ಮಡಿಕೇರಿಯಲ್ಲಿ ನಿರ್ಮಿಸುತ್ತಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿ ಭವನಕ್ಕೆ ಜರ್ಮನ್ ತಂತ್ರಜ್ಞಾನದ ತಡೆಗೋಡೆ, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕುಸಿಯುವ ಹಂತ ತಲುಪಿದೆ.
ವರದಿ : ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.14): ಸೈನಿಕರ ನಾಡೆಂದು ಖ್ಯಾತಿಯಾಗಿರುವ ಮಡಿಕೇರಿಯಲ್ಲಿ ನಿರ್ಮಿಸುತ್ತಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿ ಭವನಕ್ಕೆ ಜರ್ಮನ್ ತಂತ್ರಜ್ಞಾನದ ತಡೆಗೋಡೆ, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕುಸಿಯುವ ಹಂತ ತಲುಪಿದೆ. ತಡೆಗೋಡೆ ಗುಣಮಟ್ಟ ಕುರಿತು ಲೋಕಾಯುಕ್ತ ನ್ಯಾಯಾಲಯ ತನಿಖೆಗೆ ಆದೇಶಿಸಿದ್ದು, ಜು.17ಕ್ಕೆ ತಜ್ಞರ ತಂಡು ಭೇಟಿ ನೀಡುತ್ತಿದೆ.
ಕೊಡಗು ಜಿಲ್ಲಾಧಿಕಾರಿಗಳ ಕಚೇರಿ ಭವನಕ್ಕೆ ನಿರ್ಮಿಸುತ್ತಿದ್ದ ತಡೆಗೋಡೆ ವಿಷಯ ಸಾಕಷ್ಟು ಸದ್ದು ಮಾಡಿದ್ದು ಗೊತ್ತೇ ಇದೆ. ಅದರಲ್ಲೂ ಮಳೆಗಾಲದ ಪರಿಸ್ಥಿತಿ ವೀಕ್ಷಣೆಗೆ ಬಂದಿದ್ದ ಹಿಂದಿನ ಸರ್ಕಾರದ ವಿಪಕ್ಷ ನಾಯಕರಾಗಿದ್ದ ಇಂದಿನ ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪರಿಣಾಮ ಅದುವರೆಗೂ ಪಡೆದುಕೊಳ್ಳದಿದ್ದ ತಿರುವುಗಳನ್ನೇ ತಡೆಗೋಡೆ ವಿಷಯ ಪಡೆದುಕೊಂಡಿತು. ಇದೀಗ ತಡೆಗೋಡೆಯ ಕಾಮಗಾರಿ ಗುಣಮಟ್ಟ ಕುರಿತು ಲೋಕಾಯುಕ್ತ ನ್ಯಾಯಾಲಯ ತನಿಖೆಗೆ ಆದೇಶಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಅಂದರೆ ಜುಲೈ 17 ರಂದು ಕಾಮಗಾರಿ ಪರಿಶೀಲನೆಗೆ ತಂಡ ಆಗಮಿಸುತ್ತಿದೆ. ಇದು ಸಾಕಷ್ಟು ಕುತೂಹಲದ ಜೊತೆಗೆ ಈ ರೀತಿಯ ತಡೆಗೋಡೆ ಮಾಡಲು ಯೋಜನೆ ರೂಪಿಸಿದ್ದೇ ತಪ್ಪು ಎನ್ನುವ ಆರೋಪ ಶುರುವಾಗಿದೆ.
undefined
ಹೌದು ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಭವನಕ್ಕೆ ನಿರ್ಮಿಸುತ್ತಿದ್ದ ಜರ್ಮನ್ ತಂತ್ರಜ್ಞಾನದ ತಡೆಗೋಡೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕುಸಿಯುವ ಹಂತ ತಲುಪಿ ಈಗ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಕಾಮಗಾರಿಗೆ ಬಳಸುತ್ತಿರುವ ಪರಿಕರಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿವೆ. ಜೊತೆಗೆ ತುಂಡುಗುತ್ತಿಗೆ ನೀಡಿ ಕಾಮಗಾರಿ ಹಾಳಾಗುವಂತೆ ಮಾಡಲಾಗಿದೆ ಎಂದು 2022 ರಲ್ಲೇ ಕಾಂಗ್ರೆಸ್ ಮುಖಂಡ ತನ್ನೀರಾ ಮೈನಾ ಅವರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ತನಿಖೆಗೆ ಮನವಿ ಮಾಡಿದ್ದರು. ಜುಲೈ 17 ರಂದು ತನಿಖೆಗೆ ಲೋಕಾಯುಕ್ತ ನ್ಯಾಯಾಲಯ ನೇಮಿಸಿರುವ ಗುಣಮಟ್ಟ ಪರಿಶೀಲನೆ ಎಕ್ಸ್ಪರ್ಟ್ ತಂಡ ಆಗಮಿಸುತ್ತಿದ್ದು ಪರಿಶೀಲನೆಗೆ ಮುಂದಾಗಿದೆ.
ಕಾಮಗಾರಿಯ ಯಾವ ಹಂತದಲ್ಲಿ ಸಮಸ್ಯೆ ಆಗಿದೆ, ಎಷ್ಟರ ಮಟ್ಟಿಗೆ ಗುಣಮಟ್ಟ ಕಾಪಾಡಲಾಗಿದೆ ಮುಂತಾದ ವಿಷಯಗಳನ್ನು ಅಧ್ಯಯನ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ. ತಂಡ ಅಧ್ಯಯನಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಕಾಂಗ್ರೆಸ್ ನಡುವೆ ಆರೋಪ ಪ್ರತ್ಯಾರೋಪಗಳು ಶುರುವಾಗಿವೆ. ಈ ಸ್ಥಳದಲ್ಲಿ ಜಿದ್ದಿಗಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ಮಾಡಲಾಯಿತು. ಕರ್ಣಂಗೇರಿಯ ಸಮೀಪ 7 ಎಕರೆ ಪ್ರದೇಶದಲ್ಲಿ ಮಾಡಬೇಕಾಗಿದ್ದ ಜಿಲ್ಲಾಧಿಕಾರಿ ಕಚೇರಿಯನ್ನು ಹಿಂದಿನ ಶಾಸಕರು ಹಠಕ್ಕೆ ಬಿದ್ದು ಈಗಿರುವ ಸ್ಥಳದಲ್ಲಿ ನಿರ್ಮಿಸಿದರು. ಅದರ ಹಿಂದೆಯೇ ತಡೆಗೋಡೆ ಸಮಸ್ಯೆ ಶುರುವಾಯಿತು.
ಆದರೆ 2018 ರಲ್ಲಿ ಕೊಡಗಿನಲ್ಲಿ ಭೂಕುಸಿತ ಆದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತಡೆಗೋಡೆ ಮಾಡಲೇಬೇಕಾಗಿ ಬಂತು. ತುಂಡು ಗುತ್ತಿಗೆಗಳನ್ನು ನೀಡಿ, ಕಳಪೆ ಕಾಮಗಾರಿ ಮಾಡಿದ್ದರಿಂದ ಇಂದು ಈ ಸ್ಥಿತಿ ತಲುಪಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿರುವ ತನ್ನೀರಾ ಮೈನಾ ಹೇಳುತ್ತಿದ್ದಾರೆ. ಆದರೆ ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಈ ಮಾದರಿಯ ತಡೆಗೋಡೆ ಮಾಡಿದ್ದೇ ತಪ್ಪು. ಹೀಗೆ ಮಾಡಿದರೆ ಕೊಡಗಿನ ಹವಾಗುಣಕ್ಕೆ ಸರಿಹೊಂದುವುದಿಲ್ಲ ಎಂದು ನನ್ನ ಅನುಭವದ ಆಧಾರದಲ್ಲಿ ಹೇಳಿದ್ದೆ ಎಂದಿದ್ದಾರೆ.
2018 ರಲ್ಲಿ ಕೊಡಗು ಉಸ್ತುವಾರಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರು ಜರ್ಮನಿ ಟೆಕ್ನಾಲಜಿ ಅಂತ ಈ ಮಾದರಿಯ ತಡೆಗೋಡೆ ಮಾಡಿದ್ದೇ ಇದಕ್ಕೆ ಕಾರಣ. ದೆಹಲಿಯ ಯಾವುದೋ ಕಂಪನಿ ನೀಡಿದ ತಂತ್ರಜ್ಞಾನದ ಮಾದರಿಯನ್ನು ಕೆ.ಜೆ. ಜಾರ್ಜ್ ಒಪ್ಪಿಕೊಂಡಿದ್ದಾರೆ. ಇಲ್ಲಿ ಕಾಮಗಾರಿಯ ಉಸ್ತುವಾರಿ ನೋಡಿಕೊಂಡ ಕಿರಿಯ ಎಂಜಿನಿಯರ್ ವಿರುದ್ಧ ಕ್ರಮಕೈಗೊಂಡರೆ ಏನು ಪ್ರಯೋಜನ. ಯೋಜನೆ ರೂಪಿಸಿದ್ದರ ಬಗ್ಗೆಯೂ ತನಿಖೆ ನಡೆಯಲಿ ಎಂದು ಒತ್ತಾಯಿಸುತ್ತಿದ್ದಾರೆ. ಮಂಗಳೂರು ರಸ್ತೆಯಲ್ಲೂ ಹಲವು ಕಡೆಗಳಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಸ್ಥಳೀಯ ಮಾದರಿಯಲ್ಲೇ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಿಸಲಾಗಿದ್ದು, ಯಾವುದೇ ಸಮಸ್ಯೆ ಆಗಿಲ್ಲ.
ಜಿಲ್ಲಾಧಿಕಾರಿಗಳ ಕಚೇರಿಗೆ ಸರಿಯಾದ ತಡೆಗೋಡೆ ಮಾಡದಿದ್ದರೆ ಮುಂದೊಂದು ದಿನ ಜಿಲ್ಲಾಧಿಕಾರಿ ಕಚೇರಿ ಪಾತಾಳದಲ್ಲಿ ಇರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಇದುವರೆಗೆ ಅಧಿಕಾರಿಗಳ ವಿರುದ್ಧ ದೂರು ಬರುವಂತೆ ಮಾಡಿದ್ದ ಜಿಲ್ಲಾಧಿಕಾರಿ ತಡೆಗೋಡೆ ಕಾಮಗಾರಿ ವಿಷಯ ಇದೀಗ ಎರಡು ಪಕ್ಷಗಳ ಹಾಲಿ, ಮಾಜಿ ಶಾಸಕರು ಮತ್ತು ಸಚಿವರ ವಿರುದ್ಧ ಕೆಸರೆರಚಾಟಕ್ಕೆ ಕಾರಣವಾಗಿದೆ.