* ಮುಳ್ಳಯ್ಯನಗಿರಿಗೆ ಜೀಪಿನ ಟಾಪ್ ಮೇಲೆ ಕುಳಿತು ಹೊರಟ ಯುವಕ-ಯುವತಿಯರು
* ಕೇರ್ ಲೆಸ್ ಆಗಿ ಹೋಗುತ್ತಿದ್ದವರ ವಿರುದ್ಧ ಪ್ರಕರಣ ದಾಖಲು
* ಅಮಲು ಪದಾರ್ಥ ಸೇವಿಸಿ ಮುಳ್ಳಯ್ಯನಗಿರಿಗೆ ಹೋಗುತ್ತಿದ್ದ ಯುವಕ-ಯುವತಿಯರು
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಮೇ.31): ರಾಜ್ಯದಲ್ಲಿ ಅತ್ಯಂತ ಎತ್ತರವಾದ ಪ್ರದೇಶ ಮುಳ್ಳಯ್ಯನಗಿರಿ. ಅಂಕುಡೊಂಕಿನ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು, ವಾಹನ ಸವಾರರು ಜೀವವನ್ನು ಕೈಯಲ್ಲಿಡಿದು ಸಾಗುವಂತ ಪರಿಸ್ಥಿತಿ ಇದೆ. ರಸ್ತೆಯ ಅಕ್ಕಪಕ್ಕದಲ್ಲಿ ಆಳವಾದ ಪ್ರಪಾತವನ್ನು ಹೊಂದಿರುವಂತಹ ಸ್ಪಾಟ್ ಇದಾಗಿದೆ. ಇಂತಹ ರಸ್ತೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ ಪ್ರವಾಸಿಗರು ಕಾನೂನು ಗಾಳಿಗೆ ತೂರಿದ ಪರಿಣಾಮ ಪೊಲೀಸರಿಂದ ಕೇಸ್ ದಾಖಲಿಸಿಕೊಂಡಿದ್ದಾರೆ.
ಜೀಪಿನ ಟಾಪ್ ಮೇಲೆ ಕುಳಿತು ಪ್ರಯಾಣ
ರಾಜ್ಯದಲ್ಲಿ ಅತ್ಯಂತ ಎತ್ತರವಾದ ಪ್ರದೇಶವಾದ ಮುಳ್ಳಯ್ಯನಗಿರಿಯ ಸೊಬಗನ್ನು ಸವಿಯಲು ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ವರ್ಷ ಪೂರ್ತಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತಹ ಸೊಬಗನ್ನು ಮುಳ್ಳಯ್ಯನಗಿರಿ ಪ್ರದೇಶ ಹೊಂದಿದೆ. ಜಿಲ್ಲೆಯ ನಿಸರ್ಗ ಸೌಂದರ್ಯ ಸವಿಯಲು ಬರುತ್ತಿರುವ ಕೆಲ ಪ್ರವಾಸಿಗರು ಮೋಜುಮಸ್ತಿಯಲ್ಲಿ ತೊಡಗಿದ್ದು ಅಂತವರಿಗೆ ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಗಿರಿ ಪ್ರದೇಶಕ್ಕೆ ಸಾಗುವಂತ ರಸ್ತೆ ತುಂಬಾನೇ ಅಪಾಯಕಾರಿ. ನುರಿತ ವಾಹನ ಚಾಲಕರು ಒಮ್ಮೊಮ್ಮೆ ಇಲ್ಲೇ ಆಯ ತಪ್ಪಿ ರಸ್ತೆ ಅಪಘಾತಕ್ಕೆ ಈಡಾಗುವಂತಹ ಹಲವು ಸಂದರ್ಭಗಳು ಇಲ್ಲಿ ಎದುರಾಗಿದೆ. ಇಂತಹ ಅಂಕುಡೊಂಕಿನ ರಸ್ತೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ ಕೆಲ ಪ್ರವಾಸಿಗರು ಮೋಜುಮಸ್ತಿಯಲ್ಲಿ ತೊಡಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇಂಥವರಿಗೆ ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು ರಸ್ತೆಯಲ್ಲಿ ಸಭ್ಯತೆಯಿಂದ ವರ್ತಿಸುವವರಿಗೆ ಪೊಲೀಸರು ಕಾನೂನಿನ ಪಾಠ ಮಾಡುತ್ತಿದ್ದಾರೆ.
ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ
NDPS ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬೊಲೆರೋ ವಾಹನ ಸೀಜ್
ಬೆಂಗಳೂರಿನಿಂದ ಆಗಮಿಸಿದ್ದ ಕೆಲ ಪ್ರವಾಸಿಗರು ಮುಳ್ಳಯ್ಯನ ಗಿರಿ ರಸ್ತೆಯಲ್ಲಿ ಮೋಜುಮಸ್ತಿಯಲ್ಲಿ ತೊಡಗಿದ್ದರು. ಅದೇ ರಸ್ತೆಯಲ್ಲಿ ಪೊಲೀಸರ ವಾಹನ ಬೀಟ್ ತಿರುಗುವಾಗ ಜೀಪಿನ ಟಾಪ್ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದವರು ಕಣ್ಣಿಗೆ ಬಿದ್ದಿದ್ದಾರೆ. ತಕ್ಷಣವೇ ಕಾರ್ಯ ಕಾರ್ಯಪ್ರವೃತ್ತರಾದ ಪೊಲೀಸರು ಜೀಪನ್ನು ನಿಲ್ಲಿಸಿ ಯುವಕ ಯುವತಿಯರ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ಯುವಕ-ಯುವತಿಯರು ಅಮಲು ಪದಾರ್ಥ ಸೇವಿಸಿ ಮುಳ್ಳಯ್ಯಗಿರಿಗೆ ಹೋಗುತ್ತಿದ್ದರು ಎಂದು ಹೇಳಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಕೇಸ್ ಹಾಕಲಾಗಿದ್ದು ಜಿಲ್ಲೆಯ ಮುಳ್ಳಯ್ಯಗಿರಿ ದೇವಿರಮ್ಮನ ಬೆಟ್ಟ ಕಳಸದ ಸುತ್ತಮುತ್ತಲ ಪ್ರದೇಶಗಳಿಗೆ ತೆರಳುವ ಪ್ರವಾಸಿಗರು ಇಂಥ ಕೃತಿಗಳಲ್ಲಿ ತೊಡಗಿರುವುದು ಸಾಮಾನ್ಯವಾಗಿದೆ. ಪ್ರವಾಸಿಗರ ಜೊತೆ ವಾಹನ ಸವಾರರ ಮೇಲೂ ಪ್ರಕರಣ ದಾಖಲಿಸಿ ಬೇಕೆನ್ನುವುದು ಸ್ಥಳೀಯರ ಒತ್ತಾಯವಾಗಿದೆ. ಕೆಎ 34 ಎಮ್ 6646 ಬೊಲೆರೋ ವಾಹನವನ್ನು ಸೀಜ್ ಮಾಡಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರವಾಸಿಗರಾದ ಸೈಯದ್, ಅಕ್ಷಯ್, ರವಿ, ಸತೀಶ್, ಡೆಲ್ಹ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾದಕ ದ್ರವ್ಯ ಸೇವನೆ ಶಂಕೆ
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸ್ವರ್ಣ ಜಿ.ಎಸ್.ಸಿಬ್ಬಂದಿಗಳಾದ ಬಸವರಾಜ್ ಮತ್ತು ಜಗದೀಶ್ ನೇತೃತ್ವದಲ್ಲಿ ವಾಹನವನ್ನು ಸೀಜ್ ಮಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪ್ರವಾಸಿಗರು ಅಮಲು ಪದಾರ್ಥ ಸೇವಿಸಿರುವ ಶಂಕೆ ಹಿನ್ನಲೆಯಲ್ಲಿ ಪೊಲೀಸ್ರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದ್ದಾರೆ. ಆರೋಪಿಗಳು ಯಾವುದೋ ಮಾದಕ ದ್ರವ್ಯವನ್ನು ಸೇವಿಸಿರುವುದು ಕಂಡುಬಂದಿರುವುದರಿಂದ ಇವರುಗಳ ವಿರುದ್ಧ ಎನ್‌ಡಿಪಿಎಸ್ ಅಡಿಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.