿನ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ ಎಲ್ಲಾ ಹಂತದ ಅಧಿಕಾರಿಗಳು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು ಜಿಲ್ಲೆಯಲ್ಲಿ ಇದುವರೆಗೆ 600 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.

ಸೆಸ್ಕ್ ಇಇ ಅನಿತಾ ಬಾಯಿ ಅವರು ಜಿಲ್ಲೆಯಲ್ಲಿ ಹಳೇ ವಿದ್ಯುತ್ ಕಂಬಗಳು ಹಾಗೂ ಕೆಟ್ಟು ಹೋಗಿರುವ ವಿದ್ಯುತ್ ಪರಿವರ್ತಕಗಳನ್ನು ಬದಲಿಸಲಾಗಿದೆ. ಮುಂಗಾರು ಸಂಬಂಧ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕುಮಾರಸ್ವಾಮಿ ಅವರು ಕೊಯನಾಡು ಸಮೀಪದ ಕಿಂಡಿ ಅಣೆಕಟ್ಟು ಬಳಿ ಹೂಳು ತೆಗೆಯಲಾಗಿದೆ ಎಂದರು. ಜಿಲ್ಲಾ ಅಗ್ನಿ ಶಾಮಕ ಇಲಾಖೆಯ ಅಧಿಕಾರಿಯವರು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ಪ್ರವಾಹ ಉಂಟಾದಲ್ಲಿ ಭಾಗಮಂಡಲ ಸೇರಿದಂತೆ ಅಗತ್ಯ ಇರುವ ಕಡೆ ಬೋಟ್ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಎನ್ಡಿಆರ್ಎಫ್ ತಂಡದ ಮುಖ್ಯಸ್ಥರಾದ ಶಾಂತಿಲಾಲ್ ಜಾಟಿಯಾ ಮತ್ತಿತರರು ಸಭೆಯಲ್ಲಿ ಇದ್ದರು.

click me!