
ಧಾರವಾಡ (ಜು.17): ಭಾರತೀಯ ರೈಲ್ವೆಯು ದೇಶದ ಆರ್ಥಿಕತೆಗೆ ಬಲ ನೀಡಿದೆ. ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭಾರತೀಯ ರೈಲ್ವೆ ಕೊಡುಗೆ ಅಪಾರವಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಇಂದು (ಜುಲೈ 17) ಮಧ್ಯಾಹ್ನ ಅಳ್ನಾವರ ರೈಲು ನಿಲ್ದಾಣದಲ್ಲಿ ಅಮೃತ್ ಭಾರತ ರೈಲು ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿಗೊಂಡ ಅಳ್ನಾವರ ರೈಲು ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಅಮೃತ್ ಭಾರತ್ ರೈಲು ನಿಲ್ದಾಣ ಪುನರ್ ಅಭಿವೃದ್ಧಿ ಯೋಜನೆಯಡಿ ದೇಶದಾದ್ಯಂತ 75 ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅದರಲ್ಲಿ ರಾಜ್ಯದ ಬಂಟ್ವಾಳ, ಬಾದಾಮಿ, ಕೊಪ್ಪಳ ಹಾಗೂ ಅಳ್ನಾವರ ರೈಲು ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ರೈಲು ನಿಲ್ದಾಣಗಳು ಹೊಂದಿವೆ. ಹೈಡ್ರೋಜನ್ ರೈಲಿಗೆ ಚಾಲನೆ ನೀಡಲಾಗಿದ್ದು, ಭಾರತ ದೇಶ ಕೂಡ ಹೈಡ್ರೋಜನ್ ರೈಲು ಹೊಂದಿದ ದೇಶಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದು ಅವರು ತಿಳಿಸಿದರು.
ಅಳ್ನಾವರ ರೈಲು ನಿಲ್ದಾಣವನ್ನು ರೂ.17.20 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಳಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಅತ್ಯುತ್ತಮ ಸೇವೆಗಳನ್ನು ಒದಗಿಸಲಾಗುತ್ತಿದೆ. ರೈಲ್ವೆ ವಿದ್ಯುದ್ಧೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಲದೇ ರೈಲುಗಳಿಗೆ ಸಹ ಆಧುನಿಕ ಸ್ಪರ್ಶ ಕಲ್ಪಿಸಲಾಗಿದೆ. ಭಾರತೀಯ ರೈಲ್ವೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ರಾಜ್ಯದ ಜನರ ಏಳಿಗೆಗೆ ರೈಲ್ವೆ ಸೇವೆ ಪೂರಕವಾಗಿದೆ. ಸಶಕ್ತ, ಸಮೃದ್ಧ ಹಾಗೂ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ರಾಜ್ಯಪಾಲರು ಹೇಳಿದರು.
ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಇಂದು ಅಮೃತ್ ಭಾರತ ರೈಲು ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ ರಾಜ್ಯದ 4 ಕಡೆಗಳಲ್ಲಿ ರೈಲು ನಿಲ್ದಾಣಗಳನ್ನು ನವೀಕರಣಗೊಳಿಸಲಾಗಿದೆ. ಬಂಟ್ವಾಳ, ಬಾದಾಮಿ, ಅಳ್ನಾವರ ಮತ್ತು ಕೊಪ್ಪಳ ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿಪಡಿಸಲಾಗಿದೆ. ಅಳ್ನಾವರ ರೈಲು ನಿಲ್ದಾಣವನ್ನು ರೂ.17.20 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ.
ವಿಮಾನ ನಿಲ್ದಾಣಗಳಂತೆ ರೈಲು ನಿಲ್ದಾಣಗಳನ್ನು ನವೀಕೃತಗೊಳಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಲಿಫ್ಟ್, ಪಾದಚಾರಿ ಮೇಲ್ಸೇತುವೆ, ದಿವ್ಯಾಂಗ ಸ್ನೇಹಿ ಸೌಲಭ್ಯ ಸೇರಿದಂತೆ ಇತರೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿರುತ್ತದೆ ಎಂದು ಅವರು ತಿಳಿಸಿದರು. ದೇಶದಾದ್ಯಂತ 75 ರೈಲು ನಿಲ್ದಾಣಗಳನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಅಲ್ಲದೇ ಕೆಳ ಮತ್ತು ಮೇಲ್ಸೇತುವೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅಳ್ನಾವರ ಹಾಗೂ ದಾಂಡೇಲಿ ರೈಲು ಮಾರ್ಗದ ಭೂ ಸ್ವಾಧೀನ ಮಾಡಿಕೊಡಬೇಕಿದೆ. ಈ ಹಿಂದೆ ಧಾರವಾಡ, ಹುಬ್ಬಳ್ಳಿ ರೈಲು ನಿಲ್ದಾಣಗಳನ್ನು ನವೀಕರಣಗೊಳಿಸಲಾಗಿತ್ತು. ಜಗತ್ತಿನಲ್ಲಿ ರೈಲ್ವೆ ಲೇನ್ ನಲ್ಲಿ ಭಾರತ ಮೊದಲ ಸ್ಥಾನ ಪಡೆದಿದೆ.
ರೈಲ್ವೆ ವಿದ್ಯುದ್ಧೀಕರಣ ಕೂಡ ಪೂರ್ಣಗೊಂಡಿದೆ. ಇಂದು ಡಿಸೇಲ್ ಇಂಜಿನ್ ರೈಲುಗಳು ಬಂದ್ ಆಗಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಂದೇ ಭಾರತ್ ರೈಲುಗಳಿಗೆ ಉತ್ತಮ ಬೇಡಿಕೆಯಿದೆ. ಜಮ್ಮು ಮತ್ತು ಕಾಶ್ಮೀರ ಜೋಡಿಸುವ ಕಾರ್ಯ ಕೂಡ ಆಗಿದೆ. ದೇಶದ ರೈಲ್ವೆ ಬಜೆಟ್ ದೊಡ್ಡದಾಗಿದೆ. ಜಗತ್ತಿನಲ್ಲಿ ಹೈಡ್ರೋಜನ್ ರೈಲು ಹೊಂದಿದ 4 ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ. ಭಾರತ ದೇಶವು ಹಸಿರು ಹೈಡ್ರೋಜನ್ ಉತ್ಪಾದನೆಯ ಹಬ್ ಆಗಲಿದೆ. ಕಳೆದ 14 ವರ್ಷಗಳಲ್ಲಿ ದೇಶದಲ್ಲಿ ಪರಿಣಾಮಕಾರಿ ಬದಲಾವಣೆಯಾಗಿದೆ ಎಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ವರ್ಚುವಲ್ ಆಗಿ ರೈಲು ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಗಣ್ಯರು ಪುನರಾಭಿವೃದ್ಧಿಗೊಂಡ ಅಳ್ನಾವರ ರೈಲು ನಿಲ್ದಾಣದ ಶಿಲಾನ್ಯಾಸವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಚಿತ್ರಕಲೆ, ಪ್ರಬಂಧ, ಆಶು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಾಸಕರಾದ ಪ್ರದೀಪ ಶೆಟ್ಟರ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ನೈರುತ್ಯ ರೈಲ್ವೆಯ ಮಹಾ ಪ್ರಬಂಧಕರಾದ ಅನಂತ್ ಪಿ., ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್ ಭಾರತ್ ನಿಲ್ದಾಣ ಯೋಜನೆ (ABSS) ಅಡಿಯಲ್ಲಿ ಧಾರವಾಡ ಜಿಲ್ಲೆಯ ಅಳ್ನಾವರ ರೈಲು ನಿಲ್ದಾಣವನ್ನು ₹17.20 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಂಪೂರ್ಣವಾಗಿ ಪುನರ್ ಅಭಿವೃದ್ಧಿಪಡಿಸಲಾಗಿದೆ. ಬ್ರಿಟಿಷರ ಕಾಲದ ಈ ಐತಿಹಾಸಿಕ ನಿಲ್ದಾಣಕ್ಕೆ ಈಗ ವಿಮಾನ ನಿಲ್ದಾಣದ ಮಾದರಿಯಲ್ಲಿ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆಗೊಳಿಸಿದ್ದಾರೆ.
ನಿಲ್ದಾಣದ ಮೂಲಸೌಕರ್ಯ ಮತ್ತು ಸುಂದರೀಕರಣ: ಆಧುನಿಕ ಕಟ್ಟಡ ಮತ್ತು ಮುಂಭಾಗ (Facade): ನಿಲ್ದಾಣದ ಮುಖ್ಯ ಕಟ್ಟಡವನ್ನು ವಿಸ್ತರಿಸಲಾಗಿದ್ದು, ಪ್ರಾದೇಶಿಕ ಕಲೆ ಮತ್ತು ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವ ಆಕರ್ಷಕ ಪ್ರವೇಶ ದ್ವಾರ ಹಾಗೂ ಮುಂಭಾಗದ ವಿನ್ಯಾಸವನ್ನು ಮಾಡಲಾಗಿದೆ.
ಸುಧಾರಿತ ಸಂಚಾರ ಪ್ರದೇಶ (Circulating Area): ಸುಮಾರು 4,500 ಚದರ ಮೀಟರ್ ಪ್ರದೇಶದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಸುಸಜ್ಜಿತ ಪಾರ್ಕಿಂಗ್‌ಗಾಗಿ ವಿಶಾಲವಾದ ಜಾಗವನ್ನು ಅಭಿವೃದ್ಧಿಪಡಿಸಲಾಗಿದೆ.
ಸುಂದರ ಆವರಣ: ನಿಲ್ದಾಣದ ಸುತ್ತಮುತ್ತ ಆಕರ್ಷಕ ವರ್ಣಚಿತ್ರಗಳು (Murals), ಹಸಿರು ಗಿಡಗಳ ಲ್ಯಾಂಡ್‌ಸ್ಕೇಪಿಂಗ್ ಮತ್ತು ಪರಿಸರ ಸ್ನೇಹಿ ಎಲ್‌ಇಡಿ (LED) ದೀಪಗಳ ವ್ಯವಸ್ಥೆ ಮಾಡಲಾಗಿದೆ.
ಪ್ರಯಾಣಿಕರ ಸೌಕರ್ಯಗಳು ಹೊಸ ಬುಕ್ಕಿಂಗ್ ಕೇಂದ್ರ: ಸಾರ್ವಜನಿಕರಿಗೆ ಟಿಕೆಟ್ ಪಡೆಯಲು ಅನುಕೂಲವಾಗುವಂತೆ 200 ಚದರ ಮೀಟರ್ ವಿಸ್ತೀರ್ಣದ ಸುಸಜ್ಜಿತ ಡಿಜಿಟಲ್ ಟಿಕೆಟ್ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.
ವಿಶಾಲ ನಿರೀಕ್ಷಣಾ ಹಾಲ್ ಮತ್ತು ಲೌಂಜ್: ಪ್ರಯಾಣಿಕರು ವಿಶ್ರಮಿಸಲು ಹವಾನಿಯಂತ್ರಿತ (AC) ಕಾಯುವ ಕೋಣೆಗಳು, ಮಹಿಳೆಯರಿಗಾಗಿ ಪ್ರತ್ಯೇಕ ಬೇಬಿ-ಫೀಡಿಂಗ್ (ಸ್ತನ್ಯಪಾನ) ಕೊಠಡಿ ಮತ್ತು ಪ್ರತ್ಯೇಕ ಎಕ್ಸಿಕ್ಯೂಟಿವ್ ಲೌಂಜ್‌ಗಳನ್ನು ನಿರ್ಮಿಸಲಾಗಿದೆ.
ಹೊಸ ಪ್ಲಾಟ್‌ಫಾರ್ಮ್ ಶೆಲ್ಟರ್‌ಗಳು: ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಪ್ಲಾಟ್‌ಫಾರ್ಮ್ 1 ಮತ್ತು 2ಕ್ಕೆ ಸುಧಾರಿತ ರೂಫ್ ಶೆಲ್ಟರ್‌ಗಳನ್ನು ಅಳವಡಿಸಲಾಗಿದೆ.
ಆಧುನಿಕ ಶೌಚಾಲಯಗಳು: ನಿಲ್ದಾಣ ಹಾಗೂ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ವಚ್ಛ ಹಾಗೂ ಅತ್ಯಾಧುನಿಕ ಶೌಚಾಲಯ ಬ್ಲಾಕ್‌ಗಳನ್ನು ನಿರ್ಮಿಸಲಾಗಿದೆ.
ಸುಲಭ ಸಂಚಾರ ಮತ್ತು ದಿವ್ಯಾಂಗ ಸ್ನೇಹಿ ಸೌಲಭ್ಯಗಳು 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ (FOB): ಪ್ರಯಾಣಿಕರು ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದಕ್ಕೆ ಸುರಕ್ಷಿತವಾಗಿ ದಾಟಲು 12 ಮೀಟರ್ ಅಗಲದ ಬೃಹತ್ ಫುಟ್ ಓವರ್ ಬ್ರಿಡ್ಜ್ ನಿರ್ಮಿಸಲಾಗಿದೆ.
ಲಿಫ್ಟ್ ಸೌಕರ್ಯ: ಹಿರಿಯ ನಾಗರಿಕರು ಮತ್ತು ರೋಗಿಗಳ ಅನುಕೂಲಕ್ಕಾಗಿ 2 ಹೊಸ ಲಿಫ್ಟ್‌ಗಳನ್ನು ಅಳವಡಿಸಲಾಗಿದೆ.
ದಿವ್ಯಾಂಗ ಸ್ನೇಹಿ ವ್ಯವಸ್ಥೆ: ದೈಹಿಕ ವಿಕಲಚೇತನರಿಗಾಗಿ ವಿಶೇಷ ರ‍್ಯಾಂಪ್‌ಗಳು (Ramps), ಸುಲಭವಾಗಿ ಗುರುತಿಸಬಹುದಾದ ಗೈಡೆನ್ಸ್ ಪಾತ್‌ವೇಗಳು, ಪ್ರತ್ಯೇಕ ಶೌಚಾಲಯಗಳು ಮತ್ತು ಟ್ಯಾಕ್ಟೈಲ್ ಟೈಲ್ಸ್ (Tactile Tiles) ಅಳವಡಿಸಲಾಗಿದೆ.
ಡಿಜಿಟಲ್ ಮತ್ತು ಮಾಹಿತಿ ವ್ಯವಸ್ಥೆ ಮಾಹಿತಿ ಫಲಕಗಳು: ನಿಲ್ದಾಣದ ಒಳಗೆ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲುಗಳ ಆಗಮನ-ನಿರ್ಗಮನ ಹಾಗೂ ಕೋಚ್‌ಗಳ ಸ್ಥಾನವನ್ನು ನಿಖರವಾಗಿ ತೋರಿಸುವ ಎಲ್‌ಇಡಿ ಇಂಡಿಕೇಟರ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.
ಉಚಿತ ವೈ-ಫೈ: ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರಿಗೆ ಹೈ-ಸ್ಪೀಡ್ ಉಚಿತ ವೈ-ಫೈ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಈ ಎಲ್ಲ ಹೈಟೆಕ್ ಬದಲಾವಣೆಗಳ ಮೂಲಕ ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್‌ಗಳಲ್ಲಿ ಒಂದಾದ ಅಳ್ನಾವರ ನಿಲ್ದಾಣವು (LWR) ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಜಾಗತಿಕ ಮಟ್ಟದ ಪ್ರಯಾಣದ ಅನುಭವವನ್ನು ನೀಡುತ್ತಿದೆ.