
ನವದೆಹಲಿ : ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ 150 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿ ಈ ಕುರಿತ ಚರ್ಚೆಗೆ ಸೋಮವಾರ ಚಾಲನೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಚರ್ಚೆಯನ್ನು ಪ್ರಾರಂಭಿಸಲಿದ್ದು, 10 ಗಂಟೆಗಳ ಕಾಲ ಚರ್ಚೆ ನಡೆಯಲಿದೆ.
1937ರಲ್ಲಿ ವಂದೇ ಮಾತರಂನ ಪ್ರಮುಖ ಚರಣಗಳಿಗೆ ಕಾಂಗ್ರೆಸ್ ಕತ್ತರಿ ಹಾಕಿತು ಎಂದು ಈ ಹಿಂದೆ ಪ್ರಧಾನಿ ಮೋದಿ ಆರೋಪಿಸಿದ್ದರು. ಇದನ್ನು ಪ್ರಸ್ತಾವಿಸಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೋದಿಯವರ ನಂತರ ಮಾತನಾಡಲಿದ್ದಾರೆ. ವಿಪಕ್ಷಗಳಿಂದ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೋಯ್ ಹಾಗೂ ಸಂಸದೆ ಪ್ರಿಯಾಂಕಾ ವಾದ್ರಾ ಚರ್ಚೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಇನ್ನು, ರಾಜ್ಯಸಭೆಯಲ್ಲಿ ಡಿ.9ರಂದು ಈ ಕುರಿತು ಚರ್ಚೆ ಆರಂಭವಾಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯಸಭೆಯ ನಾಯಕ ಜೆ.ಪಿ. ಚರ್ಚೆ ಕೈಗೆತ್ತಿಕೊಳ್ಳಲಿದ್ದಾರೆ.
ನವದೆಹಲಿ: ಪಕ್ಷಗಳು ವಿಧಿಸುವ ವಿಪ್‌ನಿಂದ ಸಂಸದರನ್ನು ರಕ್ಷಿಸುವಂತೆ ಕೋರಿ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಸಂಸತ್‌ನಲ್ಲಿ ಖಾಸಗಿ ಮಸೂದೆ ಮಂಡಿಸಿದ್ದಾರೆ. ಇದರಲ್ಲಿ ಸರ್ಕಾರ ಸ್ಥಿರತೆಗೆ ಧಕ್ಕೆ ತರುವಂತಹ ನಿರ್ಣಯ ಹೊರತು ಮಿಕ್ಕಾವುದೇ ನಿರ್ಣಯ, ಮಸೂದೆಗಳಿಗೆ ಸಂಸದರು ಸ್ವತಂತ್ರವಾಗಿ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಬೇಕು ಎಂದು ಕೋರಿದ್ದಾರೆ.
ಮಸೂದೆ ಮಂಡನೆ ವೇಳೆ ಮಾತನಾಡಿದ ತಿವಾರಿ, ‘ಮತದಾರರು ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕಾಗಿ ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಲ್ಲುತ್ತಾರೆ. ಆದರೆ ಒಳ್ಳೆ ಮಸೂದೆಗಳು ಬಂದಲ್ಲಿ ಅದಕ್ಕೆ ಮತದಾನ ಮಾಡದಂತೆ ಪಕ್ಷಗಳು ವಿಪ್ ಹೊರಡಿಸಿದಾಗ, ಅದು ಪ್ರಜಾಸತ್ತಾತ್ಮಕತೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ‘ಹಣಕಾಸು ಮಸೂದೆ, ಹಣಕಾಸು ಸಂಬಂಧಿತ ವಿಷಯಗಳು, ವಿಶ್ವಾಸ/ಅವಿಶ್ವಾಸ ನಿರ್ಣಯಗಳ ವಿಚಾರದಲ್ಲಿ ಸಂಸದರು ತಮ್ಮ ಸ್ವಂತ ಇಚ್ಛೆಯಂತೆ ಮತದಾನ ಮಾಡಲು ಅವಕಾಶ ಕೋರಿ ಸಂವಿಧಾನದ 10ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿದ್ದಾರೆ.