ಪ್ರೀತಿಸಿ ಮದುವೆಯಾಗಿ ಅನ್ಯೋನ್ಯವಾಗಿ ಬಾಳುತ್ತಿದ್ದವರ ಬದುಕಿನಲ್ಲಿ ವಿಧಿ ಕ್ರೂರವಾಗಿ ಆಟವಾಡುತ್ತಿದ್ದಾನೆ. ಚಿಕಿತ್ಸೆಗೆ ಹಣವಿಲ್ಲದೇ ಈ ಕುಟುಂಬ ಪರದಾಡುತ್ತಿದ್ದು, ದಾನಿಗಳು ಸಹಾಯ ಮಾಡಿದ್ರೆ ಒಂದು ಕುಟುಂಬ ಮತ್ತೆ ಜೀವ ಪಡೆದುಕೊಳ್ಳುತ್ತದೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಜೂ.23): ಅವರು ಪ್ರೀತಿಸಿ ಮದುವೆ ಆಗಿದ್ರು, ಅವರ ಪ್ರೀತಿಯ ಕಾಣಿಕೆಯಾಗಿ ಒಂದು ಗಂಡು ಮಗು ಕೂಡ ಇದೆ. ಕೂಲಿ ಮಾಡುತ್ತಾ ಸಂತಸದ ಜೀವನ ನಡೆಸುತ್ತಿದ್ದ ಅವರ ಜೀವನದಲ್ಲಿ ಕಳೆದ ಏಳು ತಿಂಗಳಿನಿಂದ ವಿಧಿ ಕ್ರೂರವಾಗಿ ಆಟವಾಡುತ್ತಿದ್ದಾನೆ. ಎರಡೂ ಕಿಡ್ನಿ ವೈಫಲ್ಯದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಗಂಡನಿಗೆ, ಪತ್ನಿ ತನ್ನ ಕಿಡ್ನಿಯೊಂದನ್ನು ನೀಡಲು ಸಜ್ಜಾಗಿದ್ದರೂ, ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿಯನ್ನು ಈ ಕುಟುಂಬ ಎದುರಿಸುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...
undefined
ಹೌದು, ಹೀಗೆ ಕೈಕೈ ಹಿಡಿದುಕೊಂಡು ಬರುತ್ತಿರುವ ದಂಪತಿಯ ಹೆಸರು ಸಚಿನ್ ಮತ್ತು ಪ್ರತಿಭಾ. ಇವರು ಉತ್ತರ ಕನ್ನಡ ಜಿಲ್ಲೆ ಕಾರವಾರದ ಕೋಡಿಭಾಗ್ ನಿವಾಸಿಗಳು. ಕಳೆದ ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ಇವರಿಗೆ ಮದುವೆಯ ನಂತರ ಒಂದು ವರ್ಷದಲ್ಲಿ ಗಂಡು ಮಗು ಕೂಡಾ ಹುಟ್ಟಿತ್ತು. ಕೂಲಿ ಮಾಡುತ್ತಾ ಸಂತಸದಿಂದ ಜೀವನ ಸಾಗಿಸುತ್ತಿದ್ದ ಅವರ ಬದುಕಲ್ಲಿ ಕಂಟಕವಾಗಿ ಎಂಟ್ರಿಕೊಟ್ಟದ್ದು ಕಿಡ್ನಿ ಸಮಸ್ಯೆ. ಕಳೆದ ಏಳು ತಿಂಗಳ ಹಿಂದೆ ಸಚಿನ್ ಅವರಿಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದ್ದು, ಹತ್ತಿರದ ಆಸ್ಪತ್ರೆಗೆ ತೆರಳಿ ಚೆಕಪ್ ಮಾಡಿಸಿದ್ದಾರೆ. ಆಗ ವೈದ್ಯರು ಎರಡೂ ಕಿಡ್ನಿ ಸಮಸ್ಯೆ ಇರುವ ಬಗ್ಗೆ ತಿಳಿಸಿದ್ದಾರೆ.
ಸರ್ಕಾರಿ ಶಾಲಾ ಆವರಣದಲ್ಲಿ ಬೆಳೆದ ವಿಷಕಾರಿ ಬೀಜ ತಿಂದು, ಅಸ್ವಸ್ಥರಾದ ಮಕ್ಕಳು
ನಂತರ ಮಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೋಗಿ ಚೆಕಪ್ ಮಾಡಿಸಿದಾಗ ಎರಡು ಕಿಡ್ನಿ ವೈಫಲ್ಯದ ಬಗ್ಗೆ ಗೊತ್ತಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.. ದಿಕ್ಕೆ ತೋಚದೆ ಒಡವೆ, ತಮ್ಮ ಹತ್ತಿರವಿದ್ದ ಆಸ್ತಿ ಪಾಸ್ತಿ ಎಲ್ಲಾ ಮಾರಿ ಸಚಿನ್ ಅವರಿಗೆ ಚಿಕಿತ್ಸೆ ಕೊಡಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.. ನಂತರದಲ್ಲಿ ವೈದ್ಯರು ಕಿಡ್ನಿ ಕಸಿ ಮಾಡಿಸಬೇಕು ಇಲ್ಲವಾದರೆ ಸಚಿನ್ ಬಹಳ ದಿನ ಬದುಕುವುದಿಲ್ಲ ಎಂದಿದ್ದಾರೆ. ಹೀಗಾಗಿ ಹೆದರಿದ ಪ್ರತಿಭಾ ತನ್ನ ಪತಿಯನ್ನು ಉಳಿಸಿಕೊಳ್ಳಲು ತನ್ನದೊಂದು ಕಿಡ್ನಿ ಕೊಡಲು ಮುಂದಾಗಿದ್ದಾಳೆ. ಆದರೆ, ಇವರಿಗೆ ಎದುರಾಗಿರುವುದು ಹಣದ ಸಮಸ್ಯೆ.
ಇನ್ನು ಕಳೆದ ಏಳು ತಿಂಗಳಿನಿಂದ ಒಡವೆ, ತಮ್ಮ ಹತ್ತಿರವಿದ್ದ ಹಣ, ಸಂಬಂಧಿಕರ ಹತ್ತಿರ ಸಾಲ ತೆಗೆದುಕೊಂಡು ಸಚಿನ್ ಅವರಿಗೆ ಪತ್ನಿ ಡಯಾಲಿಸಿಸ್ ಮಾಡಿಸಿದ್ದಾರೆ. ಇರುವ ಹಣ ಖರ್ಚಾಗಿದೆ ಹೊರತು ಯಾವುದು ಪ್ರಯೋಚನವಾಗಿಲ್ಲ. ಜತೆಗೆ ಸಚಿನ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟು ಹೋಗುತ್ತಿದೆ. ಹೀಗಾಗಿ ಪತ್ನಿ ಪ್ರತಿಭಾ ಆತಂಕಗೊಂಡಿದ್ದು, ನಿರ್ಲಕ್ಷ್ಯ ಮಾಡಿದ್ರೆ ತನ್ನ ಗಂಡ ಬದುಕುವುದಿಲ್ಲ ಅಂತಾ ತಿಳಿದು, ತಾನೇ ಸ್ವತಃ ತನ್ನದೊಂದು ಕಿಡ್ನಿ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಈ ಕಿಡ್ನಿ ಕಸಿ ಮಾಡಿಸಬೇಕಾದರೆ ಕನಿಷ್ಠ 10 ರಿಂದ 12 ಲಕ್ಷ ಖರ್ಚಾಗಲಿದೆ. ಸದ್ಯಕ್ಕೆ ಇವರ ಬಳಿ ಅಷ್ಟು ಹಣವಿಲ್ಲ.. ಕೂಲಿ ಮಾಡಿ ಬದುಕು ಸಾಗಿಸುತ್ತಿರುವುದರಿಂದ ಹಣ ಹೊಂದಿಸುವುದು ಕಷ್ಟವಾಗಿದೆ.. ಹೀಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಧನ ಸಹಾಯ ಒದಗಿಸಲು ಮನವಿ ಮಾಡಿದ್ದಾರೆ. ಜೊತೆಗೆ ಯಾರಾದರು ದಾನಿಗಳಿದ್ದರೆ ಸಹಾಯ ಮಾಡಿ ಗಂಡನನ್ನು ಉಳಿಸಿಕೊಡಿ ಎಂದು ಪ್ರತಿಭಾ ಬೇಡಿಕೊಳ್ಳುತ್ತಿದ್ದಾರೆ. ಸಚಿನ್ ಅವರು ಕೂಲಿ ಮಾಡಿ ಬದುಕನ್ನು ಸಾಗಿಸುತ್ತಿರುವದರಿಂದ ಜನರು ಈ ಕುಟುಂಬಕ್ಕೆ ಸಹಾಯ ಮಾಡಲೆಂದು ಸಾಮಾಜಿಕ ಕಾರ್ಯಕರ್ತರು ಕೂಡಾ ಕೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾಗಿ ಅನ್ಯೋನ್ಯವಾಗಿ ಬಾಳುತ್ತಿದ್ದವರ ಬದುಕಿನಲ್ಲಿ ವಿಧಿ ಕ್ರೂರವಾಗಿ ಆಟವಾಡುತ್ತಿದ್ದಾನೆ. ಚಿಕಿತ್ಸೆಗೆ ಹಣವಿಲ್ಲದೇ ಈ ಕುಟುಂಬ ಪರದಾಡುತ್ತಿದ್ದು, ದಾನಿಗಳು ಸಹಾಯ ಮಾಡಿದ್ರೆ ಒಂದು ಕುಟುಂಬ ಮತ್ತೆ ಜೀವ ಪಡೆದುಕೊಳ್ಳುತ್ತದೆ.