ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಗೆ ಇಂದು ಕರಾಳ ದಿನ. ಇಡೀ ಪೊಲೀಸ್ ಇಲಾಖೆಯಲ್ಲಿ ನೀರವ ಮೌನ. ಕಳೆದ 13 ವರ್ಷಗಳಿಂದ ಒಡನಾಡಿಯಾಗಿದ್ದ ತುಂಗಾಳನ್ನು ಕಳೆದುಕೊಂಡ ಕಂಬನಿ ಮಿಡಿದ ಸಿಬ್ಬಂದಿ
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ
ದಾವಣಗೆರೆ(ಆ.26): ತುಂಗಾ ಅಂದ್ರೆ ಇಡೀ ಜಿಲ್ಲೆಯ ಪೊಲೀಸ್ ಇಲಾಖೆಗೆ ಹೆಮ್ಮೆಯ ಕಿರೀಟ, ಆಕೆಯನ್ನು ನೋಡಿದರೆ ಅಪರಾಧಿಗಳ ಎದೆಯಲ್ಲಿ ನಡುಕ ಗ್ಯಾರಂಟಿ. ಅಂತಹ ಡೇರಿಂಗ್ ಇರೋ ಲೇಡಿ ಸಿಗಂ ಈಗ ಕೊನೆಯುಸಿರೆಳೆದಿದ್ದು ಇಡೀ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಇಡೀ ಪೊಲೀಸ್ ಇಲಾಖೆ ಆಕೆಯ ಅಗಲಿಕೆಗೆ ಕಂಬನಿ ಮಿಡಿದಿದ್ದು, ಅಂತಿಮ ವಿದಾಯ ಹೇಳಿದ್ದಾರೆ. ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಗೆ ಇಂದು ಕರಾಳ ದಿನ. ಇಡೀ ಪೊಲೀಸ್ ಇಲಾಖೆಯಲ್ಲಿ ಒಂಥರ ನೀರವ ಮೌನ. ಕಳೆದ 13 ವರ್ಷಗಳಿಂದ ಒಡನಾಡಿಯಾಗಿದ್ದ ತುಂಗಾಳನ್ನು ಕಳೆದುಕೊಂಡ ಸಂಕಟ. ಅದೆಷ್ಟೋ ಸಿಬ್ಬಂದಿಗಳು ತುಂಗಾಳ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅದೆಷ್ಟೋ ಅಪರಾಧ ಪ್ರಕರಣಗಳನ್ನು ಭೇದಿಸುತ್ತಿದ್ದ ಶ್ವಾನ ಈಗ ನೆನಪು ಮಾತ್ರ. ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆಯ ಕಿರೀಟವಾದ ಪೊಲೀಸ್ ಡಾಗ್ ತುಂಗಾ ಅನಾರೋಗ್ಯದಿಂದ ಇಂದು ಸಾವನ್ನಪ್ಪಿದೆ.
ಆ. 15 ರಂದು ನೀಡಿದ ಅದ್ಭುತ ಪ್ರದರ್ಶನವೇ ಲಾಸ್ಟ್ ಡಿಟೆಕ್ಟಿವ್
ಕಳೆದ ಆ. 15ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಈ ಬಾರಿ ಪೊಲೀಸ್ ಡಾಗ್ ಸ್ಕ್ವಾಡ್ ಗೆ ವಿಶೇಷ ಆಹ್ವಾನ ನೀಡಲಾಗಿತ್ತು.ಅಂದು ತುಂಗಾ ಅತ್ಯುತ್ತಮ ವಾಗಿ ಡಿಟೆಕ್ಟಿವ್ ಪ್ರದರ್ಶನ ನೀಡಿದ್ದಳು, ಆದರೆ ಅದಾದ ಎರಡು ದಿನಕ್ಕೆ ಜ್ವರ ಕಾಣಿಸಿಕೊಂಡಿತ್ತು. ವೈದ್ಯರು ರಕ್ತ ಪರೀಕ್ಷೆ ಮಾಡಿಸಿದಾಗ ಡೆಂಗ್ಯೂ ಎಂದು ದೃಡಪಟ್ಟಿದೆ. ಏಳೆಂಟು ದಿನಗಳ ಕಾಲ ಚಿಕಿತ್ಸೆ ನೀಡಿದ್ದು, ಬಿಳಿ ರಕ್ತ ಕಣ ಕಡಿಮೆಯಾದ ಹಿನ್ನಲೆ ಇಂದು ದಾವಣಗೆರೆ ಪಶುವೈದ್ಯ ಚಿಕಿತ್ಸಾಲಯದಲ್ಲಿ ಸಾವನ್ನಪ್ಪಿದೆ. ತುಂಗಾ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರಿಗೆ ತುಂಗಾಳ ಮೃತ ದೇಹವನ್ನು ಡಿಆರ್ ಗ್ರೌಂಡ್ ನಲ್ಲಿ ಇಟ್ಟು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
DAVANAGERE; ಮಾಯಕೊಂಡ ತಾಲೂಕು ಕೇಂದ್ರ ಘೋಷಣೆ ಮಾಡಲು ಮುಂದುವರಿದ ಹೋರಾಟ
ದಾವಣಗೆರೆ ಎಸ್ಪಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸರಗಿ, ಡಿವೈಎಸ್ಪಿ ತಾಮ್ರದ್ವಜ, ಡಿಎಸ್ ಆರ್ ಬಿ ಡಿಎಸ್ ವೈ ಬಿ ಬಸವರಾಜ್ ಎಲ್ಲಾ ಪಿಎಸ್ ಐ ,ಸರ್ಕಲ್ ಇನ್ಸಪೆಕ್ಟರ್ ಹಾಜರಿದ್ದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿದ್ದಾರೆ .ಮೂರು ಸುತ್ತು ಗುಂಡು ಹಾರಿಸಿ ಒಬ್ಬ ಪೇದೆ ಸಾವನ್ನಪ್ಪಿದರೆ ನೀಡುವ ಎಲ್ಲಾ ಗೌರವ ಮರ್ಯಾದೆ ನೀಡಿದರು.
ತುಂಗಾಳನ್ನು ನೋಡಿಕೊಳ್ಳುತ್ತಿದ್ದ ಪೊಲೀಸ್ ಸಿಬ್ಬಂದಿಗಳಾದ ಪ್ರಕಾಶ್, ರಾಘವೇಂದ್ರ,ಟ್ರೈನರ್ ಶಫಿ ಇತರರ ಕಣ್ಣಲ್ಲಿ ನೀರು ಜಿನಿಗಿ ತಮ್ಮ ಕುಟುಂಬದ ಸದಸ್ಯರಲ್ಲೊಬ್ಬರನ್ನು ಕಳೆದುಕೊಂಡಂತೆ ದುಃಖ ಯಾತನೆ ಅನುಭವಿಸಿದ್ದಾರೆ. ಇನ್ನು ತುಂಗಾ ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು 650 ಕ್ಕೂ ಹೆಚ್ಚು ಪ್ರಕರಣಗಳನ್ನು ಬೇಧಿಸಿದೆ. ಅದರಲ್ಲಿ 71 ಕೊಲೆ ಪ್ರಕರಣಗಳು, 35 ಕಳ್ಳತನ ಹಾಗೂ ದರೋಡೆ ಪ್ರಕರಣಗಳನ್ನು ಭೇದಿಸಿದ್ದು, ಇಬ್ಬರಿಗೆ ಗಲ್ಲು ಶಿಕ್ಷೆ ನಾಲ್ವರಿಗೆ ಜೀವಾವಧಿ ಶಿಕ್ಷೆ ಕೊಡಿಸಿದ್ದು ಅದರ ಚಾಕಚಕ್ಯತೆ ಚಾಣಾಕ್ಷತೆಗೆ ಹಿಡಿದ ಕೈಗನ್ನಡಿ.
ಪೊಲೀಸರಿಗೆ ತಲೆನೋವಾಗಿದ್ದ ಪ್ರಕರಣಗಳನ್ನು ಕೂಡ ತುಂಗಾ ಭೇದಿಸಿದ್ದು, ಪೊಲೀಸರಿಗೆ ಅಚ್ಚುಮೆಚ್ಚಿನ ಶ್ವಾನವಾಗಿತ್ತು. ಇದು ಅಪರಾಧಿಗಳ ವಾಸನೆ ಹಿಡಿದು ಸೂಮಾರು 16 ಕಿಲೋಮೀಟರ್ ದೂರ ಕ್ರಮಿಸಿ ಅಪರಾಧಿಗಳ ನ್ನು ಹಿಡಿದ ಕೀರ್ತಿ ತುಂಗಾಗಿದೆ. ಒಟ್ಟಾರೆಯಾಗಿ ತುಂಗಾಳ ಅಗಲಿಕೆಯಿಂದ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ತುಂಗಾ ಈಗ ನೆನಪು ಮಾತ್ರ.