ಮಕ್ಕಳ ಕಳ್ಳರ ವದಂತಿ: ಪೊಲೀಸರಿಗೆ ತಲೆನೋವು..!

By Kannadaprabha NewsFirst Published Sep 15, 2022, 2:29 PM IST
Highlights

ಹಳ್ಳಿ, ಪಟ್ಟಣಗಳಲ್ಲಿ ಸಾರ್ವಜನಿಕರು ಭಯಭೀತರಾಗಿದ್ದಲ್ಲದೇ, ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. 

ಜಗದೀಶ ವಿರಕ್ತಮಠ

ಬೆಳಗಾವಿ(ಸೆ.15): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಲ್ಲಿ ಮಕ್ಕಳನ್ನು ತೆಗೆದುಕೊಂಡು ಹೋಗಿದ್ದಾರೆ, ಇಲ್ಲಿ ಮಕ್ಕಳನ್ನು ಕಳ್ಳತನ ಮಾಡಲಾಗಿದೆ ಎಂಬ ಕಳ್ಳರ ಹಾವಳಿ ಕುರಿತು ಅಂತೆ, ಕಂತೆ ಎಂಬ ವದಂತಿಯಿಂದಾಗಿ ಸಾರ್ವಜನಿಕರಲ್ಲಿ ಜಾಗೃತಿ, ಮನವೊಲಿಸುವುದು, ಕುರಿತು ಖಾಕಿಗೆ ಚಿಂತೆ ಎದುರಾಗಿದೆ. ಇದರಿಂದಾಗಿ ಪೊಲೀಸರು ವದಂತಿಯಿಂದ ತಲೆ ನೋವಾಗಿ ಪರಿಣಮಿಸಿದೆ.

ಬೆಳಗಾವಿ, ಗದಗ, ಕೊಪ್ಪಳ, ವಿಜಯಪುರ, ಧಾರವಾಡ, ಬಾಗಲಕೋಟೆ, ಹಾವೇರಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರ ಹಾವಳಿ ಹೆಚ್ಚಾಗಿದೆ ಎಂಬ ವಿಡಿಯೊ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಇದರಿಂದಾಗಿ ಹಳ್ಳಿ, ಪಟ್ಟಣಗಳಲ್ಲಿ ಸಾರ್ವಜನಿಕರು ಭಯಭೀತರಾಗಿದ್ದಲ್ಲದೇ, ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ದಿನದಿಂದ ದಿನಕ್ಕೆ ಮಕ್ಕಳ ಕಳ್ಳರ ಹಾವಳಿ ವದಂತಿ ಹೆಚ್ಚಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ದರೋಡೆಕೋರರ ಹಾವಳಿ ಎಂಬುವುದರ ಬಗ್ಗೆ ಚರ್ಚೆಯೂ ಜೋರಾಗಿದೆ.

ಚೆನ್ನೈನಲ್ಲಿ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿಗೆ ಚಿಕಿತ್ಸೆ: ಆರೋಗ್ಯದ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ

ಭಿಕ್ಷುಕರ, ಸಾಧುಗಳ ವೇಷದಲ್ಲಿ ಗ್ರಾಮಕ್ಕೆ ಲಗ್ಗೆ ಎಂಬ ಗುಲ್ಲು:

ವಿವಿಧ ಕಡೆಗಳಿಂದ ಆಗಮಿಸಿ ಹಳ್ಳಿಗಳಲ್ಲಿ ಭಿಕ್ಷೆ, ದವಸ ಧಾನ್ಯ, ಹಣ, ಆಹಾರ ಬೇಡಿ ಬದುಕು ಸಾಗಿಸುತ್ತಿರುವವರಿಗೂ ಈ ಮಕ್ಕಳ ಕಳ್ಳರ ವದಂತಿಯಿಂದ ತೀವ್ರ ಸಮಸ್ಯೆಯಾಗಿದೆ. ಕೆಲವು ವಿಡಿಯೊ ಹಾಗೂ ಫೋಟೋಗಳಲ್ಲಿ ಸಾಧು-ಸಂತರ, ನಾಗಾ ಸಾಧುಗಳ ಹಾಗೂ ಭಿಕ್ಷುಕರ ವೇಷದಲ್ಲಿ ಗ್ರಾಮಕ್ಕೆ ಬಂದು ಭಿಕ್ಷೆ ಬೇಡುವ ನೆಪದಲ್ಲಿ ಗ್ರಾಮದಲ್ಲಿನ ಪ್ರತಿ ಮನೆ-ಮನೆಗೆ ಭೇಟಿ ನೀಡಿ, ಮಕ್ಕಳ ಹಾಗೂ ಮನೆಯ ಪರಿಸ್ಥಿತಿ ಬಗ್ಗೆ ತಿಳಿದುಕೊಂಡು, ಯಾರೂ ಇಲ್ಲದ ಸಮಯದಲ್ಲಿ ಮಕ್ಕಳ ಕರೆದುಕೊಂಡು ಹೋಗುತ್ತಾರೆ. ಮನೆಗಳಲ್ಲಿ ಕಳ್ಳತನ ಹಾಗೂ ದರೋಡೆ ಮಾಡುತ್ತಿದ್ದಾರೆ ಎಂಬ ವಂದತಿ ಗ್ರಾಮೀಣ ಭಾಗಗಳಲ್ಲಿ ವ್ಯಾಪಕ ಚರ್ಚೆಯಲ್ಲಿದೆ. ಇದರಿಂದಾಗಿ, ಮಹಿಳೆ, ಮಕ್ಕಳು ಮನೆಯಿಂದ ಹೊರಗೆ ಹೋಗಲು ಆತಂಕ ಪಡುವಂತಾಗಿದೆ. ಇದು ಪೊಲೀಸರ ಚಿಂತೆಗೆ ಕಾರಣವಾಗಿದೆ.

Belagavi: ಹಾಲಭಾವಿಯಲ್ಲಿ ಗೃಹಿಣಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

112 ಸಂಖ್ಯೆ ಕರೆ ಮಾಡಿ

ಬೆಳಗಾವಿ ಜಿಲ್ಲೆಯ ನಾಲ್ಕು ಕಡೆ ಈಗಾಗಲೇ ಮಕ್ಕಳ ಕಳ್ಳರು ಎಂದು ಭಾವಿಸಿ ಹಲವು ಅಮಾಯಕರನ್ನು ಸಾರ್ವಜನಿಕರು ಥಳಿಸಿದ್ದಾರೆ. ಚನ್ನಮ್ಮನ ಕಿತ್ತೂರಿನಲ್ಲಿ ಪ್ಲಾಸ್ಟಿಕ್‌ ಬುಟ್ಟಿಮಾರುವವರು, ಖಾನಾಪುರ ತಾಲೂಕಿನ ನಂದಗಡದಲ್ಲಿ ಮಾನಸಿಕ ಅಸ್ವಸ್ಥ, ಸವದತ್ತಿ ತಾಲೂಕಿನ ಶಿರಸಂಗಿಯಲ್ಲಿ ನಾಗಪುರದಿಂದ ಆಶ್ರಮವೊಂದಕ್ಕೆ ಡೋನೇಷನ್‌ ಕೇಳಲು ಬಂದವರು, ಗೋಕಾಕ ತಾಲೂಕಿನ ಕುಲಗೋಡದಲ್ಲಿ ನಾಗಾಸಾಧುಗಳು ಮಕ್ಕಳ ಕಳ್ಳರೆಂಬ ಶಂಕೆಗೆ ಒಳಗಾಗಿ ಸಾರ್ವಜನಿಕರಿಂದ ಥಳಿತಕ್ಕೆ ಒಳಗಾಗಿದ್ದಾರೆ.

ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಮಕ್ಕಳ ಕಳ್ಳತನ ಪ್ರಕರಣ ದಾಖಲಾಗಿಲ್ಲ. ಸಾರ್ವಜನಿಕ ಯಾವುದೇ ಕಾರಣಕ್ಕೂ ಭಯ ಪಡಬೇಕಿಲ್ಲ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಹಾಗೇನಾದರೂ ಗ್ರಾಮದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜಿಲ್ಲೆಯ 1266 ಗ್ರಾಮಗಳಲ್ಲಿ ಮಕ್ಕಳ ಕಳ್ಳರ ವದಂತಿ ಕುರಿತು ಬುಧವಾರ ಪೊಲೀಸ್‌ ಇಲಾಖೆಯಿಂದ ಜಾಗೃತಿ ಮೂಡಿಸಲಾಗಿದೆ.
 

click me!