ಜಾಗೃತಿ ನಡುವೆಯೂ ಪೋಕ್ಸೊ, ಬಾಲ್ಯವಿವಾಹ ಕೇಸು ಹೆಚ್ಚಳ: ಅಪ್ರಾಪ್ತ ವಯಸ್ಸಲ್ಲೇ ದಾಂಪತ್ಯದ ಜವಾಬ್ದಾರಿ

By Kannadaprabha News  |  First Published Jun 29, 2024, 6:53 PM IST

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜನಜಾಗೃತಿಯ ನಡುವೆಯೂ ಬಳ್ಳಾರಿಯಲ್ಲಿ ಪೋಕ್ಸೊ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿವೆ. 


ಮಂಜುನಾಥ ಕೆ.ಎಂ.

ಬಳ್ಳಾರಿ (ಜೂ.29): ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜನಜಾಗೃತಿಯ ನಡುವೆಯೂ ಬಳ್ಳಾರಿಯಲ್ಲಿ ಪೋಕ್ಸೊ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿವೆ. ಕಳೆದ ಮೂರು ವರ್ಷಗಳಲ್ಲಾದ ಪ್ರಕರಣಗಳ ಏರಿಕೆ ಗಮನಿಸಿದರೆ ಪೋಕ್ಸೊ ಕಾಯ್ದೆ ಬಗ್ಗೆ ಇನ್ನು ಸಾಕಷ್ಟು ಜಾಗೃತಿಯ ಅಗತ್ಯವಿದ್ದು ಶಾಲಾ-ಕಾಲೇಜುಗಳು, ಗ್ರಾಮೀಣ ಭಾಗಗಳಲ್ಲಿ ಕಾಯ್ದೆ ಕುರಿತು ಅರಿವು ಮೂಡಿಸಬೇಕಾಗಿದೆ. ಇನ್ನು ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಸಹ ಗಣನೀಯವಾಗಿ ಹೆಚ್ಚಳವಾಗಿದ್ದು, ಅಪ್ರಾಪ್ತ ವಯಸ್ಸಿನಲ್ಲಿಯೇ ಮಕ್ಕಳಿಗೆ ದಾಂಪತ್ಯದ ಜವಾಬ್ದಾರಿ ನೀಡುವ ವಿಲಕ್ಷಣ ಪ್ರಕರಣಗಳು ಬೆಳಕಿಗೆ ಬಂದಿವೆ.

Latest Videos

undefined

ಬಾಲ್ಯವಿವಾಹ ತಡೆಗಟ್ಟಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಾಕಷ್ಟು ಕ್ರಮ ವಹಿಸುತ್ತಿದೆಯಾದರೂ ಕದ್ದುಮುಚ್ಚಿ ಮಾಡುವ ಮದುವೆಗಳನ್ನು ನಿಯಂತ್ರಿಸಲು ಕಷ್ಟಸಾಧ್ಯ. ಬಾಲ್ಯದಲ್ಲಿಯೇ ಹೆಣ್ಣುಮಕ್ಕಳನ್ನು ದಾಂಪತ್ಯಕ್ಕೆ ದೂಡುವ ಪೋಷಕರ ನಿರ್ಧಾರಗಳು ಮಕ್ಕಳ ಭವಿಷ್ಯಕ್ಕೆ ಕುತ್ತು ತಂದೊದಗಿದೆ. ಅನೇಕ ಕಡೆಗಳಲ್ಲಿ ಮದುವೆ ಮನೆಗಳಿಗೆ ತೆರಳಿದ ಮಕ್ಕಳ ರಕ್ಷಣಾ ಅಧಿಕಾರಿಗಳು ಬಾಲ್ಯವಿವಾಹ ತಡೆದು, ಪ್ರಕರಣ ದಾಖಲಿಸಿದ ಉದಾಹರಣೆಗಳಿವೆ.

ಸಿದ್ದರಾಮಯ್ಯರಿಗೆ ಮಾನ, ಮರ್ಯಾದೆ ಇದ್ದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಆರ್.ಆಶೋಕ್

ಪೋಕ್ಸೊ ಪ್ರಕರಣಗಳ ಹೆಚ್ಚಳಕ್ಕೆ ಕಾರಣಗಳೇನು?: ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಅನೇಕ ಪ್ರಕರಣಗಳತ್ತ ಕಣ್ಣಾಯಿಸಿದರೆ, ಪ್ರೀತಿ-ಪ್ರೇಮದ ಮೋಹಕ್ಕೆ ಬಿದ್ದು ಮಾಡಿಕೊಂಡ ಎಡವಟ್ಟುಗಳಾಗಿವೆ. ಹಲವಾರು ಪ್ರಕರಣಗಳಲ್ಲಿ 18 ವರ್ಷದೊಳಗಿನ ಯುವತಿಯನ್ನು ಪ್ರೀತಿಸಿ, ಒಬ್ಬರಿಗೊಬ್ಬರು ಬಿಟ್ಟಿರಲಾರದ ಸ್ಥಿತಿಯಲ್ಲಿ ಮನೆಬಿಟ್ಟು ಓಡಿ ಹೋಗುತ್ತಿದ್ದು, ಮಗಳು ಕಾಣೆಯಾಗುತ್ತಿದ್ದಂತೆಯೇ ಪೋಷಕರು ಕರೆದೊಯ್ದ ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು ಮಾಡುವುದು ಕಂಡು ಬರುತ್ತದೆ.

ಅನೇಕ ಪ್ರಕರಣಗಳು ಪೊಲೀಸ್ ಠಾಣೆ ಹತ್ತುವ ಮುನ್ನವೇ ಸ್ಥಳೀಯ ಮುಖಂಡರೊಂದಿಗೆ ರಾಜಿ ನಡೆಯುತ್ತವೆ. ಸಂಧಾನ ಫಲ ನೀಡದೇ ಹೋದಲ್ಲಿ ಪ್ರಕರಣ ದಾಖಲಾಗಿ, ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಯುವಕ ಜೈಲು ಪಾಲಾಗುತ್ತಾನೆ. ಪೋಕ್ಸೊ ಪ್ರಕರಣ ಹೆಚ್ಚಾಗಲು ಅನಕ್ಷರತೆ, ಕಾನೂನು ಅರಿವಿನ ಕೊರತೆ ಹಾಗೂ ಬಡತನ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಪೋಕ್ಸೊ ಪ್ರಕರಣದಲ್ಲಿ ಸಿಲುಕಿಕೊಂಡವರ ಪೈಕಿ ಅನಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ಪೋಷಕರು ತೆರಳಿದ್ದ ವೇಳೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ದುಷ್ಟರು ಬಳಿಕ ಕಾನೂನಿನ ಬಿಗಿಗೆ ಸಿಲುಕುತ್ತಾರೆ. ಒಂಟಿ ಮಕ್ಕಳು ಹಾಗೂ 18 ವರ್ಷದೊಳಗಿನವರ ಮೇಲೆಯೇ ಲೈಂಗಿಕ ದೌರ್ಜನ್ಯಗಳು ನಡೆದಿರುವುದು ತನಿಖೆ ವೇಳೆ ದೃಢಪಟ್ಟಿವೆ.

ಮೂರೂವರೆ ವರ್ಷಗಳಲ್ಲಿ 154 ಪೋಕ್ಸೊ ಕೇಸು: 2021ನೇ ಸಾಲಿನ ಅಂತ್ಯಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ 41 ಪೋಕ್ಸೊ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು. 2022ನೇ ಸಾಲಿನಲ್ಲಿ 40 ಪ್ರಕರಣಗಳು ದಾಖಲಾದರೆ, 2023ನೇ ಸಾಲಿನಲ್ಲಿ 62 ಪ್ರಕರಣಗಳು ಹಾಗೂ 2024ರ ಮೇ ಅಂತ್ಯಕ್ಕೆ 11 ಪ್ರಕರಣಗಳು ದಾಖಲಾಗಿವೆ. ಮೂರು ವರ್ಷಗಳಲ್ಲಾದ ಪ್ರಕರಣಗಳನ್ನು ಗಮನಿಸಿದರೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗಿವೆ. ಸಂಡೂರು ಹಾಗೂ ಸಿರುಗುಪ್ಪ ತಾಲೂಕಿನಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ.

2021-22ರಲ್ಲಿ 158 ಬಾಲ್ಯವಿವಾಹ ತಡೆಗಟ್ಟಲಾಗಿದೆ. 142 ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. 12 ಎಫ್‌ಐಆರ್ ದಾಖಲಾಗಿದ್ದು, 4 ವಿವಾಹಗಳು ನಡೆದಿವೆ. 2022-23ರಲ್ಲಿ 101 ಬಾಲ್ಯವಿವಾಹ ತಡೆಗಟ್ಟಲಾಗಿದೆ. 6 ವಿವಾಹಗಳು ನಡೆದಿದ್ದು, 107 ಪ್ರಕರಣಗಳು ದಾಖಲಾಗಿವೆ. 2023-24ರಲ್ಲಿ 108 ಬಾಲ್ಯವಿವಾಹ ತಡೆಗಟ್ಟಲಾಗಿದೆ. 8 ವಿವಾಹಗಳು ನಡೆದಿವೆ. 7 ಎಫ್‌ಐಆರ್ ದಾಖಲು ಸೇರಿದಂತೆ ಒಟ್ಟು 116 ಪ್ರಕರಣಗಳನ್ನು ದಾಖಲಿಸಲಾಗಿದೆ. 2024ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಒಟ್ಟು 51 ಬಾಲ್ಯವಿವಾಹ ತಡೆದು 57 ಪ್ರಕರಣಗಳನ್ನು ದಾಖಲಿಸಲಾಗಿದೆ.

ಮಂಡ್ಯ ಕೇಂದ್ರೀಯ ವಿದ್ಯಾಲಯಕ್ಕೆ ಶೀಘ್ರದಲ್ಲೇ ಕಾಯಂ ಶಿಕ್ಷಕರ ನೇಮಕ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಪೋಕ್ಸೊ ಹಾಗೂ ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟಲು ಜನರಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಾಲಾ-ಕಾಲೇಜಗಳಲ್ಲಿ ಅರಿವು ಮೂಡಿಸಿ, ಕಾನೂನಿನ ನೆರವು ಹಾಗೂ ಕ್ರಮಗಳ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಬಳ್ಳಾರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಕೆ. ಜಲಾಲಪ್ಪ.

click me!