ಫ್ರೀ ಎಣ್ಣೆ ಕೊಡದಿದ್ದಕ್ಕೆ ಬಾರ್ ಗೆ ಬೆಂಕಿಯಿಟ್ಟ ಪುಂಡರು! ಓನರ್‌ ಕಾರಿಗೂ ಬೆಂಕಿ ಹಚ್ಚಿ ಪರಾರಿ

Published : Jan 03, 2026, 05:06 PM IST
Mandya

ಸಾರಾಂಶ

ಮಂಡ್ಯದ ಕೆ.ಆರ್.ಪೇಟೆಯಲ್ಲಿ ಉಚಿತವಾಗಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಪುಂಡರು ಬಾರ್ ಮತ್ತು ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ದುಷ್ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಮಂಡ್ಯ: ಎಣ್ಣೆ ಕೊಡದಿದ್ದಕ್ಕೆ ಪುಂಡರು ಬಾರ್‌ ಗೆ ಬೆಂಕಿ ಹಚ್ಚಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಗಸರಹಳ್ಳಿ ಗೇಟ್ ಸಮೀಪ, ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಪುಂಡರು ಬಾರ್‌ಗೆ ಬೆಂಕಿ ಹಚ್ಚಿದ್ದು, ಪುಂಡರ ಈ ವರ್ತನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಅಗಸರಹಳ್ಳಿ ಗ್ರಾಮದ ಪರಮೇಶ್ ಎಂಬುವರಿಗೆ ಸೇರಿದ ‘ಈಗಲ್ ಬಾರ್ ಅಂಡ್ ರೆಸ್ಟೋರೆಂಟ್’ ನಲ್ಲಿ ಈ ದುರ್ಘಟನೆ ನಡೆದಿದೆ.

ಮಾಹಿತಿಯಂತೆ, ಮುರುಕನಹಳ್ಳಿ ಗ್ರಾಮದ ರಕ್ಷಿತ್ ಹಾಗೂ ಆತನ ಇಬ್ಬರು ಸ್ನೇಹಿತರು ಬಾರ್‌ಗೆ ತೆರಳಿ ಉಚಿತವಾಗಿ ಮದ್ಯದ ಬಾಟಲ್ ನೀಡುವಂತೆ ಒತ್ತಾಯಿಸಿದ್ದಾರೆ. ಬಾರ್ ಸಿಬ್ಬಂದಿ ಹಾಗೂ ಮಾಲೀಕರು ಫ್ರೀ ಮದ್ಯ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಪುಂಡರು ಗಲಾಟೆಗೆ ಇಳಿದಿದ್ದಾರೆ.

ಬಾರ್ ಮತ್ತು ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ

ಮದ್ಯ ಕೊಡದಿದ್ದಕ್ಕೆ ಕೋಪಗೊಂಡ ರಕ್ಷಿತ್ ಮತ್ತು ಆತನ ತಂಡ, ಬಾರ್ ಕಟ್ಟಡದ ಮೇಲೆ ಹಾಗೂ ಬಾರ್ ಮಾಲೀಕರ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಪುಂಡರ ಈ ಹೇಯ ಕೃತ್ಯದ ಸಂಪೂರ್ಣ ದೃಶ್ಯಗಳು ಬಾರ್‌ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಘಟನೆಯಿಂದ ಬಾರ್‌ನ ಮುಂಭಾಗ ಹಾಗೂ ಕಾರಿಗೆ ಭಾರೀ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಈ ಘಟನೆ ಸ್ಥಳೀಯರಲ್ಲಿ ಭೀತಿ ಮತ್ತು ಆತಂಕವನ್ನು ಮೂಡಿಸಿದೆ.

ಪೊಲೀಸ್ ತನಿಖೆ ಆರಂಭ

ಘಟನೆಯ ಮಾಹಿತಿ ಪಡೆದ ತಕ್ಷಣ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧಾರವಾಗಿ ತೆಗೆದುಕೊಂಡು ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

PREV
Read more Articles on
click me!

Recommended Stories

Ballari Banner Row:  ಎಸ್ಪಿ ಪವನ್ ನೆಜ್ಜೂರ್ ದುಡುಕಿನ ನಿರ್ಧಾರಕ್ಕೆ ಸರ್ಕಾರದ ಒತ್ತಡವೇ ಕಾರಣ - ಸಂಸದ ರಾಘವೇಂದ್ರ
ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ವೇಳೆ ಬಂದ ಸುಂಟರಗಾಳಿ; ಕೂದಲೆಳೆ ಅಂತರದಲ್ಲಿ ಬದುಕುಳಿದ ಸತೀಶ್ ಜಾರಕಿಹೊಳಿ!