ಉರಗ ತಜ್ಞರ ಮನೆಗೇ ಬಂತು ವಿಷಕಾರಿ ಹಾವು

Published : Jul 21, 2019, 01:01 PM IST
ಉರಗ ತಜ್ಞರ ಮನೆಗೇ ಬಂತು ವಿಷಕಾರಿ ಹಾವು

ಸಾರಾಂಶ

ಜನರ ಮನೆಗೆ ಹಾವು ಬಂದಾಗ ಅದನ್ನು ಹಿಡಿದು ಕಾಡಿಗೆ ಬಿಡುವ ಉರಗ ತಜ್ಞರ ಮನೆಗೇ ವಿಷಕಾರಿ ಹಾವು ಬಂದಿದೆ. ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಶಿವಮೊಗ್ಗ(ಜು.21): ಅವರಿವರ ಮನೆಗೆ ಹಾವುಗಳು ಬಂದಾಗ ಉರಗ ತಜ್ಞರು ಬಂದು ಹಿಡಿದು ಕಾಡಿಗೆ ಬಿಟ್ಟು ಮನೆಯವರಲ್ಲಿ ನಿರಾಳತೆ ಮೂಡುವಂತೆ ಮಾಡುವುದು ಸಾಮಾನ್ಯ. ಆದರೆ, ಉರಗ ತಜ್ಞರ ಮನೆಗೇ ಈ ಹಾವುಗಳು ಹುಡುಕಿಕೊಂಡು ಬಂದರೆ? ಇಂತಹ ಘಟನೆ ಹೊಸನಗರ ತಾಲೂಕಿನ ನಗರದಲ್ಲಿ ನಡೆದಿದೆ.

ಇಲ್ಲಿನ ಉರಗ ತಜ್ಞ ನಾರಾಯಣ ಕಾಮತ್‌ ಮನೆಯ ಆವರಣದಲ್ಲಿ ಅಪರೂಪದ ವಿಷಕಾರಿ ಹಾವೊಂದು ಕಾಣಿಸಿಕೊಂಡಿದೆ. ಪತ್ನಿಯೇ ಪತಿಗೆ ಕರೆ ಮಾಡಿ ತಮ್ಮ ಮನೆಯಲ್ಲಿ ಹಾವು ಕಾಣಿಸಿಕೊಂಡ ಬಗ್ಗೆ ತಿಳಿಸಿದ್ದಾರೆ. ತಕ್ಷಣವೇ ಕಾಮತರು ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ.

ಅತ್ಯಂತ ವಿಷಕಾರಿ ಹಾವು:

ಇವರ ಮನೆಯಲ್ಲಿ ಕಾಣಿಸಿಕೊಂಡಿದ್ದು, ಕೋರಲ್‌ ಸ್ನೇಕ್‌ ಜಾತಿಯ ಹಾವು. ಇದು ಅಪರೂಪದ ವಿಷಕಾರಿ ಹಾವು. ಮಲೆನಾಡಿನಲ್ಲಿ ಇದನ್ನು ಹವಳದ ಹಾವು, ಹಪ್ಪಟೆ ಹಾವು ಎಂದೂ ಕರೆಯುತ್ತಾರೆ. ಆದರೆ, ಈ ಹಾವು ಕಚ್ಚಿ ಸತ್ತವರ ಸಂಖ್ಯೆ ಕಡಿಮೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಬಾಗಿರುವ ಕಾರಣ ಇದು ಕಚ್ಚಿದಾಗ ವಿಷವು ಕಚ್ಚಿಸಿಕೊಂಡ ವ್ಯಕ್ತಿ ಅಥವಾ ಪ್ರಾಣಿಯ ದೇಹ ಸೇರುವುದು ಕಡಿಮೆ ಎನ್ನುತ್ತಾರೆ ನಾರಾಯಣ ಕಾಮತ್‌. ಈ ಹಾವಿನ ಕೆಳಭಾಗ ಕೆಂಪು ಬಣ್ಣದಲ್ಲಿದ್ದು, ಮೇಲ್ಭಾಗ ಕಪ್ಪು ಬಣ್ಣದಲ್ಲಿರುತ್ತದೆ. ತಕ್ಷಣಕ್ಕೆ ಎರಡು ಹಾವು ಇದ್ದಂತೆ ಭಾಸವಾಗುತ್ತದೆ.

ಮೀನಿಗಾಗಿ ಹಾಕಿದದ್ದ ಬಲೆಯಲ್ಲಿ ಸಿಕ್ಕಿದ್ದು ಮೀನಲ್ಲ,ಮತ್ತೇನು?

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!