ತಿಮ್ಮಯ್ಯನದೊಡ್ಡಿ ಫಾರಂಹೌಸ್‌ನಲ್ಲಿ ಮೋಜು ಮಸ್ತಿ, ಯುವಕರು ಪೊಲೀಸ್ ವಶಕ್ಕೆ| ಮೋಜು ಮಸ್ತಿಯಲ್ಲಿ ತೊಡಗಿದ್ದ 16 ಮಂದಿ ವಶಕ್ಕೆ| ರಾಮನಗರ ತಾಲೂಕಿನ ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ ನಡೆದ ಘಟನೆ|
ರಾಮನಗರ(ಜೂ.29): ತಿಮ್ಮಯ್ಯನದೊಡ್ಡಿ ಗ್ರಾಮದ ಖಾಸಗಿ ಫಾರಂಹೌಸ್ ಮೇಲೆ ರಾಮನಗರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಮೋಜು ಮಸ್ತಿಯಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ತಿಮ್ಮನ ದೊಡ್ಡಿ ಗ್ರಾಮದ ಫಾರಂ ಹೌಸ್‌ನಲ್ಲಿ ಬೆಂಗಳೂರಿನಿಂದ ಯುವಕರು ಬಂದು ಮದ್ಯಪಾನ ಮಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಕೋವಿಡ್ ನಿಯಮ ಉಲ್ಲಂಘಿಸಿ ಗ್ರಾಮದ ಸನಿಹಕ್ಕೆ ಬಂದು ಪಾರ್ಟಿ ನಡೆಸುತ್ತಿದ್ದಾರೆ ಎಂದು ಸ್ಥಳೀಯರು, ರಾಮನಗರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ರಾಮನಗರ ಗ್ರಾಮಾಂತರ ಸಬ್‌ಇನ್ಸ್‌ಪೆಕ್ಟರ್ ಗಂಗಾಧರ್ ಮತ್ತು ಸಿಬ್ಬಂದಿ ತಡರಾತ್ರಿ ಫಾರಂ ಹೌಸ್ ಮೇಲೆ ದಿಢೀರ್ ದಾಳಿ ನಡೆಸಿದರು.
ರಾಮನಗರ: ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗೆ ಓಡಾಟ, 8 ಮಂದಿ ವಿರುದ್ಧ FIR
ಕೋವಿಡ್ ನಿಯಮ ಉಲ್ಲಂಘಿಸಿ ಪಾರ್ಟಿಯಲ್ಲಿ ತೊಡಗಿದ್ದ 16 ಜನರನ್ನು ವಶಕ್ಕೆ ಪಡೆದು ಅವರ ಮೊಬೈಲ್ ಸ್ಥಳದಲ್ಲಿದ್ದ ಮದ್ಯ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಸ್ನೇಹಿತನ ಜನ್ಮದಿನದ ಪ್ರಯುಕ್ತ ಪಾರ್ಟಿ ನಡೆದಿತ್ತು. ಪಾರ್ಟಿಯಲ್ಲಿ ಭಾಗವಹಿಸಿದವರನ್ನು ಬೆಂಗಳೂರಿನ ಯುವಕರೆಂದು ತಿಳಿದು ಬಂದಿದೆ. ಫಾರಂಹೌಸ್ ಬೆಂಗಳೂರಿನ ಖಾಸಗಿ ವ್ಯಕ್ತಿಗೆ ಸೇರಿದ್ದು ಎನ್ನಲಾಗುತ್ತಿದೆ.