ಕೊರೋನಾ 2ನೇ ಅಲೆ ಆರ್ಭಟ: ಕಿಮ್ಸ್‌ನಲ್ಲಿ ಮತ್ತೆ ಪ್ಲಾಸ್ಮಾ ಥೆರಪಿ ಪ್ರಾರಂಭ

By Kannadaprabha NewsFirst Published Apr 17, 2021, 12:07 PM IST
Highlights

1ನೇ ಅಲೆಯಲ್ಲಿ 108 ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ| ಕಳೆದ ವಾರ ಮೂವರು ವೃದ್ಧರಿಗೆ ಥೆರಪಿ| ಕಳೆದ ಬಾರಿ ಸಂಗ್ರಹಿಸಿದ್ದ 10 ಬಾಟಲ್‌ ಪ್ಲಾಸ್ಮಾ ಇದೆ| ಕೊರೋನಾ ಮೊದಲ ಅಲೆ ವೇಳೆ ರಾಜ್ಯದಲ್ಲಿಯೇ ಮೊದಲ ಬಾರಿ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಪಾತ್ರವಾಗಿದ್ದ ಕಿಮ್ಸ್‌| 

ಮಯೂರ ಹೆಗಡೆ

ಹುಬ್ಬಳ್ಳಿ(ಏ.17): ಕೋವಿಡ್‌ ಇಳಿಮುಖವಾಗಿದ್ದ ಪರಿಣಾಮ ಕಿಮ್ಸ್‌ನಲ್ಲಿ ಸ್ಥಗಿತಗೊಂಡಿದ್ದ ಪ್ಲಾಸ್ಮಾ ಥೆರಪಿ ಮತ್ತೆ ಆರಂಭವಾಗಿದೆ. 2ನೇ ಅಲೆಯಲ್ಲಿ ಕೊರೋನಾ ತಗುಲಿದ ಮೂವರಿಗೆ ಈಗಾಗಲೇ ಥೆರಪಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

ಕೊರೋನಾ ಮೊದಲ ಅಲೆ ವೇಳೆ ರಾಜ್ಯದಲ್ಲಿಯೇ ಮೊದಲ ಬಾರಿ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಪಡೆದಿದ್ದು ಇಲ್ಲಿನ ಕಿಮ್ಸ್‌. ಐಸಿಎಂಆರ್‌ ಒಪ್ಪಿಗೆ ಪಡೆದು ಮೇ ತಿಂಗಳಲ್ಲಿ ಸೋಂಕಿಂದ ಗುಣಮುಖನಾಗಿದ್ದ 64 ವರ್ಷದ ಮಸಣ ಕಾಯುತ್ತಿದ್ದ ವೃದ್ಧನ(ಪಿ- 363) ಮನವೊಲಿಸಿ ಪ್ಲಾಸ್ಮಾ ಪಡೆದು 65 ವರ್ಷದ ಸೋಂಕಿತನಿಗೆ ಥೆರಪಿ ನೆರವೇರಿಸಲಾಗಿತ್ತು. ಕಳೆದ ಡಿಸೆಂಬರ್‌ ವೇಳೆಗೆ ಬರೋಬ್ಬರಿ 108 ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ಒದಗಿಸಲಾಗಿತ್ತು.
ಅದಾದ ಬಳಿಕ ಕೊರೋನಾ ಗ್ರಾಫ್‌ ಇಳಿದ ಹಿನ್ನೆಲೆ ಫೆಬ್ರವರಿ ವೇಳೆಗೆ ಪ್ಲಾಸ್ಮಾ ಥೆರಪಿ ಬಹುತೇಕ ನಿಂತಿತ್ತು. ಆದರೂ ಮುಂಜಾಗೃತ ಕ್ರಮವಾಗಿ ತಲಾ 200 ಎಂಎಲ್‌ನ 12 ಬಾಟಲ್‌ ಹಾಗೂ ಒಂದು 100 ಎಂಎಲ್‌ ಬಾಟಲ್‌ ಪ್ಲಾಸ್ಮಾ ಸದ್ಯ ಕಿಮ್ಸ್‌ ಆಸ್ಪತ್ರೆಯಲ್ಲಿ ಸಂಗ್ರಹಿಸಡಲಾಗಿತ್ತು. ಈಚೆಗೆ ಹದಿನೈದು ದಿನಗಳಲ್ಲಿ ಕೊರೋನಾ ಹರಡುವಿಕೆ ಹೆಚ್ಚಾಗಿದೆ. ಪರಿಣಾಮ ಕಿಮ್ಸ್‌ನಲ್ಲಿ ಕನಿಷ್ಠ 8ಕ್ಕೆ ಇಳಿದಿದ್ದ ರೋಗಿಗಳ ಸಂಖ್ಯೆ 80 ಪ್ಲಸ್‌ ಆಗಿದೆ. ಸಂಗ್ರಹವಿರುವ ಪ್ಲಾಸ್ಮಾ ಬಳಕೆಯಾಗುತ್ತಿದೆ.

ಕರ್ನಾಟಕದಲ್ಲಿ ಪ್ಲಾಸ್ಮಾ ಥೆರಪಿಗೆ ಒಪ್ಪಿಗೆ ನೀಡಿದ ICMR, ವರವಾಗುತ್ತಾ ಇದು?

ಕಿಮ್ಸ್‌ನ ಪ್ಲಾಸ್ಮಾ ಥೆರಪಿ ವಿಭಾಗ ಮುಖ್ಯ ವೈದ್ಯ ಡಾ. ರಾಮ ಕೌಲಗುಡ್ಡ ‘ಕಳೆದ ವಾರ ಅಗತ್ಯವುಳ್ಳ ಮೂವರು 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಪ್ಲಾಸ್ಮಾ ಥೆರಪಿ ನೆರವೇರಿಸಲಾಗಿದೆ. ಕಳೆದ ಅಲೆಯ ವೇಳೆ ಗುಣಮುಖರಾಗಿದ್ದವರಿಂದ ಸಂಗ್ರಹಿಸಿದ್ದ ಪ್ಲಾಸ್ಮಾವನ್ನು ಬಳಸಿ ಇವರಿಗೆ ಚಿಕಿತ್ಸೆ ನೀಡಲಾಗಿದೆ’ ಎಂದರು.

ದಾನಿಗಳು ಬೇಕು:

ಕೊರೋನಾದಿಂದ ಗುಣಮುಖರಾಗಿ ರೋಗನಿರೋಧಕ ಶಕ್ತಿ ಬೆಳೆದವರು ಮಾತ್ರ ಪ್ಲಾಸ್ಮಾ ದಾನ ಮಾಡಲು ಶಕ್ತರು. ಇಂಥವರಿಂದ 400 ಮಿಲೀ ಪ್ಲಾಸ್ಮಾ ಪಡೆಯಲಾಗುತ್ತದೆ. ಅದರಲ್ಲಿ ತೀವ್ರ ತರಹದ ಸೋಂಕುಳ್ಳ ವ್ಯಕ್ತಿಗೆ 200 ಎಂಎಲ್‌ ಪ್ಲಾಸ್ಮಾವನ್ನು ಮೊದಲ ಬಾರಿಗೆ ನೀಡಲಾಗುತ್ತದೆ. ಕೆಲ ದಿನಗಳು ನಂತರ ಮತ್ತೆ 200 ಎಂಎಲ್‌ ಕೊಡಲಾಗುತ್ತದೆ.

‘ಕಳೆದ ವರ್ಷ ಆರಂಭದಲ್ಲಿ ಕೊರೋನಾ ಗುಣಮುಖರಾದವರು ಕಿಮ್ಸ್‌ ಪ್ಲಾಸ್ಮಾ ದಾನ ಮಾಡಲು ಹಿಂದೇಟು ಹಾಕಿದ್ದರು. ಆದರೆ ಜಾಗೃತಿ ಮೂಡಿಸಿದ ಬಳಿಕ 60ಕ್ಕೂ ಹೆಚ್ಚು ಜನರು ಪ್ಲಾಸ್ಮಾ ದಾನ ಮಾಡಿದ್ದರು. ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರು ಹೆಚ್ಚಿನ ಜನರಿಂದ ಪ್ಲಾಸ್ಮಾ ಸಂಗ್ರಹಿಸಲು ಸೂಚಿಸಿದ್ದಾರೆ. ಈ ಬಾರಿ ಗುಣಮುಖರಾದವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಮುಖ್ಯ’ ಎನ್ನುತ್ತಾರೆ ಡಾ. ರಾಮ ಕೌಲಗುಡ್ಡ.

ಕೊರೋನಾ ವಿರುದ್ಧ ಸಮರ, ಏ.25ರಂದು ಮೊದಲ ಬಾರಿಗೆ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ

ಟೆಸ್ಟ್‌ ಕಿಟ್‌ ಬೇಕು

ಕೊರೋನಾ ಇಳಿಮುಖವಾಗಿದ್ದ ಹಿನ್ನೆಲೆ ಪ್ಲಾಸ್ಮಾ ಥೆರಪಿ ಸ್ಥಗಿತಗೊಂಡಿದ್ದ ಕಾರಣ ಆ್ಯಂಟಿ ಬಾಡಿ ಟೆಸ್ಟ್‌ ಕಿಟ್‌ ತರಿಸಿಕೊಳ್ಳುವುದು ಕೂಡ ಬಹುತೇಕ ನಿಂತಿತ್ತು. ಇದೀಗ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ಲಾಸ್ಮಾ ಸಂಗ್ರಹ ಅಗತ್ಯವಾಗಿದೆ. ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿ ಆಗಿದೆಯೋ ಇಲ್ಲವೊ ಎಂಬುದನ್ನು ತಿಳಿಯಲು ಟೆಸ್ಟ್‌ ಕಿಟ್‌ ಅಗತ್ಯ. ಅಲ್ಲದೆ ಪ್ಲಾಸ್ಮಾ ಬ್ಯಾಗ್‌ಗಳ ಅಗತ್ಯವೂ ಇದೆ. ದೆಹಲಿ, ಮುಂಬೈ ಮೂಲದ ಕಂಪನಿಗಳು ಇವನ್ನು ಒದಗಿಸುತ್ತವೆ. ಇವುಗಳನ್ನು ತರಿಸಿಕೊಳ್ಳಲು ಕಿಮ್ಸ್‌ ಮುಂದಾಗಿದೆ.

ಕಳೆದ ವಾರ ಮೂವರಿಗೆ ಪ್ಲಾಸ್ಮಾ ಥೆರಪಿ ನೆರವೇರಿಸಲಾಗಿದೆ. 2ನೇ ಅಲೆ ಹಿನ್ನೆಲೆ ಹೆಚ್ಚಿನವರಿಂದ ಪ್ಲಾಸ್ಮಾ ಸಂಗ್ರಹದ ಗುರಿ ಇದೆ ಎಂದು ಕಿಮ್ಸ್‌ ಪ್ಲಾಸ್ಮಾ ಥೆರಪಿ ವಿಭಾಗದ ಮುಖ್ಯ ವೈದ್ಯರು ಡಾ. ರಾಮ ಕೌಲಗುಡ್ಡ ತಿಳಿಸಿದ್ದಾರೆ. 
ಕೋವಿಡ್‌ 2ನೇ ಅಲೆ ಎದುರಿಸಲು ಕಿಮ್ಸ್‌ ಸಜ್ಜಾಗಿದೆ. ಪ್ಲಾಸ್ಮಾ ಥೆರಪಿಗೆ ಅಗತ್ಯ ಸೌಲಭ್ಯವಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದ್ದಾರೆ.
 

click me!