ಶಿರಾ ಉಪಚುನಾವಣೆಗೆ ಪಕ್ಷಗಳ ಪೈಪೋಟಿ : ಯಾವ ಪಕ್ಷದಿಂದ ಯಾರಿಗೆ ಟಿಕೆಟ್?

By Sujatha NR  |  First Published Aug 31, 2020, 8:04 AM IST

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಉಪ ಚುನಾವಣಾ ಕ್ಷೇತ್ರಗಳು ಈಗ ರಂಗೇರಿವೆ. ಶಿರಾ ಕ್ಷೇತ್ರದಲ್ಲಿ ಪಕ್ಷಗಳ ಪೈಪೋಟಿ ಜೋರಾಗಿದೆ. 


 ತುಮಕೂರು (ಆ.31):  ಜೆಡಿಎಸ್‌ ಶಾಸಕರಾಗಿದ್ದ ಬಿ. ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರಚುನಾವಣೆಗೆ ಸದ್ದಿಲ್ಲದೆ ಅಖಾಡ ಸಜ್ಜಾಗುತ್ತಿದ್ದು, ಆಡಳಿತಾರೂಢ ಬಿಜೆಪಿಯಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಸದ್ಯ ಜೆಡಿಎಸ್‌ನಿಂದ ಸತ್ಯನಾರಾಯಣ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡುವ ಸಂಬಂಧ ಚರ್ಚೆ ನಡೆದಿದೆ. ಜೊತೆಗೆ ಜಿ.ಪಂ. ಮಾಜಿ ಸದಸ್ಯ ಸಿ.ಆರ್‌. ಉಮೇಶ್‌, ಚಿತ್ರದುರ್ಗ ಮಾಜಿ ಸಂಸದ ಸಿ.ಪಿ. ಮೂಡಲಗಿರಿಯಪ್ಪ ಅವರ ಪುತ್ರ ರಾಜೇಶಗೌಡ, ಕಲ್ಕೆರೆ ರವಿಕುಮಾರ್‌, ಉಗ್ರೇಶ್‌ ಅವರ ಹೆಸರು ಕೇಳಿ ಬರುತ್ತಿದೆ.

Tap to resize

Latest Videos

ಬಿಎಸ್‌ವೈ ಸಂಪುಟದಲ್ಲಿ ಈ ಇಬ್ಬರಿಗೆ ಸಚಿವ ಸ್ಥಾನ ಪಕ್ಕಾ?...

ಇನ್ನು ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋಲುಂಡಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಕೂಡ ಈ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರೂ, ಜಯಚಂದ್ರ ಅವರಿಗೇ ಕಾಂಗ್ರೆಸ್‌ ಬಿ ಫಾರಂ ನೀಡುವ ಸಾಧ್ಯತೆಯೇ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಈ ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಯಾವತ್ತೂ ಸದ್ದು ಮಾಡಿಲ್ಲ. ಕ್ಷೇತ್ರದ ಮುಖಂಡರಾದ ಎಸ್‌.ಆರ್‌. ಗೌಡ, ಬಿ.ಕೆ. ಮಂಜುನಾಥ್‌, ಬಿ. ಗೋವಿಂದಪ್ಪ ಮೊದಲಾದ ಆಕಾಂಕ್ಷಿಗಳಾಗಿದ್ದದ್ದರೂ ಈ ಬಾರಿ ಕ್ಷೇತ್ರದ ಹೊರಗಿನವರೇ ಇಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಪಕ್ಷ ಅಧಿಕಾರದಲ್ಲಿರುವುದರಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಗೆಲ್ಲುವ ಲೆಕ್ಕಾಚಾರ ನಡೆದಿದೆ.

ಹಳ್ಳಿಯಲ್ಲಿ ಪಕ್ಷ ಸಂಘಟೆ ಮಾಡಿದ ಬಿಜೆಪಿ ನಾಯಕ ಈಗ ದಿಲ್ಲಿ ಪ್ರತಿನಿಧಿ...!...

ಪಕ್ಷದ ಜಿಲ್ಲಾಧ್ಯಕ್ಷರೂ ಆಗಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್‌ಗೌಡ ಅವರು ಶಿರಾ ಕ್ಷೇತ್ರದಿಂದ ಅದೃಷ್ಟಪರೀಕ್ಷೆಗೆ ಒಲವು ತೋರಿದ್ದಾರೆ. ತುಮಕೂರು ನಗರ ಕ್ಷೇತ್ರದ ಮಾಜಿ ಶಾಸಕ ಸೊಗಡು ಶಿವಣ್ಣ ಅವರು ಈ ಕ್ಷೇತ್ರದಿಂದ ಕಣಕ್ಕಿಳಿಯಲು ಸದ್ದಿಲ್ಲದೇ ಪ್ರಯತ್ನ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ತುಮಕೂರು ನಗರ ಕ್ಷೇತ್ರದ ಟಿಕೆಟ್‌ ಸಿಗದೇ ಇದ್ದುದರಿಂದ ಈ ಬಾರಿ ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದಿಂದ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಸಂಘ ಪರಿವಾರದ ಬೆಂಬಲವೂ ಇದೆ ಎನ್ನಲಾಗುತ್ತಿದೆ.

ಈ ನಡುವೆ ಕಾಂಗ್ರೆಸ್ಸಿನ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅವರು ಬಿಜೆಪಿ ಮುಖಂಡರೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ವಲಸೆ ಬಂದು ಕಣಕ್ಕಿಳಿಯುವ ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ಗೆ ಪ್ರತಿಷ್ಠೆ:

ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರವನ್ನು ಶತಾಯಗತಾಯ ಉಳಿಸಿಕೊಳ್ಳಬೇಕೆಂಬ ದೊಡ್ಡ ಒತ್ತಡದಲ್ಲಿ ಜೆಡಿಎಸ್‌ ಇದೆ. ಈ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್‌ ವರಿಷ್ಠರು ತೊಡಗಿದ್ದಾರೆ. ಒಂದು ವೇಳೆ ಜೆಡಿಎಸ್‌ ಪಕ್ಷವು ಸತ್ಯನಾರಾಯಣ ಅವರ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್‌ ನೀಡಿದರೆ ಆಗ ಸತ್ಯನಾರಾಯಣ ಅವರ ಪುತ್ರನನ್ನೇ ಬಿಜೆಪಿಗೆ ಕರೆತಂದು ಕಣಕ್ಕೆ ಇಳಿಸುವ ಪ್ರಯತ್ನ ನಡೆಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.

ಜಯಚಂದ್ರಗೆ ಸೋಲಾಗಿತ್ತು:

ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಪರಾಭವಗೊಳಿಸಿ ಮೂರನೇ ಬಾರಿಗೆ ಸತ್ಯನಾರಾಯಣ್‌ ವಿಧಾನಸಭೆಗೆ ಪ್ರವೇಶಿಸಿದ್ದರು. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಶಿರಾ ವಿಧಾನಭಾ ಕ್ಷೇತ್ರಕ್ಕೆ ವಲಸೆ ಬಂದ ಜಯಚಂದ್ರ 2008 ಮತ್ತು 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಸತತ ಎರಡು ಸೋಲಿನಿಂದ ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ಸತ್ಯನಾರಾಯಣ ಅನುಕಂಪದ ಅಲೆಯಲ್ಲಿ ಜಯಗಳಿಸಿದ್ದರು.

click me!