ಉದ್ಯೋಗ ಶಿಕ್ಷಣ ಸಂದರ್ಭಗಳಲ್ಲಿ ಗೊಂದಲವನ್ನು ನಿವಾರಣೆ ಮಾಡುವುದಕ್ಕಾಗಿ ಪ್ರತಿಯೊಂದು ಕುಟುಂಬಕ್ಕೂ ಜಾತಿ ಪ್ರಮಾಣ ನೀಡಬೇಕು, ಅದರಲ್ಲಿ ಆ ಕುಟುಂಬಕ್ಕೆ ಮೀಸಲಾತಿ ಇದೆಯೋ ಇಲ್ಲವೋ ಎಂಬುದನ್ನೂ ಸ್ಪಷ್ಟವಾಗಿ ನಮೂದಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ: ಜಯಪ್ರಕಾಶ್ ಹೆಗ್ಡೆ
ಉಡುಪಿ(ಜೂ.22): ರಾಜ್ಯದಲ್ಲಿ ಮೀಸಲಾತಿ ಪಟ್ಟಿಯಲ್ಲಿ ಇಲ್ಲದ ಜಾತಿಯವರಿಗೂ ಜಾತಿ ಪ್ರಮಾಣ ಪತ್ರವನ್ನು ನೀಡುವ ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು, ಸರ್ಕಾರ ಅದನ್ನು ಒಪ್ಪಿಕೊಂಡಿದ್ದು, ಆ ಬಗ್ಗೆ ಸದ್ಯವೇ ಸರ್ಕಾರ ಆದೇಶ ಹೊರಡಿಸಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಆಯೋಗದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ನಂತರ ಅಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉದ್ಯೋಗ ಶಿಕ್ಷಣ ಸಂದರ್ಭಗಳಲ್ಲಿ ಗೊಂದಲವನ್ನು ನಿವಾರಣೆ ಮಾಡುವುದಕ್ಕಾಗಿ ಪ್ರತಿಯೊಂದು ಕುಟುಂಬಕ್ಕೂ ಜಾತಿ ಪ್ರಮಾಣ ನೀಡಬೇಕು, ಅದರಲ್ಲಿ ಆ ಕುಟುಂಬಕ್ಕೆ ಮೀಸಲಾತಿ ಇದೆಯೋ ಇಲ್ಲವೋ ಎಂಬುದನ್ನೂ ಸ್ಪಷ್ಟವಾಗಿ ನಮೂದಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ ಎಂದವರು ಹೇಳಿದರು.
undefined
ಜಾತಿ ಗಣತಿ ವರದಿ ತಾರ್ಕಿಕ ಅಂತ್ಯಕ್ಕೆ: ಜಯಪ್ರಕಾಶ್ ಹೆಗ್ಡೆ
ದ.ಕ. ಜಿಲ್ಲೆ ಮತ್ತು ಕೊಳ್ಳೆಗಾಲದಲ್ಲಿ ಮೊಗೇರ ಜಾತಿಯವರನ್ನು ಪರಿಶಿಷ್ಟಜಾತಿ ಎಂದು ಗುರುತಿಸಲಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿಯೂ ಅವರನ್ನು ಹಿಂ.ವರ್ಗದಿಂದ ಕೈಬಿಟ್ಟು, ಇಡೀ ರಾಜ್ಯಕ್ಕೆ ಪ. ಜಾತಿಗೆ ಅನ್ವಯಿಸಲಾಗಿದೆ. ಬೋವಿ ಜನಾಂಗದ ಜಾತಿ ಪತ್ರದಲ್ಲಿ ಗೊಂದಲ ಇತ್ತು, ಅವರನ್ನು ಪರಿಶಿಷ್ಟಜಾತಿ ಎಂದು ಗುರುತಿಸಲು ಅನುಕೂಲವಾಗುವಂತೆ, ಹಿಂದುಳಿದ ವರ್ಗದ ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.
ರಾಜ್ಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯಾಚರಿಸುತ್ತಿದ್ದರೂ, ಅವುಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನುದಾನ ನೀಡಲಾಗುತ್ತದೆ. ಇದು ಗೊಂದಲಕ್ಕೆ ಕಾರಣವಾಗಿದ್ದು, ಈ ಶಾಲೆಗಳನ್ನು ಹಿಂ.ವ. ಕಲ್ಯಾಣ ಇಲಾಖೆಗೆ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ ಎಂದು ಹೆಗ್ಡೆ ಹೇಳಿದರು.
600 ರು. ದರಕ್ಕೆ ಒಪ್ಪಿಗೆ:
ಉಡುಪಿ ಸಮೀಪದ ಕೋಡಿ ಗ್ರಾಮದಲ್ಲಿ ಹಿಂ.ವ.ದ ಫಲಾನುಭವಿಗಳಿಗೆ ಭೂಮಿ ಹಕ್ಕುಪತ್ರ ನೀಡಲು 5000 ರು. ದರವನ್ನು ನಿಗದಿ ಮಾಡಲಾಗಿದೆ. ಅದು ಬಡವರಿಗೆ ಹೊರೆಯಾಗಲಿದ್ದು, ಅದನ್ನು ಮಲ್ಪೆಯಲ್ಲಿರುವಂತೆ 600 ರು.ಗೆ ಇಳಿಸಲು ಸಲಹೆ ಮಾಡಿದ್ದು, ಸರ್ಕಾರ ಒಪ್ಪಿದ್ದು, ಸದ್ಯ ಆದೇಶವನ್ನೂ ಹೊರಡಿಸಲಿದೆ ಎಂದರು.
ನವೆಂಬರ್ ತನಕ ಅಧಿಕಾರ ಇದೆ: ಆಯೋಗದ ಅಧಿಕಾರಾವಧಿ ನವೆಂಬರ್ ತಿಂಗಳವರೆಗೆ ಇದೆ. ಅದಕ್ಕೆ ಮೊದಲು ಆಯೋಗದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. 2 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತೀರ್ಮಾನಗಳು ಬರಬೇಕಾಗಿವೆ, ಆಯೋಗ ನಡೆಸಿದ ಸರ್ವೆ ವರದಿಯೂ ಆಂತಿಮಗೊಳ್ಳಬೇಕಾಗಿದೆ, ಕೆಲವು ಅರ್ಜಿಗಳನ್ನು ವಿಲೇವಾರಿ ಮಾಡಬೇಕಾಗಿದೆ ಎಂದವರು ಹೇಳಿದರು.
'ಉಡುಪಿಗೆ ಕೋಟ ಉಸ್ತುವಾರಿಯಾಗಿದ್ದರೆ ಚೆನ್ನಾಗಿತ್ತು'..!
ಸುದ್ದಿಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಶಾರದಾ ನಾಯ್ಕ, ಕೆ.ಟಿ. ಸುವರ್ಣ, ಕಲ್ಯಾಣಕುಮಾರ್ ಎಚ್.ಎಸ್., ವಿ.ಎಸ್. ರಾಜಶೇಖರ್ ಮತ್ತು ಅರುಣ್ ಕುಮಾರ್ ಇದ್ದರು.
ಜಾತಿ ಗೊತ್ತಿಲ್ಲದವರಿಗೆ ಶೇ.1 ಮೀಸಲಾತಿಗೆ ಸರ್ಕಾರ ಒಪ್ಪಿಗೆ
ತಂದೆ ತಾಯಿ ಇಲ್ಲದ, ಜಾತಿ ಯಾವುದೆಂದು ಗೊತ್ತಿಲ್ಲ ಮಕ್ಕಳನ್ನು ಅತಿ ಹಿಂದುಳಿದ ವರ್ಗ ಎಂದು ಪರಿಗಣಿಸಿ, ಶಿಕ್ಷಣ ಉದ್ಯೋಗದಲ್ಲಿ ಅವರಿಗೆ ಶೇ .1ರಷ್ಟುಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಒಂದು ವೇಳೆ ಶೇ.1ನ್ನು ತುಂಬವಷ್ಟು ಫಲಾನುಭವಿಗಳು ಸಿಗದಿದ್ದರೆ, ಆಗ ಈ ಮೀಸಲಾತಿಯನ್ನು ಬ್ಯಾಕ್ ಲಾಗ್‌ಗೆ ನೀಡುವಂತೆ ಸೂಚಿಸಲಾಗಿದೆ. ಸರ್ಕಾರ ಇದನ್ನು ಒಪ್ಪಿದ್ದು, ಈ ಬಗ್ಗೆ ಈಗಾಗಲೇ ಆದೇಶವನ್ನೂ ಹೊರಡಿಸಿದೆ ಎಂದು ಹೆಗ್ಡೆ ಹೇಳಿದರು.