ಆರಕ್ಷರ ಮೇಲೆ ಹಲ್ಲೆ: ಕುಖ್ಯಾತ ರೌಡಿ ಮೇಲೆ ಪೊಲೀಸರ ಗುಂಡು

By Kannadaprabha NewsFirst Published Feb 22, 2020, 10:22 AM IST
Highlights

ಹಲ್ಲೆ ನಡೆಸಿ ಪರಾರಿ ಆಗಿದ್ದ ರೌಡಿಗೆ ಪೊಲೀಸರ ಗುಂಡು| ಕುಖ್ಯಾತ ಹಲ್ಲೆಕೋರ ತುಮಕೂರಿನ ಸ್ಟೀಫನ್‌| ಮಾರಕಾಸ್ತ್ರ ಜಪ್ತಿಗೆ ಬಂದಾಗ ಪರಾರಿಗೆ ಯತ್ನ| ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲು|

ಬೆಂಗಳೂರು(ಫೆ.22): ತುಮಕೂರಿನಲ್ಲಿ ಗೂಂಡಾಗಿರಿ ನಡೆಸಿ ಬೆಂಗಳೂರಿಗೆ ಬಂದು ಆಶ್ರಯ ಪಡೆಯುತ್ತಿದ್ದ ಕುಖ್ಯಾತ ರೌಡಿಯೊಬ್ಬನ ಮೇಲೆ ಬಾಗಲಗುಂಟೆ ಸಮೀಪ ಪೊಲೀಸರು ಗುಂಡು ಹಾರಿಸಿ ಶುಕ್ರವಾರ ಬಂಧಿಸಿದ್ದಾರೆ.

ತುಮಕೂರಿನ ಜಯನಗರದ ಸ್ಟೀಫನ್‌ ಫರ್ನಾಂಡಿಸ್‌ ಅಲಿಯಾಸ್‌ ಗೂಂಡಾ (29) ಎಂಬಾತನಿಗೆ ಗುಂಡೇಟು ಬಿದ್ದಿದ್ದು, ಮಲ್ಲಸಂದ್ರ ಸಮೀಪ ತುಮಕೂರಿನ ತಿಲಕನಗರ ಹಾಗೂ ಸೋಲದೇವನಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಹದಿನೈದು ದಿನಗಳ ಹಿಂದೆ ತುಮಕೂರಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಸ್ಟೀಫನ್‌ನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಜಪ್ತಿಗೆ ಮಲ್ಲಸಂದ್ರ ಸಮೀಪ ಕರೆದೊಯ್ದಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್‌ಸ್ಪೆಕ್ಟರ್‌ಗಳಾದ ಶಿವಸ್ವಾಮಿ ಹಾಗೂ ಪಾರ್ವತಮ್ಮ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ತಿಳಿಸಿದ್ದಾರೆ.

ಸುಖಾಸುಮ್ಮನೆ ಹಲ್ಲೆ ನಡೆಸುವ ಖಯಾಲಿ:

ತುಮಕೂರಿನ ಜಯನಗರದ ಸ್ಟೀಫನ್‌ ಫರ್ನಾಂಡಿಸ್‌ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಆತನ ವಿರುದ್ಧ ಕೊಲೆ, ಕೊಲೆ ಯತ್ನ, ಬೆದರಿಕೆ ಸೇರಿದಂತೆ 14 ಪ್ರಕರಣಗಳು ದಾಖಲಾಗಿವೆ. ಈ ಅಪರಾಧ ಇತಿಹಾಸದ ಹಿನ್ನೆಲೆಯಲ್ಲಿ ಸ್ಟೀಫನ್‌ ವಿರುದ್ಧ ತುಮಕೂರಿನ ಪೊಲೀಸರು ರೌಡಿಶೀಟರ್‌ ತೆರೆದಿದ್ದರು. ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಸುಖಾಸುಮ್ಮನೆ ಹಲ್ಲೆ ನಡೆಸಿ ದಾದಾಗಿರಿ ನಡೆಸುವುದು ಆತನ ಖಯಾಲಿಯಾಗಿತ್ತು. ಇತ್ತೀಚಿಗೆ ತುಮಕೂರಿನಲ್ಲಿ ಸ್ಟೀಫನ್‌ ವಿಪರೀತ ಹಾವಳಿಗೆ ಜನರು ಭೀತಿಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಕೃತ್ಯಗಳ ತನಿಖೆ ನಡೆಸುತ್ತಿದ್ದ ತುಮಕೂರು ಪೊಲೀಸರು, ಆರು ತಿಂಗಳಿಂದ ಸ್ಟೀಫನ್‌ಗೆ ಹುಡುಕಾಟ ನಡೆಸಿದ್ದರು. ಅಲ್ಲದೆ, ಹಳೆಯ ಪ್ರಕರಣಗಳ ವಿಚಾರಣೆಗೆ ಗೈರಾದ ಕಾರಣಕ್ಕೆ ಆತನ ವಿರುದ್ಧ ನ್ಯಾಯಾಲಗಳು ಎಂಟಕ್ಕೂ ಹೆಚ್ಚು ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿದ್ದರು. ಹದಿನೈದು ದಿನಗಳ ಹಿಂದೆ ಜಯನಗರ ಸಮೀಪ ವ್ಯಕ್ತಿಯೊಬ್ಬರಿಗೆ ಮಚ್ಚಿನಿಂದ ಹೊಡೆದು ದೌರ್ಜನ್ಯ ಎಸಗಿದ ಬಳಿಕ ಸ್ಟೀಫನ್‌, ಬೆಂಗಳೂರಿಗೆ ಬಂದು ತನ್ನ ಸ್ನೇಹಿತರ ಮನೆಯಲ್ಲಿ ಆಶ್ರಯ ಪಡೆದಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಸ್ಟೀಫನ್‌ ಇರುವ ಬಗ್ಗೆ ಮಾಹಿತಿ ಪಡೆದ ತುಮಕೂರಿನ ತಿಲಕನಗರ ಠಾಣೆ ಇನ್‌ಸ್ಪೆಕ್ಟರ್‌ ಪಾರ್ವತಮ್ಮ, ಆರೋಪಿಗೆ ಬಲೆ ಬೀಸಿದ್ದರು. ಅಷ್ಟರಲ್ಲಿ ಸೋಲದೇವನಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ಶಿವಸ್ವಾಮಿ ಅವರಿಗೆ ಸ್ಟೀಫನ್‌ ಚಟುವಟಿಕೆಗಳ ಕುರಿತು ಸುಳಿವು ಸಿಕ್ಕಿತು. ಕೊನೆಗೆ ಎರಡು ನಗರ ಪೊಲೀಸರು ಆರೋಪಿ ಪತ್ತೆಗೆ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. 

ಕೊನೆಗೆ ಶುಕ್ರವಾರ ರಾತ್ರಿ ಬಾಗಲಗುಂಟೆ ಸಮೀಪ ಗೆಳೆಯರ ಜೊತೆಯಲ್ಲಿದ್ದಾಗ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಂತರ ಮಲ್ಲಸಂದ್ರ ಕೆರೆ ಬಳಿಗೆ ಕಾರು ಮತ್ತು ಮಾರಕಾಸ್ತ್ರ ಜಪ್ತಿಗೆ ಆತನನ್ನು ಪೊಲೀಸರು ಕರೆದೊಯ್ದಿದ್ದರು. ಆಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಆರೋಪಿ ಮುಂದಾಗಿದ್ದಾನೆ. 

ಈ ಹಂತದಲ್ಲಿ ಕಾನ್‌ಸ್ಟೇಬಲ್‌ಗಳಾದ ತಿಲಕನಗರ ಠಾಣೆಯ ಮಂಜುನಾಥ್‌ ಹಾಗೂ ಸೋಲದೇವನಹಳ್ಳಿಯ ಶ್ರೀನಿವಾಸ್‌ ಅವರಿಗೆ ಪೆಟ್ಟಾಗಿದೆ. ಆಗ ಎಚ್ಚೆತ್ತ ಇನ್‌ಸ್ಪೆಕ್ಟರ್‌ಗಳು, ತಮ್ಮ ಸವೀರ್‍ಸ್‌ ಪಿಸ್ತೂಲ್‌ನಿಂದ ಸ್ಟೀಫನ್‌ಗೆ ಗುಂಡು ಹೊಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!