ವರಿಷ್ಠರ ಭರವಸೆ : ರಾಜೀನಾಮೆ ನಿರ್ಧಾರ ಕೈ ಬಿಟ್ಟ ಜೆಡಿಎಸ್ ಮುಖಂಡ

By Kannadaprabha NewsFirst Published Sep 25, 2021, 12:52 PM IST
Highlights
  • ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ
  • ರಾಜೀನಾಮೆ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಹೇಳಿದ ಜೆಡಿಎಸ್ ಮುಖಂಡ

ನಾಗಮಂಗಲ (ಸೆ.25): ಜೆಡಿಎಸ್ (JDS) ನಿಷ್ಠಾವಂತ ಕಾರ್ಯಕರ್ತರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಅವರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸುವುದಾಗಿ ವರಿಷ್ಠರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ರಾಜೀನಾಮೆ (Resignation) ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ತಿಳಿಸಿದರು. 

ಪಟ್ಟಣದ ಮನ್ಮುಲ್ (MANMUL) ಉಪಕೇಂದ್ರದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಶಾಸಕರಿದ್ದರೂ ಸಹ ಇತ್ತಿಚಿನ ದಿನಗಳಲ್ಲಿ ನಿಷ್ಠಾವಂತ ಹಾಗೂ ಮೂಲ ಜೆಡಿಎಸ್ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಬಗ್ಗೆ ದೂರು ಕೇಳಿಬರುತ್ತಿದ್ದವು ಎಂದರು. 

ಈ ಬಗ್ಗೆ ಹಲವು ಬಾರಿ ವರಿಷ್ಠರ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ  ನನಗೆ ಅಧಿಕಾರಕ್ಕಿಂತ ಪಕ್ಷದ ಕಾರ್ಯಕರ್ತರ  ಹಿತ ಕಾಯುವುದೇ ಮಖ್ಯವೆಂದು ಭಾವಿಸಿ ಮನ್ಮುಲ್ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೆ ಎಂದರು. 

ಜೆಡಿಎಸ್‌ ಸೇರುವ ಒಲವು ತೋರಿದ್ರಾ ಕಾಂಗ್ರೆಸ್ ಹಿರಿಯ ನಾಯಕ? ತೋಟದ ಮನೆಯಲ್ಲಿ ಮಹತ್ವದ ಚರ್ಚೆ

ಈ ಎಲ್ಲಾ ಬೆಳವಣಿಗೆಯ ಮಾಹಿತಿ ಅರಿತ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು(HD Devegowda) ಮತ್ತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ನನ್ನೊಂದಿಗೆ ದೂರವಾಣಿ ಮೂಲಕ ಎರಡು ಗಂಟೆಗೂ ಹೆಚ್ಚುಕಾಲ ಚರ್ಚಿಸಿದರು ಎಂದು ತಿಳಿಸಿದರು. 

ಜೆಡಿಎಸ್ ಶಾಸಕ ಕಾಂಗ್ರೆಸ್ ಸೇರ್ಪಡೆ : ನಾವಿಕನಿಲ್ಲದ ನಾವೆಯಾದ ದಳ

ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಯಾವೊಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಯಾವುದೇ ಗೊಂದಲಗಳಿದ್ದರೂ ಸಹ ಪ್ರತ್ಯೇಕವಾಗಿ ಒಂದು ದಿನ ಮೀಸಲಿಟ್ಟು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ  ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಲು ಎಲ್ಲಾ ಮುಖಂಡರಿಗೂ ತಿಳುವಳಿಕೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ರಾಜೀನಾಮೆ ನೀಡುವ ನಿರ್ಧಾರವನ್ನು ವಾಪಸ್ ಪಡೆದಿರುವುದಾಗಿ ಹೇಳಿದರು. 

ತಮಗೆ ತಾಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನ ಅಥವಾ ಮನ್ಮುಲ್ ಅಧ್ಯಕ್ಷ ಸ್ಥಾನ ಸಿಗಲಿಲ್ಲವೆಂಬ ಬೇಸರವಿಲ್ಲ. ಆದರೆ ನಿಷ್ಠಾವಂತ ಮೂಲ ಜೆಡಿಎಸ್ ಕಾರ್ಯಕರ್ತರನ್ನು  ಕಡೆಗಣಿಸಲಾಗುತಿತ್ತು. ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಅವರ ಕೆಲಸ ಕಾರ್ಯಗಳು ಆಗುತ್ತಿರಲಿಲ್ಲ. ಸ್ವ ಪಕ್ಷ ಶಾಸಕರಿದ್ದರೂ ಸಹ ಬಹಳ ನೋವು ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿಸಿದರು.

click me!