
ಹುಬ್ಬಳ್ಳಿಯ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಸಿವಿಲ್ ಕೋರ್ಟ್‌ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕೋರ್ಟ್ ಕಟಕಟೆಯಲ್ಲಿ ಸಾಕ್ಷಿ ಹೇಳುವ ಸಂದರ್ಭದಲ್ಲೇ ಹೃದಯಾಘಾತದಿಂದ ಪೊಲೀಸ್ ಅಧಿಕಾರಿಯ ತಂದೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಆಕಸ್ಮಿಕ ಘಟನೆಯಿಂದ ಕೋರ್ಟ್ ಆವರಣದಲ್ಲಿ ಕ್ಷಣಕಾಲ ಶೋಕದ ವಾತಾವರಣ ನಿರ್ಮಾಣವಾಯ್ತು.
ಮೃತರನ್ನು ಕೃಷ್ಣ ಲಕ್ಷಣಸಾ ಪವಾರ್ (69) ಎಂದು ಗುರುತಿಸಲಾಗಿದ್ದು, ಅವರು ಹಾವೇರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ ಪವಾರ್ ಅವರ ತಂದೆಯಾಗಿದ್ದಾರೆ. ಕೃಷ್ಣ ಪವಾರ್ ಮೂಲತಃ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಗೂಡೂರು ಗ್ರಾಮದ ನಿವಾಸಿಯಾಗಿದ್ದರು.
ಮಾಹಿತಿಯಂತೆ, ಕೃಷ್ಣ ಪವಾರ್ ಅವರು ಖಾಸಗಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ಮಂಗಳವಾರ ಹುಬ್ಬಳ್ಳಿಯ ಸಿವಿಲ್ ಕೋರ್ಟ್‌ಗೆ ಹಾಜರಾಗಿದ್ದರು. ಕೋರ್ಟ್ ಕಟಕಟೆಯಲ್ಲಿ ನ್ಯಾಯಾಧೀಶರ ಎದುರು ಸಾಕ್ಷಿ ನೀಡುತ್ತಿದ್ದ ಸಂದರ್ಭದಲ್ಲೇ ಅಕಸ್ಮಿಕವಾಗಿ ಎದೆನೋವು ಕಾಣಿಸಿಕೊಂಡು, ಕ್ಷಣಾರ್ಧದಲ್ಲೇ ಕುಸಿದು ಬಿದ್ದರು. ತಕ್ಷಣ ನ್ಯಾಯಾಲಯದಲ್ಲಿದ್ದವರು ಸಹಾಯಕ್ಕೆ ಧಾವಿಸಿದರೂ, ಹೃದಯಾಘಾತದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ತಂದೆ ಕೋರ್ಟ್‌ನಲ್ಲೇ ಕುಸಿದು ಸಾವನ್ನಪ್ಪಿರುವುದನ್ನು ಕಂಡ ಪುತ್ರ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ ಪವಾರ್ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಕಾನೂನು ಪ್ರಕ್ರಿಯೆಯ ಭಾಗವಾಗಿ ತಂದೆಯನ್ನು ಕೋರ್ಟ್‌ಗೆ ಕರೆತಂದಿದ್ದ ಪುತ್ರನಿಗೆ ಈ ಘಟನೆ ಭಾರೀ ಆಘಾತ ತಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮೃತರ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸಿದ ಅವರು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ದುರ್ಘಟನೆಯಿಂದ ನ್ಯಾಯಾಲಯ ಆವರಣದಲ್ಲಿ ಕೆಲಕಾಲ ವಿಚಾರಣಾ ಪ್ರಕ್ರಿಯೆಗಳು ಸ್ಥಗಿತಗೊಂಡು, ಶೋಕದ ವಾತಾವರಣ ಆವರಿಸಿತು. ಸಾರ್ವಜನಿಕರು, ವಕೀಲರು ಹಾಗೂ ನ್ಯಾಯಾಲಯ ಸಿಬ್ಬಂದಿ ಮೃತ ಕೃಷ್ಣ ಪವಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.