
ಬೆಂಗಳೂರು(ನ.22): ನಾಜೂಕಾಗಿ ಮಹಿಳೆಯರ ಮಾಂಗಲ್ಯ ಸರವನ್ನ ಕದಿಯುತ್ತಿದ್ದ ಕುಖ್ಯಾತಿಯ ಕಳ್ಳನನ್ನು ಬಂಧಿಸುವಲ್ಲಿ ನಗರದ ಸುಬ್ರಹ್ಮಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಖದೀಮನನ್ನು ಮಹಾದೇವ ಅಲಿಯಾಸ್, ಹೇಮಂತ್, ಬೈರೇಗೌಡ ಎಂದು ಗುರುತಿಸಲಾಗಿದೆ. ಈತ ಒಟ್ಟು ಮೂರು ಹೆಸರುಗಳಿಂದ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿದುಬಂದಿದೆ.
ಆರೋಪಿ ಮಹಾದೇವ ಮೊದಲಿಗೆ ಮಹಿಳೆಯರಿಗೆ ಮಾಲ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಬಳಿಕ ಆಟೋದಲ್ಲಿ ಮಹಿಳೆಯರಿಗೆ ಮಾಲ್ ವರೆಗೂ ಡ್ರಾಪ್ ಕೊಡುತ್ತಿದ್ದ ಎಂದು ತಿಳಿದು ಬಂದಿದೆ. ಮಹಾದೇವ ಮಾಲ್ ನಲ್ಲಿ ಕೆಲಸ ಮಾಡ್ಬೇಕಾದ್ರೆ ಮೈಮೇಲೆ ಚಿನ್ನ ಇರಬಾರದು ಬಿಚ್ಚಿ ಎಂದು ನಾಟಕ ತೆಗೆಯುತ್ತಿದ್ದ, ಮಾಂಗಲ್ಯ ಸರ,ಓಲೆ ಬಿಚ್ಚಿಸಿ ಡ್ಯಾಕ್ಯೂಮೆಂಟ್ ಜೆರಾಕ್ಸ್ ತರ್ತಿನಿ ಎಂದು ಹೇಳಿ ಸ್ಥಳದಿಂದ ಪರಾರಿಯಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೆಲಸದ ಆಸೆಗಾಗಿ ಮಹಿಳೆಯರು ಮಹದೇವ ಹೇಳಿದಂತೆ ಒಡವೆ ಬಿಚ್ಚಿಕೊಡ್ತಿದ್ದರು. ಹೀಗೆ ಒಡವೆ ಕಳೆದುಕೊಂಡವರಿಂದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇಲೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಖದೀಮ ಮಹಾದೇವನನ್ನು ಬಂಧಿಸಿದ್ದಾರೆ.
ಆರೋಪಿ ಮಹಾದೇವನಿಂದ 8 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.