ಬ್ಯಾಡಗಿ ಮೆಣಸಿನ ತಳಿಗೆ ಕುತ್ತು..?

By Kannadaprabha News  |  First Published Mar 4, 2021, 9:16 AM IST

ಬ್ಯಾಡಗಿ ತಳಿಯೆಂದು ಕಳಪೆ ಬೀಜ ಮಾರಾಟ ಜಾಲ: ವರ್ತಕರ ಆರೋಪ| ಮೋಸ ಹೋಗುತ್ತಿರುವ ರೈತರು| ಬ್ಯಾಡಗಿ ಹಾಗೂ ಹುಬ್ಬಳ್ಳಿ ಮಾರುಕಟ್ಟೆಯಲ್ಲೇ ಬೀಜ ಪೂರೈಕೆಗೆ ಸಿದ್ಧತೆ ನಡೆಸಿದ ಮೆಣಸಿನಕಾಯಿ ವ್ಯಾಪಾರಸ್ಥರು| 


ಶಿವಾನಂದ ಗೊಂಬಿ

ಹುಬ್ಬಳ್ಳಿ(ಮಾ.04): ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬ್ಯಾಡಗಿ ಮೆಣಸಿನಕಾಯಿ ತಳಿಗೆ ಕುತ್ತು ಬರುತ್ತಿದೆಯೇ? ಬ್ಯಾಡಗಿ ಮೆಣಸು ಎಂದು ಕಳಪೆ ಬೀಜ ವಿತರಿಸಲಾಗುತ್ತಿದೆಯೇ?. ಇಂತಹ ಪ್ರಶ್ನೆಗಳೀಗ ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸು ಮಾರುಕಟ್ಟೆ ಹಾಗೂ ಹುಬ್ಬಳ್ಳಿ ಎಪಿಎಂಸಿಯಲ್ಲಿ ವರ್ತಕರಿಂದ ವ್ಯಕ್ತವಾಗುತ್ತಿದೆ.

Latest Videos

undefined

ಇದಕ್ಕೆ ಕಾರಣವೂ ಇಲ್ಲದಿಲ್ಲ. ಬ್ಯಾಡಗಿ ತಳಿಯೆಂದು ಬೆಳೆದು ಮಾರುಕಟ್ಟೆಗೆ ತರುವ ರೈತರ ಮೆಣಸಿನಕಾಯಿ ಪರಿಶೀಲಿಸಿದರೆ ಅದು ಬ್ಯಾಡಗಿ ತಳಿಯೇ ಇರದು. ಈ ವಿಷಯ ವರ್ತಕರ ಗಮನಕ್ಕೆ ಬರುತ್ತಿದ್ದಂತೆ ಅದಕ್ಕೆ ದರವೂ ಸಿಗುತ್ತಿಲ್ಲ. ಬ್ಯಾಡಗಿ ಮಾರುಕಟ್ಟೆಯಲ್ಲಿ ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿವೆ. ಇದರಿಂದಾಗಿ ರೈತರು ಮೋಸ ಹೋಗುತ್ತಿದ್ದಾರೆ ಎಂಬ ಆರೋಪ ವರ್ತಕರದ್ದು.

ಬ್ಯಾಡಗಿ ಮೆಣಸಿನ ವಿಶೇಷ:

ಬ್ಯಾಡಗಿ ಮೆಣಸಿಕಾಯಿಯಲ್ಲಿ ಡಬ್ಬಿ ಹಾಗೂ ಕಡ್ಡಿ ಎಂಬ ಎರಡು ತಳಿಗಳಿವೆ. ಎರಡು ವಿಶೇಷ ಗುಣಗಳನ್ನು ಹೊಂದಿರುವ ತಳಿಗಳಿವು. ಡಬ್ಬಿ ಮೆಣಸನ್ನು ಹೆಚ್ಚಾಗಿ ಮಸಾಲೆಗೆ ಬಳಸಿದರೆ, ಕಡ್ಡಿ ತಳಿಯನ್ನು ಪ್ಯಾರಾಮೆಡಿಕಲ್‌, ಸೌಂದರ್ಯವರ್ಧಕಕ್ಕೆ ಬಳಕೆಯಾಗುವುದು ಜಾಸ್ತಿ. ಹಾಗಂತ ಕಡ್ಡಿ ತಳಿಯನ್ನು ಮಸಾಲೆಗೆ ಬಳಸಲ್ಲ ಅಂತ ಏನಲ್ಲ. ಆದರೂ ಹೆಚ್ಚಾಗಿ ಮೆಡಿಸಿನ್‌ ಹಾಗೂ ಸೌಂಧರ್ಯ ವರ್ಧಕಕ್ಕೆ ಹೆಚ್ಚಾಗಿ ಬಳಕೆಯಾಗುತ್ತದೆ.

ಬ್ಯಾಡಗಿ ಮೆಣಸಿನಕಾಯಿಗೆ ಬಂಗಾರದ ಬೆಲೆ; ರೈತನಿಗೆ ಹೂಮಾಲೆ

ಎಲ್ಲೆಲ್ಲಿ ಬೆಳೆಯುತ್ತಾರೆ?:

ಧಾರವಾಡ ಜಿಲ್ಲೆಯ ಕುಂದಗೋಳ, ನವಲಗುಂದ ಹಾಗೂ ಹುಬ್ಬಳ್ಳಿ ತಾಲೂಕಿನ ವಿವಿಧೆಡೆ, ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಬ್ಯಾಡಗಿ ತಳಿ ಬೆಳೆಯಲಾಗುತ್ತದೆ. ಉತ್ತಮ ಬೀಜ ಹೊಂದಿದ್ದರೆ ಪ್ರತಿ ಎಕರೆ 20 ಕ್ವಿಂಟಲ್‌ವರೆಗೂ ಮೆಣಸು ಬೆಳೆಯಬಹುದು. ಆದರೆ ಕಳಪೆ ಬೀಜ ಪಡೆದವರು ಎಕರೆ 3-4 ಕ್ವಿಂಟಲ್‌ ಮಾತ್ರ ಬೆಳೆಯುತ್ತಾರೆ. ಇನ್ನೂ ಉತ್ತಮ ತಳಿಯಿದ್ದರೆ ಮಾರುಕಟ್ಟೆಯಲ್ಲಿ ಮಾಮೂಲಿಯಾಗಿ .28ರಿಂದ 30 ಸಾವಿರ ವರೆಗೂ ಪ್ರತಿ ಕ್ವಿಂಟಲ್‌ಗೆ ಪಡೆಯುತ್ತಾರೆ. ಈ ವರ್ಷ ಇದು . 50 ಸಾವಿರದ ಗಡಿ ಕೂಡ ದಾಟಿದ್ದುಂಟು. ಆದರೆ ಕಳಪೆ ಬೀಜ ಬಿತ್ತಿದವರು ಬರೀ . 5ರಿಂದ . 6 ಸಾವಿರಗೆ ಕ್ವಿಂಟಲ್‌ ಮಾರಾಟವಾದರೆ ಅದೇ ದೊಡ್ಡದು ಎಂಬಂತಹ ಪರಿಸ್ಥಿತಿಯಿದೆ ಎಂದು ವರ್ತಕರು ತಿಳಿಸುತ್ತಾರೆ.
ಮೂಲ ಬ್ಯಾ​ಡಗಿ ತ​ಳಿ ಕೆಂಪು ಕ​ಡು​ಬಣ್ಣ ಹೊಂದಿದೆ. ಈ ಬಣ್ಣವನ್ನು 240ರಿಂದ 260 ಎಎ​ಸ್‌​ಟಿ​ಎ​ (ಅ​ಮೆ​ರಿ​ಕನ್‌ ಸ್ಪೈಸ್‌ ಟ್ರೇ​ಡಿಂಗ್‌ ಅ​ಸೋ​ಸಿ​ಯೇ​ಶ​ನ್‌) ನಿ​ಗ​ದಿ​ಪ​ಡಿ​ಸಿದೆ. ಏ​ಷ್ಯಾ​ದ​ಲ್ಲಿಯೇ ಅತೀ ಕ​ಡಿಮೆ ಕಾರ ಹೊಂದಿರುವ ​14 ಸಾ​ವಿರ ಎಸ್‌ಎಚ್‌ಯು (ಸ್ಕು​ವೆಲ್‌ ಹೀಟ್‌ ಯು​ನಿಟ್‌​) ಮೆ​ಣ​ಸಿ​ನ​ಕಾಯಿ ಇದಾಗಿದೆ.

ಬ್ಯಾಡಗಿ ಹೆಸರಿನಲ್ಲಿ ಹೈಬ್ರಿಡ್‌ ಕಂಪನಿಗಳು ನೀಡುತ್ತಿರುವ ಬೀಜಗಳು ಕಳಪೆಯಾಗಿರುತ್ತವೆ. ಎಸ್‌ಎಚ್‌ಯು ಹಾಗೂ ಎಎಸ್‌ಟಿಎ ಎರಡು ಅಂಶಗಳು ಇರುವುದಿಲ್ಲ. ಕೆಲ ಕಂಪನಿಗಳು, ಬ್ಯಾಡಗಿ ಮೆಣಸಿನ ಬೀಜವೆಂದು ಪ್ಯಾಕೆಟ್‌ಗಳನ್ನು ಮಾಡಿಕೊಂಡು ಹಳ್ಳಿಗಳಿಗೆ ಬಂದು ರೈತರನ್ನು ನಂಬಿಸಿ ಬೀಜ ಮಾರಾಟ ಮಾಡಿ ಹೋಗುತ್ತಾರೆ. ಬಣ್ಣದ ಮಾತಿಗೆ ಮರುಳಾಗಿ ರೈತರು ಆ ಬೀಜ ಖರೀದಿಸಿ ಬಿತ್ತುತ್ತಿದ್ದಾರೆ. ಇದರಿಂದ ಅತ್ತ ಇಳುವರಿಯೂ ಬರಲ್ಲ. ಇತ್ತ ಬಂದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆಯೂ ದೊರೆಯುತ್ತಿಲ್ಲ. ಇದರಿಂದ ರೈತರು ಕಣ್ಣೀರು ಹಾಕುವಂತಾಗಿದೆ ಎಂಬ ಮಾತು ವರ್ತಕರದ್ದು.

ಪತ್ತೆ ಹಚ್ಚುತ್ತಾ​ರೆ:

ಮೆಣಸಿನಕಾಯಿಯನ್ನು ನೋಡಿದ ತಕ್ಷಣವೇ ಇದು ಬ್ಯಾಡಗಿ ತಳಿಯೋ ಕಳಪೆ ಬೀಜದಿಂದ ಬಿತ್ತಿರು​ವುದೊ ಎಂಬುದು ಗೊತ್ತಾಗುತ್ತದೆ. ಮೆಣಸಿನಕಾಯಿ ವಾಸನೆಯಿಂದ ಕೂಡಿರುತ್ತದೆ. ರಿಂಗ್‌ ರಿಂಗ್‌ (ಸುರಳಿ ಸುತ್ತಿದಂತೆ) ಇರುತ್ತದೆ. ಆದರೆ ಕಳಪೆ ಬೀಜದ ಮೆಣಸಿನ ವಾಸನೆ ಆ ರೀತಿ ಇರಲ್ಲ. ರಿಂಗ್‌ ರಿಂಗ್‌ ಕೂಡ ಇರಲ್ಲ. ನೋಡಿದ ತಕ್ಷಣ ಗೊತ್ತಾಗಿ ಅದಕ್ಕೆ ದರವೇ ಬರಲ್ಲ ಎಂದು ರೈತ ಮುಖಂಡರು ಹೇಳುತ್ತಾರೆ.

ಬೀಜ ಪೂರೈಕೆ:

ಇದೇ ಪರಿಸ್ಥಿತಿ ಮುಂದುವರಿದರೆ ಬ್ಯಾಡಗಿ ತಳಿಗೆ ಕುತ್ತು ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದಕಾರಣ ಬ್ಯಾಡಗಿ ಹಾಗೂ ಹುಬ್ಬಳ್ಳಿ ಮಾರುಕಟ್ಟೆಯಲ್ಲೇ ಮೆಣಸಿನಕಾಯಿ ವ್ಯಾಪಾರಸ್ಥರೇ ಇದೀಗ ಬೀಜ ಪೂರೈಕೆಗೆ ಸಿದ್ಧತೆ ನಡೆಸಿದ್ದಾರೆ. ರೈತರು ನಿಮ್ಮ ಹಳ್ಳಿಗಳಲ್ಲಿ ಯಾರಾದರೂ ಬ್ಯಾಡಗಿ ತಳಿಯ ಬೀಜ ಎಂದು ಮಾರಾಟಕ್ಕೆ ಬಂದರೆ ಅವರಿಂದ ಖರೀದಿಸಬಾರದು. ನೇರವಾಗಿ ಬ್ಯಾಡಗಿ ಮಾರುಕಟ್ಟೆಗೆ ಬಂದು ಪರಿಶೀಲಿಸಿ ಬೀಜ ತೆಗೆದುಕೊಂಡು ಹೋಗಬೇಕೆಂಬುದು ವರ್ತಕರ ಅಂಬೋಣ. ಒಟ್ಟಿನಲ್ಲಿ ಬ್ಯಾಡಗಿ ಮೆಣಸಿನ ತಳಿ ಎಂದು ಕಳಪೆ ಬೀಜ ಮಾರಾಟವಾಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿರುವುದಂತೂ ಸತ್ಯ.

ಬ್ಯಾಡಗಿ ಮೆಣಸು ಎಂದು ಕೆಲ ಕಂಪನಿಗಳು ಕಳಪೆ ಬೀಜ ಮಾರಾಟ ಮಾಡುತ್ತಿವೆ. ದೊಡ್ಡ ಜಾಲವೇ ಈ ಭಾಗದಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ರೈತರಿಗೆ ಮೋಸವಾಗುತ್ತಿದೆ. ಈ ಬಗ್ಗೆ ಕೃಷಿ ಸಚಿವರ ಗಮನಕ್ಕೂ ತಂದಿದ್ದೇವೆ. ಈ ವರ್ಷದಿಂದ ಆಸಕ್ತ ರೈತರಿಗೆ ನಾವೇ ಬೀಜ ಪೂರೈಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಬ್ಯಾಡಗಿ ವರ್ತಕ ಜಗದೀಶಗೌಡ ಪಾಟೀಲ ತಿಳಿಸಿದ್ದಾರೆ. 

ಬ್ಯಾಡಗಿ ಕಳಪೆ ಬೀಜ ಪೂರೈಕೆ ಮಾಡುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ. ಈ ರೀತಿ ದೂರುಗಳು ಬಂದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ. ರೈತರಾಗಲಿ, ವರ್ತಕರಾಗಲಿ ದೂರು ನೀಡಬೇಕು. ನಮ್ಮ ತಂಡದಿಂದ ಪರಿಶೀಲಿಸುತ್ತೇವೆ ಎಂದು ಧಾರವಾಡ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶಿನಾಥ ಹೇಳಿದ್ದಾರೆ. 
 

click me!