ನಾಗರಬಾವಿ ರಿಂಗ್ ರಸ್ತೆ ಬಳಿ ಒತ್ತುರಿಯಾಗಿದ್ದ 2 ಎಕರೆ ಒತ್ತುವರಿ ತೆರವು| ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಕಾರ್ಯಾಚರಣೆ| ಅನಧಿಕೃತವಾಗಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್ ಗ್ಯಾರೇಜ್, ಕಾಂಪೌಂಡ್ ತೆರವು| ಪೊಲೀಸ್ ಬಂದೋಬಸ್ತ್‌ನಲ್ಲಿ ವಶಕ್ಕೆ ಪಡೆದ ಬಿಡಿಎ|
ಬೆಂಗಳೂರು(ಮಾ.04): ನಾಗರಬಾವಿಯಲ್ಲಿ ಬಿಡಿಎಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ಗಳು, ಗ್ಯಾರೇಜ್‌ಗಳು ಹಾಗೂ ಕಾಂಪೌಂಡ್‌ಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಬುಧವಾರ ತೆರವುಗೊಳಿಸಿದ ಬಿಡಿಎ ಅಧಿಕಾರಿಗಳು ಸುಮಾರು 80 ಕೋಟಿ ರು. ಮೌಲ್ಯದ 2 ಎಕರೆ 2 ಗುಂಟೆ ಜಾಗವನ್ನು ವಶಪಡಿಸಿಕೊಂಡಿದ್ದಾರೆ.
ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ಮಹದೇವ್ ಅವರ ಮಾರ್ಗದರ್ಶನದಲ್ಲಿ ಬಿಡಿಎ ಪೊಲೀಸರು, ಸ್ಥಳೀಯ ಪೊಲೀಸ್ ಸಿಬ್ಬಂದಿ ನೆರವಿನೊಂದಿಗೆ ಆರು ಜೆಸಿಬಿಗಳಿಂದ ಶೆಡ್‌ಗಳು, ಮೂರು ಆರ್‌ಸಿಸಿ ಕಟ್ಟಡಗಳು ಸೇರಿದಂತೆ ಕಾಂಪೌಂಡನ್ನು ತೆರವುಗೊಳಿಸಿದರು.
ನಾಗರಬಾವಿ ರಿಂಗ್ ರಸ್ತೆಯ ಸಮೀಪದ ಸರ್ವೆ ನಂಬರ್ 30ರಲ್ಲಿನ 3 ಎಕರೆ 5 ಗುಂಟೆ ಜಮೀನನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು. ಈ ಪೈಕಿ ಈಗಾಗಲೇ 1 ಎಕರೆ 3 ಗುಂಟೆ ಜಾಗವನ್ನು ರಸ್ತೆ ನಿರ್ಮಾಣಕ್ಕೆಂದು ಬಳಸಿಕೊಳ್ಳಲಾಗಿದೆ. ಉಳಿದ 2 ಎಕರೆ 2 ಗುಂಟೆ ಜಾಗದ ವಿಚಾರದಲ್ಲಿ ಕಳೆದ ಹಲವಾರು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಅಂತಿಮವಾಗಿ ಸುಪ್ರೀಂಕೋರ್ಟ್ ಈ ಜಾಗವನ್ನು ವಶಕ್ಕೆ ತೆಗೆದುಕೊಂಡು ಬಿಡಿಎಗೆ ಹಸ್ತಾಂತರಿಸುವಂತೆ ಮತ್ತು ಸದರಿ ಜಾಗದಲ್ಲಿ ಉದ್ಯಾನವನ ಹಾಗೂ ಆಟದ ಮೈದಾನ ನಿರ್ಮಾಣ ಮಾಡುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ ಮತ್ತು ಬಿಡಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗವನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಈ ಬಡಾವಣೆಯ 950 ಎಕರೆ ಜಾಗದಲ್ಲಿರುವ ಅಕ್ರಮ ಕಟ್ಟಡ ತೆರವು
ಒತ್ತುವರಿಗೆ ತೆರವಿಗೆ ಚಾಲನೆ
ಬಿಡಿಎಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳು ಒತ್ತುವರಿಯಾಗಿವೆ. ಇಂತಹ ಅನೇಕ ಜಾಗಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನಗರದ ಪ್ರತಿಷ್ಠಿತ ಬಡಾವಣೆಗಳಾದ ಜಯನಗರ, ಕೋರಮಂಗಲ, ಪೀಣ್ಯ, ವಿಜಯನಗರ, ಚಂದ್ರಾಬಡಾವಣೆ ಸೇರಿದಂತೆ ಇನ್ನಿತರೆ ಬಡಾವಣೆಗಳಲ್ಲಿ ಬಿಡಿಎಗೆ ಸೇರಿದ ಜಾಗಗಳನ್ನು ಒತ್ತುವರಿ ಮಾಡಲಾಗಿದೆ. ಇಂತಹ ಜಾಗಗಳನ್ನು ಗುರುತಿಸಿ ಕಾನೂನು ಪ್ರಕಾರ ವಶಕ್ಕೆ ಪಡೆಯಲಾಗುತ್ತದೆ. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿ ಆ ಜಾಗವನ್ನು ಮುಂದಿನ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ಈಗಾಗಲೇ ಪ್ರತಿಷ್ಠಿತ ಪ್ರದೇಶಗಳಲ್ಲಿ ಒತ್ತುವರಿಯಾಗಿರುವ ನೂರಾರು ಕೋಟಿ ರು. ಮೌಲ್ಯದ ಭೂಮಿಯನ್ನು ಗುರುತಿಸಲಾಗಿದೆ. ಇವುಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಕಾನೂನು ವಿಭಾಗದ ಸಲಹೆ ಪಡೆದು ಬಳಿಕ ಒತ್ತುವರಿ ತೆರವುಗೊಳಿಸುವುದಾಗಿ ಹೇಳಿದ್ದಾರೆ.