* ಹಳ್ಳಿ ಹಳ್ಳಿಗಳಲ್ಲಿಯೂ ಪ್ರತಿಜ್ಞಾವಿಧಿ
* ಅಗತ್ಯವಿದ್ದರೆ ಸ್ವಯಂ ದೂರು ದಾಖಲು
* ಅಸ್ಪೃಶ್ಯತೆ ನಿವಾರಣೆಗೆ ಟೊಂಕಕಟ್ಟಿನಿಂತ ಪೊಲೀಸ್ ಇಲಾಖೆ
ಕೊಪ್ಪಳ(ಸೆ.25): ಮಿಯ್ಯಾಪುರ ಘಟನೆ ಮರಳುಕಳಿಸದಂತೆ ಪೊಲೀಸ್ ಇಲಾಖೆ ಪಣ ತೊಟ್ಟಿರುವಂತೆ ಕಾಣುತ್ತಿದೆ. ಆ ಘಟನೆಯಲ್ಲಿ ಆಗಿರುವ ಇರುಸುಮುರುಸು ತಪ್ಪಿಸಿಕೊಳ್ಳಲು ಈಗ ಜಿಲ್ಲಾದ್ಯಂತ ಹಳ್ಳಿ ಹಳ್ಳಿಗಳಲ್ಲಿಯೂ ಅಸ್ಪೃಶ್ಯತಾ(Untouchability) ನಿವಾರಣೆ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಲಾಗುತ್ತದೆ.
ಕೊಪ್ಪಳ(Koppal) ತಾಲೂಕಿನ ಬೆಳವಿನಾಳ ಗ್ರಾಮದಲ್ಲಿ ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ವಿಶ್ವನಾಥ ಹಿರೇಗೌಡ್ರ ನೇತೃತ್ವದಲ್ಲಿ ಶುಕ್ರವಾರ ಅಸ್ಪೃಶ್ಯತಾ ನಿವಾರಣಾ ಜಾಗೃತಿಯನ್ನು ಮೂಡಿಸಿ, ಪ್ರತಿಜ್ಞಾವಿಧಿಯನ್ನು ಬೋಧಿಸಲಾಗಿದೆ.
ಗ್ರಾಮದ ಅಷ್ಟು ಜನರನ್ನು ಒಂದೆ ಕಡೆ ಸೇರಿಸಿ, ಒಂದೇ ಅಂಗಳಲ್ಲಿ ಬೇಧ, ಭಾವ ಇಲ್ಲದೆ ಸಾಲಾಗಿ ನಿಲ್ಲಿಸಿ ನಾವೆಲ್ಲರೂ ಒಂದು, ಜಾತಿ, ಧರ್ಮವನ್ನು ಮೀರಿಯೂ ನಾವೆಲ್ಲ ಸಮಾನರು ಎನ್ನುವ ತತ್ವದ ಬೋಧನೆಯನ್ನು ಮಾಡಲಾಗಿದೆ.
ಮಿಯ್ಯಾಪುರ ಘಟನೆ ಜಿಲ್ಲೆಗೊಂದು ಕಪ್ಪು ಚುಕ್ಕೆಯಾಗಿದ್ದು, ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಮುಜುಗರ ಎದುರಿಸಬೇಕಾಗಿದೆ. ಇಂಥ ಘಟನೆ ಮರುಕಳಿಸಬಾರದು ಎನ್ನುವ ಕಾರಣಕ್ಕಾಗಿ ಈಗ ಪೊಲೀಸ್(Police) ಇಲಾಖೆ ಭೇದ, ಭಾವ ಮೂಡಬಹುದಾದ ಗ್ರಾಮಗಳನ್ನು ಗುರುತಿಸಿ, ಅಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಿಂತ ಮಿಗಿಲಾಗಿ ದೇವಸ್ಥಾನ ಪ್ರವೇಶ, ಹೋಟೆಲ್‌ನಲ್ಲಿ ಎಲ್ಲರೂ ಒಂದೇ ರೀತಿ ಇರುವುದು ಸೇರಿದಂತೆ ಮೊದಲಾದ ಅಂಶಗಳನ್ನು ಒತ್ತಿ ಹೇಳಲಾಗುತ್ತದೆ. ಇದು ಅಕ್ಷಮ್ಯ ಅಪರಾಧ ಮತ್ತು ಇಂಥದ್ದಕ್ಕೆ ಅವಕಾಶ ಕೊಡುವುದು ಕಾನೂನು ಪ್ರಕಾರ ಅಪರಾಧವಾಗಿದೆ ಎನ್ನುವುದನ್ನು ಜಾಗೃತಿಯ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.
ಕೊಪ್ಪಳ: ಅಸ್ಪೃಶ್ಯತೆಯ ಕರಾಳತೆ ಬಯಲು ಮಾಡಿದ ಬಾಲಕ, ಐವರ ಬಂಧನ
ಖಡಕ್ ಸೂಚನೆ:
ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್ ಅವರು ಶುಕ್ರವಾರ ಅಧಿಕಾರಿಗಳ ಸಭೆಯೊಂದನ್ನು ನಡೆಸಿ, ಖಡಕ್ ಸೂಚನೆ ನೀಡಿದ್ದಾರೆ. ಜಿಲ್ಲಾದ್ಯಂತ ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಿ, ಜನರಲ್ಲಿ ಜಾಗೃತಿ ಮೂಡಿಸಿ, ಮನಸ್ಸಿನ ಮೈಲಿಗೆಯನ್ನು ತೆಗೆದು ಹಾಕಿ ಎಂದು ಸೂಚಿಸಿದ್ದಾರೆ. ಈ ವಿಷಯದಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ. ಹೀಗಾಗಿ, ತಪ್ಪಿತಸ್ಥರು ಯಾರೇ ಇದ್ದರೂ ಗುರುತಿಸಿ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ ಎನ್ನಲಾಗಿದೆ.
ಸ್ವಯಂ ದೂರು:
ಅಸ್ಪೃಶ್ಯತೆ ಆಚರಣೆ ಮಾಡುವುದು ಗೊತ್ತಾಗುತ್ತಿದ್ದಂತೆ ಅವರ ವಿರುದ್ಧ ಪೊಲೀಸ್ ಇಲಾಖೆಯೇ ಸ್ವಯಂ ದೂರು ದಾಖಲು ಮಾಡಲು ಮುಂದಾಗಿದೆ. ರಾಜಿ ಪಂಚಾಯಿತಿ ಪ್ರಶ್ನೆಯೇ ಇಲ್ಲ. ಮಿಯ್ಯಾಪುರ ಘಟನೆಯಲ್ಲಿಯೂ ರಾಜಿ ಮಾಡಿರುವುದು ತಪ್ಪು ಮತ್ತು ಅವರು ದೂರು ನೀಡದಿದ್ದರೂ ಸ್ವಯಂ ದೂರು ದಾಖಲಿಸುವುದಕ್ಕೂ ಅವಕಾಶ ಇದ್ದರೂ ಅಲ್ಲಿ ಮಾಡಿರಲಿಲ್ಲ. ಆದರೆ, ಈಗ ಜಿಲ್ಲಾದ್ಯಂತ ಅಸ್ಪೃಶ್ಯತೆ ಆಚರಣೆ ಎಲ್ಲೇ ಕಂಡು ಬಂದರೂ ಕೂಡಲೇ ಸ್ವಯಂ ದೂರು ದಾಖಲು ಮಾಡಿ ಎಂದು ಎಸ್ಪಿ ಟಿ. ಶ್ರೀಧರ ಅವರು ಖಡಕ್ ಸಂದೇಶ ರವಾನಿಸಿದ್ದಾರೆ.
ಜಿಲ್ಲೆಯಲ್ಲಿ ಅಸ್ಪೃಶ್ಯತೆಯ ಆಚರಣೆಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಹೀಗಾಗಿ ಅಂಥ ವಾತಾವರಣ ಇರುವ ಕಡೆ ಪ್ರತಿಜ್ಞಾವಿಧಿ ಬೋಧಿಸಲಾಗುತ್ತದೆ. ಜಾಗೃತಿಯನ್ನು ಮೂಡಿಸಲಾಗುತ್ತದೆ. ಅಗತ್ಯಬಿದ್ದರೆ ಸ್ವಯಂ ದೂರು ದಾಖಲಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಕೊಪ್ಪಳ ಎಸ್ಪಿ ಟಿ. ಶ್ರೀಧರ ತಿಳಿಸಿದ್ದಾರೆ.