
ಬೇಲೂರು (ಮೇ.14): ಆನೆ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಯೋಜನೆ ರೂಪಿಸಿದ್ದು ಸದ್ಯದಲ್ಲೇ ಜಾರಿಗೆ ತರಲು ಚಿಂತನೆ ಮಾಡುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ತಾಲೂಕಿನ ಬಿಕ್ಕೋಡು ಬಳಿ ಇರುವ ಆನೆಧಾಮಕ್ಕೆ ಭೇಟಿ ನೀಡಿ ಆನೆಧಾಮ ಕಚೇರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಆನೆಯಿಂದ ಸಾಕಷ್ಟು ಪ್ರಾಣ ಹಾನಿಯಾಗಿದೆ. ಮನುಷ್ಯನ ಜೀವಕ್ಕೆ ಬೆಲೆ ಇದೆ. ಅದಕೋಸ್ಕರ ಸರ್ಕಾರ ಸಭೆ ನಡೆಸಿ ಶಾಶ್ವತ ಪರಿಹಾರಕ್ಕೆ ಸುಮಾರು 250 ಕಿ. ಮೀ. ಉದ್ದಕ್ಕೆ ಆನೆ ಕಾರಿಡಾರ್ ನಿರ್ಮಿಸಲು ಅಂದಾಜು 150 ಕೋಟಿ ರುಪಾಯಿ ವೆಚ್ಚ ತಗಲುತ್ತದೆ ಎಂದು ಅಂದಾಜಿಸಲಾಗಿದ್ದು ಸದ್ಯದಲ್ಲೇ ಕಾಮಗಾರಿಯನ್ನು ನಡೆಸಲಾಗುತ್ತದೆ. ಆನೆ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮನುಷ್ಯನ ಜೀವ ಉಳಿಸುವ ಕೆಲಸ ಮಾಡಲುಮುಖ್ಯಮಂತ್ರಿಗಳು ವಿಶೇಷ ಸಭೆ ಕರೆದು ಯೋಜನೆ ರೂಪಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಕೆಲ ಪುಂಡಾನೆಗಳನ್ನು ಹಿಡಿದಿದ್ದರೂ ಕೆಲ ಪುಂಡಾನೆ ದಾಳಿ ಮಾಡಿರುವುದು ಕಂಡುಬಂದಿದೆ. ಅಲ್ಲದೆ ಇದರ ಜೊತೆಗೆ ಕಾಡುಕೋಣಗಳ ಕಾಟ ಹೆಚ್ಚಾಗಿದ್ದು, ಕಳೆದ ದಿನಗಳಲ್ಲಿ ಒಬ್ಬರ ಜೀವ ತೆಗೆದಿದೆ, ಪ್ರಾಣಿಗಳಿಗೂ ಹಾನಿಯಾಗಬಾರದು, ಮಾನವನು ಬದುಕಬೇಕು ಆ ರೀತಿಯ ಕಾರ್ಯತಂತ್ರ ಮಾಡಲು ಹೊಸ ತಂತ್ರ ರೂಪಿಸಲಾಗಿದೆ. ನಮ್ಮ ಕರ್ನಾಟಕದಲ್ಲಿ ಆನೆಗಳ ಹಾವಳಿ ಬಗ್ಗೆ ಸರ್ಕಾರ ಕಾಳಜಿ ವಹಿಸುವಷ್ಟು ಬೇರೆ ರಾಜ್ಯಗಳಲ್ಲಿ ಮಾಡುತ್ತಿಲ್ಲ, ಮಲೆನಾಡು ಭಾಗಗಳಲ್ಲಿ ಆನೆಗಳ ಹಾವಳಿ ಜಾಸ್ತಿ ಇದ್ದು ಅವುಗಳನ್ನು ಸ್ಥಳಾಂತರಿಸುವ ಕೆಲಸ ಮಾಡಿದರೂ ಮತ್ತೆ ಅವುಗಳು ಬರುತ್ತಿವೆ, ಬರದಂತೆ ಕಾರಿಡಾರ್ ನಿರ್ಮಿಸಲಾಗುತ್ತದೆ ಎಂದರು.
ವೀರಶೈವ ಲಿಂಗಾಯತ ಸಂಘಟಿತ ಶಕ್ತಿ ಆಗಬೇಕು: ಸಚಿವ ಈಶ್ವರ ಖಂಡ್ರೆ
ಶಾಸಕ ಎಚ್ ಕೆ ಸುರೇಶ್ ಮಾತನಾಡಿ, ಆನೆಗಳು ಆಹಾರ ಅರಸಿ ಬರುತ್ತಿವೆ. ಬರುವಾಗ ಮಧ್ಯೆ ಸಿಕ್ಕ ಮನುಷ್ಯರು, ಬೆಲೆ ಬಾಳುವ ವಸ್ತುಗಳು ನಷ್ಟವಾಗುತ್ತಿವೆ. ಅಲ್ಲದೆ ಬೆಳೆಗಳ ನಷ್ಟವಾಗುತ್ತಿದೆ, ಕೇವಲ ಪರಿಹಾರದಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಆನೆ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರವನ್ನು ಸರ್ಕಾರ ಕೊಡಬೇಕಿದೆ, ಅರಣ್ಯ ಸಚಿವರು ಸುಮಾರು ಆರೇಳು ಬಾರಿ ಬೇಲೂರು ತಾಲೂಕಿಗೆ ಭೇಟಿ ನೀಡಿದ್ದಾರೆ. ಇಲ್ಲಿನ ಸಮಸ್ಯೆ ಬಗ್ಗೆ ಅರಿವಿದ್ದು ತಕ್ಷಣ ಸಮಸ್ಯೆ ಬಗೆಹರಿಸಬೇಕಿದೆ. ಕೇವಲ ಪರಿಹಾರದಿಂದ ಸಮಸ್ಯೆ ಬಗೆಹರಿಯುವುದಿಲ್ಲ ಬಡ ಕುಟುಂಬಗಳು ಬೀದಿಗೆ ಬರುತ್ತಿವೆ.
ದುಡಿಯುವ ಕೈ ಆನೆ ದಾಳಿಗೆ ಬಲಿಯಾದರೆ ಆ ಕುಟುಂಬಕ್ಕೆ ನೀಡುವ ಪರಿಹಾರ ಶಾಶ್ವತವಾಗುವುದಿಲ್ಲ, ಮತ್ತೆ ಜೀವ ಹೋಗುವ ಕೆಲಸ ಆಗಬಾರದು ಎಂದರೆ ಆನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು, ಮಲೆನಾಡು ಭಾಗದಲ್ಲಿ ರೈತರು ಕೂಲಿ ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಆನೆ ದಾಳಿಯಿಂದ ದಿಕ್ಕು ತೋಚದೆ ಕುಳಿತಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಂದರೆ ಸರ್ಕಾರ ಆದಷ್ಟು ಬೇಗ ಆನೆ ಸ್ಥಳಾಂತರ ಹಾಗೂ ಆನೆ ಕಾರಿಡರ್ ನಿರ್ಮಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಶ್ರೇಯಸ್ ಪಟೇಲ್, ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಕುಮಾರ್, ತಾಲೂಕು ದಂಡಾಧಿಕಾರಿ ಮಮತಾ, ಅರಣ್ಯ ಅಧಿಕಾರಿಗಳು, ಬಿಕ್ಕೋಡು ಗ್ರಾಮ ಪಂಚಾಯತಿ ಅಧ್ಯಕ್ಷರು, ಇತರರು ಇದ್ದರು.
ಮಾನವ-ವನ್ಯಜೀವಿ ಸಂಘರ್ಷ ತಡೆಗೆ ₹157 ಕೋಟಿ: ಸಚಿವ ಈಶ್ವರ ಖಂಡ್ರೆ
ಪೆಹಾಲ್ಗಮ್ ಗೆಲುವು ಸೈನಿಕರ ಗೆಲುವು: ಭಯೋತ್ಪಾದಕರನ್ನು ಬುಡಸಮೇತ ಕಿತ್ತೊಗೆಯಬೇಕು, ಪಾಕಿಸ್ತಾನ ಭಯೋತ್ಪಾದಕರ ಕಾರ್ಖಾನೆಯಾಗಿದೆ, ದೇಶವನ್ನ ಕಾಯುವ ಸೈನಿಕರು ನಮ್ಮ ಹೆಮ್ಮೆಯ ಸೈನಿಕರು ಅವರಿಗೆ ದೇಶದ 140 ಕೋಟಿ ಜನರು ಋಣಿಯಾಗಿರಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು,ಇಂದಿರಾಗಾಂಧಿ ಯುದ್ಧ ಮಾಡಿಸಿ ದೇಶವನ್ನು ಕಾಪಾಡಿದ್ದಾರೆ ಅದನ್ನು ಸ್ಮರಿಸಬೇಕು, ಪೆಹಾಲ್ಗಮ್ ಗೆಲುವು ಸೈನಿಕರ ಗೆಲುವು ಎಂದರು.