
ಬಾಗಲಕೋಟೆ (ಏ.9): ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನವು ಅತ್ಯಂತ ಚುರುಕಿನಿಂದ ಸಾಗುತ್ತಿದೆ. ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಯತ್ತ ಆಗಮಿಸುತ್ತಿದ್ದು, 11 ಗಂಟೆಯವರೆಗೆ ಕ್ಷೇತ್ರದಲ್ಲಿ ಶೇ. 27.82ರಷ್ಟು ಮತದಾನ ದಾಖಲಾಗಿದೆ. ಇನ್ನು ಮತಗಟ್ಟೆ ಸಂಖ್ಯೆ 167ರಲ್ಲಿ ಮತಗಟ್ಟೆ ಸಿಬ್ಬಂದಿಯ ಎಡವಟ್ಟಿನಿಂದಾಗಿ ಕೆಲಕಾಲ ಗೊಂದಲ ಉಂಟಾಯಿತು. ಮತದಾರರ ಪಟ್ಟಿಯಲ್ಲಿ ಮಗನ ಹೆಸರಿಗೆ ಮಾರ್ಕ್ ಮಾಡುವ ಬದಲು ತಂದೆಯ ಹೆಸರಿಗೆ ಸಿಬ್ಬಂದಿ ಮಾರ್ಕ್ ಮಾಡಿದ್ದರು. ಇದರಿಂದ ಸ್ಥಳದಲ್ಲಿ ಮತದಾರರು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು. ಬಳಿಕ ಎಚ್ಚೆತ್ತುಕೊಂಡ ಸಿಬ್ಬಂದಿ ತಪ್ಪನ್ನು ಸರಿಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ತಮ್ಮ ಪತ್ನಿ ಹಾಗೂ ಕುಟುಂಬ ಸಮೇತರಾಗಿ ಹಳದಿ ಶಾಲು ಧರಿಸಿ ಬಂದು ಮತಗಟ್ಟೆ ಸಂಖ್ಯೆ 166ರಲ್ಲಿ ಹಕ್ಕು ಚಲಾಯಿಸಿದರು. ಈ ವೇಳೆ ಏಷಿಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರು ಕೆಲವು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡರು. ಬೆಳಗಾವಿ ಸೇರಿದಂತೆ ಹೊರ ಜಿಲ್ಲೆಯ ಹಲವರು ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು, ಹಣ ಮತ್ತು ಹೆಂಡ ಹಂಚುವ ಮೂಲಕ ಗೂಂಡಾಗಿರಿ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಪ್ರಚಾರ ಮುಗಿಸಿ ಹೋಗಿದ್ದಾರೆ. ಚುನಾವಣೆ ವೇಳೆ 'ಗೃಹಲಕ್ಷ್ಮಿ' ಹಣ ಹಾಕಿದ್ದಕ್ಕೆ ಆಯೋಗ ಪ್ರಶ್ನೆ ಮಾಡಿದ್ದರೂ, ಸಿಎಂ ಅವರು ಆಯೋಗಕ್ಕೆ ಬಗ್ಗುವುದಿಲ್ಲ ಎಂದು ಹೇಳಿರುವುದು ಅವರ ಅಹಂಕಾರವನ್ನು ತೋರಿಸುತ್ತದೆ. ಇದು ಶೋಭೆ ತರುವಂತದ್ದಲ್ಲ ಎಂದು ಟೀಕಿಸಿದರು.
ಗ್ರಾಮೀಣ ಭಾಗದಲ್ಲಿ ಮತದಾನ ಅತ್ಯಂತ ಚುರುಕಾಗಿದೆ. ವಿಶೇಷವಾಗಿ ಶಿರೂರು ಗ್ರಾಮದಲ್ಲಿ 12 ಸಾವಿರ ಮತದಾರರಿದ್ದು, ಭರ್ಜರಿ ಮತದಾನ ನಡೆಯುತ್ತಿದೆ. ಅಂಧ ವೃದ್ಧೆಯೊಬ್ಬರನ್ನು ಅವರ ಗರ್ಭಿಣಿ ಸೊಸೆ ಮತದಾನಕ್ಕೆ ಕರೆತಂದು ಮಾನವೀಯತೆ ಮೆರೆದರು. ಬಿಸಿಲನ್ನು ಲೆಕ್ಕಿಸದೆ ವೃದ್ಧರು ಬಡಿಗೆ ಹಿಡಿದುಕೊಂಡು ಹಾಗೂ ವಿಕಲಚೇತನರು ವೀಲ್ ಚೇರ್ ಮೂಲಕ ಬಂದು ತಮ್ಮ ಹಕ್ಕು ಚಲಾಯಿಸುತ್ತಿರುವ ದೃಶ್ಯಗಳು ಕಂಡುಬಂದವು.
ಬಾಗಲಕೋಟೆಯ ಪಿಂಕ್ (ಸಖಿ) ಮತಗಟ್ಟೆ ಸಂಖ್ಯೆ 195ರಲ್ಲಿ ಮತದಾರರ ಹಬ್ಬದ ಕಳೆ ಮನೆಮಾಡಿದೆ. ಇಲ್ಲಿ ಒಟ್ಟು 1,094 ಮತದಾರರಿದ್ದು, ಅದರಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮತ್ತು ಮಹಿಳೆಯರೇ ಇದ್ದಾರೆ. ಕಾಲೇಜು ವಿದ್ಯಾರ್ಥಿನಿಯರು ತಮ್ಮ ವೋಟರ್ ಐಡಿ ಹಿಡಿದು ಸಂಭ್ರಮದಿಂದ ಸರತಿ ಸಾಲಿನಲ್ಲಿ ನಿಂತಿದ್ದರು. ಇವರಿಗೆ ವಿಶೇಷ ಭದ್ರತೆಗಾಗಿ ಪೊಲೀಸ್ ಹಾಗೂ ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.