ಪ್ಲಾಸ್ಟಿಕ್‌ ಮುಕ್ತ ಪಟ್ಟಣ ಫಲಕದಲ್ಲಿ ಮಾತ್ರ: ತ್ಯಾಜ್ಯವನ್ನೇ ಹೊದ್ದು ಮಲಗಿದೆ ಸರಗೂರು

By Kannadaprabha NewsFirst Published Oct 2, 2019, 2:43 PM IST
Highlights

ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧಿಸ್ರೂ ಇಲ್ಲೊಂದು ಊರು ಪ್ಲಾಸ್ಟಿಕ್ ತ್ಯಾಜ್ಯವನ್ನೇ ಹೊದ್ದು ಮಲಗಿದೆ. ಪ್ಲಾಸ್ಟಿಕ್‌ ಮುಕ್ತ ಪಟ್ಟಣ ಎಂಬುದು ಫಲಕಕ್ಕಷ್ಟೇ ಸೀಮಿತವಾಗಿರುವುದು ವಿಪರ್ಯಾಸ.

ಮೈಸೂರು(ಅ.02): ಸರಗೂರು ಪಟ್ಟಣದ ಹೊರವಲಯದಲ್ಲಿ ‘ಪ್ಲಾಸ್ಟಿಕ್‌ ಮುಕ್ತ ಪಟ್ಟಣ’ ಎಂಬ ನಾಮಫಲಕ ಹೊಂದಿರುವ ಸರಗೂರು ಪಟ್ಟಣ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಹೊದ್ದು ಮಲಗಿದೆ.

ಅವೈಜ್ಞಾನಿಕ ಚರಂಡಿ ವ್ಯವಸ್ಥೆ, ಹದಗೆಟ್ಟರಸ್ತೆ, ರಸ್ತೆ ಬದಿಯಲ್ಲಿ ಆಳೆತ್ತರ ಬೆಳೆದು ನಿಂತ ಪಾರ್ಥೇನಿಯಂ, ಇದು ಸರಗೂರು ಪಟ್ಟಣದ ದುಸ್ಥಿತಿ. ಪಟ್ಟಣ ಸುತ್ತ ಕಪಿಲ ಜಲಾಶಯ ಹಾದು ಹೋಗಿದ್ದು, ಸುಂದರ ಪರಿಸರ ಹೊಂದಿರುವ ಪಟ್ಟಣದಲ್ಲಿ ಸುಮಾರು 13,000ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಪಟ್ಟಣ ನಿರ್ವಹಣೆಯನ್ನು ಪಪಂ ವಹಿಸುತ್ತಿದ್ದು, 12 ವಾರ್ಡ್‌ಗಳಿದ್ದು, ಇಲ್ಲಿನ ಪ್ರಕೃತಿಯು ಸುಂದರವಾಗಿದ್ದರೂ ಸ್ವಚ್ಛತೆ ಸೇರಿದಂತೆ ಹಲವು ಸಮಸ್ಯೆಗಳ ಗೂಡಾಗಿದೆ.

ಹದಗೆಟ್ಟರಸ್ತೆ:

ಪಟ್ಟಣದ ಹೃದಯ ಭಾಗದ ಮೂಲಕ ಬೇಗೂರು- ಹುಣಸೂರು ಮುಖ್ಯ ರಸ್ತೆ ಇರುವುದರಿಂದ ಅದೊಂದು ರಸ್ತೆ ಮಾತ್ರ ಚೆನ್ನಾಗಿದೆ. ಇನ್ನು ಪಟ್ಟಣದೊಳಗಿರುವ ರಸ್ತೆಗಳ ಸ್ಥಿತಿ ಹೇಳತೀರದು. ಕೆಲ ಕಡೆ ಮೊಣಕಾಲು ಉದ್ದದ ಗುಂಡಿಗಳು ಇದ್ದರೆ, ಮತ್ತೊಂದು ಕಡೆ ಕಿತ್ತ ರಸ್ತೆ ಹಾಗೂ ಇನ್ನೂ ಡಾಂಬರೀಕರಣ ಕಾಣದ ರಸ್ತೆಗಳು ಕಣ್ಣಿಗೆ ಬೀಳಲಿದ್ದು, ಮಳೆಗಾಲವಾದ್ದರಿಂದ ಮಳೆ ನೀರು ರಸ್ತೆಯಲ್ಲೇ ನಿಂತು ವಾಹನ ಸಂಚಾರ ನಡೆಸಿದರೆ ರಸ್ತೆಯಲ್ಲಿ ಸಂಚರಿಸುವವರ ಮೇಲೆ ನೀರು ಬಿಳಲಿದೆ. ಇನ್ನು ಬೇಸಿಗೆಯಲ್ಲಂತೂ ದೂಳು ಎದ್ದು ಪಾದಚಾರಿಗಳು ಹಾಗೂ ವಾಹನಗಳ ಹಿಂದೆ ಬರುವ ವಾಹನ ಸವಾರರ ಸಂಚಾರಕ್ಕೆ ಕಿರಿಕಿರಿ ಉಂಟಾಗಲಿದೆ.

ರಾಶಿಗಟ್ಟಲೆ ತ್ಯಾಜ್ಯ:

ಸರಗೂರು ಪಟ್ಟಣ ’ಪ್ಲಾಸ್ಟಿಕ್‌ ಮುಕ್ತ ಪಟ್ಟಣ’ ಎಂಬ ನಾಮಫಲಕವನ್ನು ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಅಲ್ಲಲ್ಲಿ ಅಳವಡಿಸಿದ್ದಾರೆ. ಆದರೆ, ಪಟ್ಟಣದಲ್ಲಿ ಪ್ಲಾಸ್ಟಿಕ್‌ ಬಳಕೆ ಮಾತ್ರ ಇನ್ನೂ ರಾರಾಜಿಸುತ್ತಿದೆ. ಇದಲ್ಲದೆ ರಸ್ತೆ ಬದಿಗಳಲ್ಲಿ ತ್ಯಾಜ್ಯ ವಸ್ತುಗಳು ರಾಶಿಗಟ್ಟಲೆ ಬಿದ್ದಿದ್ದು, ಅವುಗಳಿಂದ ಕೆಟ್ಟವಾಸನೆ ಬರುತ್ತಿದೆ. ಇದಲ್ಲದೆ ಹಸಿ, ಒಣ ಕಸ ಎರಡನ್ನೂ ಸಾರ್ವಜನಿಕರು ಒಂದೆಡೆಯೇ ಹಾಕುತ್ತಿರುವುದರಿಂದ ಹಸಿ ಕಸವನ್ನು ಮೇಯಲು ಬಿಡಾಡಿ ದನಗಳು ಬರುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ.

ಚರಂಡಿ ಸಮಸ್ಯೆ:

ಚರಂಡಿ ವ್ಯವಸ್ಥೆಯಂತೂ ಸಮರ್ಪಕವಾಗಿಲ್ಲ. ಕೆಲ ವಾರ್ಡಗಳಲ್ಲಿ ಚರಂಡಿ ವ್ಯವಸ್ಥೆ ಇದ್ದರೂ ಚರಂಡಿಯಲ್ಲಿ ಹೂಳು ತುಂಬಿರುವ ನಿಮಿತ್ತ ಕೊಳಚೆ ನೀರು ಸಲೀಸಾಗಿ ಮುಂದೆ ಹೋಗಲು ತುಂಬಾ ಹರ ಸಾಹಸ ಪಡಬೇಕಾಗಿದೆ. ಮಳೆ ನೀರು ತಗ್ಗು ಪ್ರದೇಶದಲ್ಲಿ ನಿಂತು ಕೆಟ್ಟವಾಸನೆ ಬರುತ್ತಿದೆ. ಮಳೆ ನೀರು ಚರಂಡಿಯಲ್ಲಿ ಹೋಗದೆ ಮನೆಗಳಿಗೆ ನುಗ್ಗಿರುವ ನಿದರ್ಶನಗಳೂ ಇವೆ.

ಪಾರ್ಕಿಂಗ್‌ ಸಮಸ್ಯೆ:

ಇಲ್ಲಿ ಮುಖ್ಯವಾಗಿ ಪಾರ್ಕಿಂಗ್‌ನದ್ದೆ ದೊಡ್ಡ ಸಮಸ್ಯೆಯಾಗಿದೆ. ಈ ಭಾಗದ ಜನರಿಗೆ ಪಟ್ಟಣ ಪ್ರಮುಖ ವ್ಯಾಪಾರ ಕೇಂದ್ರ. ಇದಲ್ಲದೆ ಪ್ರತಿ ಶುಕ್ರವಾರ ಇಲ್ಲಿ ಸಂತೆ ನಡೆಯಲಿದ್ದು, ಹಳ್ಳಿಗಾಡಿನ ಜನರು ತಮ್ಮ ದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಬರುವುದು ಮಾಮೂಲಿ. ಇಂಥ ವೇಳೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲಿ ಕೆಲವರು ವಾಹನಗಳನ್ನು ನಿಲ್ಲಿಸುತ್ತಿರುವುದು ಕಂಡು ಬರಲಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಲಿದೆ.

ಪವರ್ ಬೇಕಿಲ್ಲ, ಪಾರ್ಟಿ ಬೇಕಿಲ್ಲ, ಗುದ್ದಲಿ ಹಿಡಿದು ಚರಂಡಿ ಕ್ಲೀನ್ ಮಾಡಿದ್ರು 70ರ ಶಿವಣ್ಣ

ಇದಲ್ಲದೆ ರಸ್ತೆ ಬದಿಯಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದು ನಿಂತಿದ್ದರೆ, ಇನ್ನು ಕೆಲ ವಾರ್ಡ್‌ಗಳಲ್ಲಿ ವಿದ್ಯುತ್‌ ದೀಪದ ಬೀದಿ ಕಂಬಗಳಿಗೆ ಬಲ್ಬ್‌ ಅಳವಡಿಸಿದೆ ಇರುವುದು ಕಂಡು ಬರುತ್ತಿದೆ. ಇದರಿಂದಾಗಿ ಪಟ್ಟಣದ ಜನತೆ ಪಟ್ಟಣ ಪಂಚಾಯಿತಿಗೆ ದಿನವೀಡಿ ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸಂಬಂಧಪಟ್ಟಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಜನರಿಗೆ ಅನುಕೂಲವಾಗುವಂತೆ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

click me!