
ವಿಜಯಪುರ: 3 ಕೋಟಿ ರು. ಹಣಕ್ಕಾಗಿ ಬೇಡಿಕೆ ಇಟ್ಟು, ತಮ್ಮ ವಿರುದ್ಧ ಹನಿಟ್ರ್ಯಾಪ್‌ಗೆ ಸಂಚು ನಡೆಸಿದ್ದಾಳೆ. ಅಲ್ಲದೆ, ತಮ್ಮ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ದೂರಿ ಕೂಡಲಸಂಗಮ ಪೀಠದ ಮಾಜಿ ಸ್ವಾಮೀಜಿ ಬಸವ ಜಯಮೃತ್ಯುಂಜಯ ಅವರು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಏ.4ರಂದು ದಾಖಲಿಸಿದ ದೂರಿನನ್ವಯ ಮಹಿಳೆ ಸೇರಿ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
3 ಕೋಟಿ ರು.ಗೆ ಬೇಡಿಕೆ ಇಟ್ಟು ತಮ್ಮ ವಿರುದ್ಧ ಹನಿಟ್ರ್ಯಾಪ್‌ಗೆ ಸಂಚು ರೂಪಿಸಿದ್ದಾಳೆ. ಫೆಬ್ರವರಿ 11ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ಮಹಿಳೆ ಹಾಗೂ ಇತರರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಾಮೀಜಿ ದೂರಿನಲ್ಲಿ ಆರೋಪಿಸಿದ್ದಾರೆ.
ಇದೇ ವೇಳೆ, ಮಹಿಳೆ ಕೂಡ ಸ್ವಾಮೀಜಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸಂತ್ರಸ್ತೆ ಮಹಿಳೆಯಿಂದ ಅಧಿಕೃತ ದೂರು ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆದರೆ, ಮಹಿಳೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಅಧಿಕೃತ ವಿಳಾಸದಲ್ಲೂ ಇಲ್ಲ, ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ, ಮಹಿಳೆ ಹಾಗೂ ಖಾಸಗಿ ಚಾನಲ್ ಎಂಡಿ ಸೇರಿದಂತೆ ಆರೋಪಿಗಳಿಗಾಗಿ ಪೊಲೀಸರು ಬೆಂಗಳೂರು, ಮಂಡ್ಯ, ವಿಜಯಪುರ, ಪಕ್ಕದ ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.