
ಚಿತ್ರದುರ್ಗ (ಏ.10): ಇತ್ತೀಚಿನ ದಿನಗಳಲ್ಲಿ ಶಿಕ್ಷಕರಿಂದಲೇ ಬಾಲಕಿಯರ ಮೇಲೆ ಬಲತ್ಕಾರಕ್ಕೆ ಯತ್ನಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಪಡುವಂತಾಗಿದೆ. ಅದಕ್ಕೆ ಇಂಬು ಕೊಡುವಂತೆ ಚಿತ್ರದುರ್ಗದಲ್ಲಿ ಮತ್ತೊಂದು ಪೋಕ್ಸೊ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ವಿದ್ಯೆ ಕಲಿಸಬೇಕಾದ ಗುರುವೇ ಕಾಮಪಿಶಾಚಿಯಾದ ಘನಘೋರ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಬೆಳಕಿಗೆ ಬಂದಿದೆ. 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ ಪುಸಲಾಯಿಸಿ ಅದೇ ಶಾಲೆಯ ಶಿಕ್ಷಕನೊಬ್ಬ ಬಲತ್ಕಾರ ಎಸಗಿದ್ದು ಇದರ ಪರಿಣಾಮ ವಿದ್ಯಾರ್ಥಿನಿ ಗರ್ಭವತಿಯಾಗಿದ್ದಾಳೆ ಪ್ರಕರಣ ಈಗ ಪೊಲೀಸ್ ಮೆಟ್ಟಿಲೇರಿದೆ.
ಚಳ್ಳಕೆರೆ ವ್ಯಾಪ್ತಿಯಲ್ಲಿ ಬರುವ ಹಿರಿಯ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕ ಹೆಚ್.ಓ. ರಾಜಣ್ಣ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಶಾಲಾ ಕೊಠಡಿಯೊಳಗೆ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಬಾಲಕಿ ಗರ್ಭ ಧರಿಸಿದ್ದಳು ಎನ್ನಲಾಗಿದೆ. ಪೋಷಕರಿಗೆ ತಿಳಿದರೆ ಸಮಸ್ಯೆ ಎಂದರಿತು ಆರೋಪಿ ಶಿಕ್ಷಕ ವಿದ್ಯಾರ್ಥಿನಿಗೆ ಗರ್ಭಪಾತ ಮಾಡಿಸಿದ್ದಾನೆಂದು ಆರೋಪಿಸಲಾಗಿದೆ.
ಬಾಲಕಿ ಗರ್ಭಿಣಿಯಾದ ವಿಷಯ ತಿಳಿಯುತ್ತಿದ್ದಂತೆಯೇ ವಿಷಯ ಮುಚ್ಚಿಹಾಕಲು ಆರೋಪಿ ಶಿಕ್ಷಕ ಯತ್ನಿಸಿದ್ದಾನೆ. ಮೊದಲೇ ಪ್ಲಾನ್ ಮಾಡಿಕೊಂಡಂತೆ ಚಳ್ಳಕೆರೆಯ ಲಕ್ಷ್ಮೀ ಶ್ರೀನಿವಾಸ ನರ್ಸಿಂಗ್ ಹೋಮ್‌ನ ವೈದ್ಯೆ ಶಂಕರಲಕ್ಷ್ಮೀ ಎಂಬುವವರ ಬಳಿ ಈ ವಿಷಯ ಮಾತಾಡಿ ಬಾಲಕಿಗೆ ಅಕ್ರಮವಾಗಿ ಗರ್ಭಪಾತ ಮಾಡಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲು
ವಿಷಯ ತಿಳಿದ ಮಕ್ಕಳ ರಕ್ಷಣಾಧಿಕಾರಿ ರೇಖಾ ಅವರು ನೀಡಿದ ದೂರಿನನ್ವಯ ಚಳ್ಳಕೆರೆ ತಳಕು ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ . ದೂರಿನ ಅನ್ವಯ ಕಾಮುಕ ಶಿಕ್ಷಕ ರಾಜಣ್ಣ ಹಾಗೂ ಸಹಕರಿಸಿದ ವೈದ್ಯೆ ಶಂಕರಲಕ್ಷ್ಮೀ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪೋಷಕರಲ್ಲಿ ಹೆಚ್ಚಿದ ಆತಂಕ
ಗುರುಗಳಂತೆ ಕಾಣುವ ಇಂಥ ಶಿಕ್ಷಕರೇ ಶಿಶುಕಾಮುಕರಾಗಿ ಬದಲಾಗುತ್ತಿರುವುದು ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಶಾಲೆಗೆ ಹೋದರೆ ಮಕ್ಕಳು ಸುರಕ್ಷಿತ ಎಂಬ ಪೋಷಕರ ನಂಬಿಕೆಗೆ ಈ ಘಟನೆ ದೊಡ್ಡ ಪೆಟ್ಟು ನೀಡಿದ್ದು, ಜಿಲ್ಲೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.