ಗುಲಾಬಿ ಮೆಟ್ರೋ ಮಾರ್ಗ ಸುರಂಗ ಪೂರ್ಣ: 21 ಕಿ.ಮೀ. ಸುರಂಗ ಸಿದ್ಧಪಡಿಸಿ ಹೊರಬಂದ ಭದ್ರಾ ಟಿಎಂಟಿ

By Kannadaprabha NewsFirst Published Oct 31, 2024, 5:59 AM IST
Highlights

ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋ ಗುಲಾಬಿ ಕಾರಿಡಾರ್‌ನಲ್ಲಿ ನಾಲ್ಕು ವರ್ಷದಿಂದ ನಡೆಯುತ್ತಿದ್ದ 20.992 ಕಿ.ಮೀ. ಸುರಂಗ ಕೊರೆವ ಕೆಲಸ ಬುಧವಾರ ಪೂರ್ಣಗೊಂಡಿದೆ. ನಾಗವಾರದಲ್ಲಿ ಟಿಬಿಎಂ ‘ಭದ್ರಾ’ ತನ್ನ ಕಾರ್ಯ ಮುಗಿಸಿ ಹೊರಬಂದಿದೆ.

ಬೆಂಗಳೂರು (ಅ.31): ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋ ಗುಲಾಬಿ ಕಾರಿಡಾರ್‌ನಲ್ಲಿ ನಾಲ್ಕು ವರ್ಷದಿಂದ ನಡೆಯುತ್ತಿದ್ದ 20.992 ಕಿ.ಮೀ. ಸುರಂಗ ಕೊರೆವ ಕೆಲಸ ಬುಧವಾರ ಪೂರ್ಣಗೊಂಡಿದೆ. ನಾಗವಾರದಲ್ಲಿ ಟಿಬಿಎಂ ‘ಭದ್ರಾ’ ತನ್ನ ಕಾರ್ಯ ಮುಗಿಸಿ ಹೊರಬಂದಿದೆ. ಒಟ್ಟು 21.26 ಕಿ.ಮೀ. ಉದ್ದದ ಈ ಕಾರಿಡಾರ್‌ (ರೀಚ್‌-6) ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ (13 ಕಿ.ಮೀ.) ಭೂಗತ ಮಾರ್ಗ ಒಳಗೊಂಡಿದೆ. ನಿಲ್ದಾಣಗಳನ್ನು ಹೊರತುಪಡಿಸಿ ಮೆಟ್ರೋ ಹೋಗಿಬರಲು ಅವಳಿ ಸುರಂಗ ಕೊರೆಯಲಾಗಿದೆ. 

ಬುಧವಾರ ಸೌತ್‌ಬೌಂಡ್‌ ಸುರಂಗದಲ್ಲಿ ಹೊರಬಂದ ಟಿಬಿಎಂ ಭದ್ರಾ ಏಪ್ರಿಲ್‌ 2ರಂದು ಕೆ.ಜಿ.ಹಳ್ಳಿಯಿಂದ ತನ್ನ ಕೊನೆಯ ಸುರಂಗ ಕಾಮಗಾರಿ ಆರಂಭಿಸಿತ್ತು. 212 ದಿನ ಸುರಂಗ ಕೊರೆವ ಕೆಲಸ ಮುಗಿಸಿದೆ. ನಾಲ್ಕು ವರ್ಷದ ಹಾದಿ: 2020ರ ಆಗಸ್ಟ್ 20ರಂದು ಊರ್ಜಾ ಟಿಬಿಎಂ ಯಂತ್ರವು ಸುರಂಗ ಕಾಮಗಾರಿ ಆರಂಭಿಸಿತ್ತು. ಇದರೊಟ್ಟಿಗೆ ನಾಲ್ಕು ಪ್ಯಾಕೇಜ್‌ಗಳಲ್ಲಿ ವರದಾ, ಆವನಿ, ಲಾವಿ, ವಿಂದ್ಯಾ, ವಾಮಿಕಾ, ರುದ್ರ ಹಾಗೂ ತುಂಗಾ ಮತ್ತು ಭದ್ರಾ ಸೇರಿ ಒಂಬತ್ತು ಟಿಬಿಎಂಗಳು ಕೆಲಸ ನಡೆಸಿದ್ದವು.

Latest Videos

ಅಕ್ರಮ ಕಟ್ಟಡ ತಡೆಗೆ ಶೀಘ್ರದಲ್ಲೇ ಪ್ರಬಲ ಕಾನೂನು: ಸಿಎಂ ಸಿದ್ದರಾಮಯ್ಯ

ಟಿಬಿಎಂ ಕೆಲಸ ಮಾಡಿದ್ದು ಹೇಗೆ?: ದೈತ್ಯ ಚಕ್ರದಂತಿದ್ದ ಟಿಬಿಎಂಗಳು 6.8 ಮೀಟರ್‌ನಷ್ಟು ಬಾಹ್ಯವ್ಯಾಸ ಮತ್ತು 5.8 ಮೀಟರ್‌ ಆಂತರಿಕ ವ್ಯಾಸ ಹೊಂದಿವೆ. ಇವು ತಿರುಗುತ್ತ ಮುಂದುವರಿದು ಒತ್ತಡ ಸೃಷ್ಟಿಸುತ್ತ ಸಾಗುತ್ತಿದ್ದವು. ಎದುರಾಗುವ ಮಣ್ಣು, ಕಲ್ಲುಗಳನ್ನು ಪುಡಿ ಮಾಡುತ್ತ ಸ್ಲರಿ ಪೈಪ್‌ಗಳಿಗೆ ಪುಡಿಯನ್ನು ತಳ್ಳುತ್ತಿದ್ದವು. ಈ ಟಿಬಿಎಂ ಹಿಂಬಾಲಿಸುವ ರೈಲಿನ ರೀತಿಯ ರಚನೆಯಲ್ಲಿ ಕಾರ್ಯಾಚರಣೆ ಕೊಠಡಿ, ನಿಯಂತ್ರಣ ಕೊಠಡಿ, ವಿದ್ಯುತ್ ಪರಿವರ್ತಕ ಮತ್ತು ಹೈ ವೋಲ್ವೇಜ್ ವಿದ್ಯುತ್‌ ಹೊಂದಿರುವ ವ್ಯವಸ್ಥೆ ಇತ್ತು.

ಕಟರ್ ವೇಗ ಹೆಚ್ಚು ಕಡಿಮೆ ಮಾಡುವುದನ್ನು ಇಲ್ಲಿಂದ ನಿಯಂತ್ರಿಸಲಾಗುತ್ತಿತ್ತು. ಮಣ್ಣಿನ ಪದರ ಸಡಿಲವಾಗಿದ್ದರೆ ಟಿಬಿಎಂ ಪ್ರತಿ ನಿಮಿಷಕ್ಕೆ 10-12 ಮಿಲಿ ಮೀಟರ್‌ ಚಲಿಸಿದ್ದವು. ಕಲ್ಲುಬಂಡೆ ಎದುರಾದಾಗ ನಿಮಿಷಕ್ಕೆ 1ರಿಂದ 2 ಮಿಲಿ ಮೀಟ‌ರ್ ಮಾತ್ರ ಕತ್ತರಿಸಿದ್ದವು. ಹೀಗಿ ದಿನಕ್ಕೆ ಸರಾಸರಿ ದಿನಕ್ಕೆ ಹೆಚ್ಚು ಕಡಿಮೆ ನಾಲ್ಕು ಮೀಟರ್‌ನಷ್ಟು ಸುರಂಗ ಕೊರೆದಿದ್ದವು.

ಒಂದೇ ದಿನ 27 ಮೀ. ಸುರಂಗ ದಾಖಲೆ: ಟಿಬಿಎಂ ಊರ್ಜಾ ಯಂತ್ರವು ಕಂಟೋನ್ಮೆಂಟ್‌ ಹಾಗೂ ಪಾಟರಿ ಟೌನ್‌ ನಡುವೆ 2022ರ ಏಪ್ರಿಲ್‌ 25ರಂದು ಒಂದೇ ದಿನ ಗರಿಷ್ಠ 27 ಮೀ. ಸುರಂಗ ಕೊರೆದಿದ್ದು ಒಟ್ಟಾರೆ ಕಾಮಗಾರಿಯ ದಾಖಲೆ ಎನ್ನಿಸಿಕೊಂಡಿತ್ತು. ಕಳೆದ ಜುಲೈ ತಿಂಗಳಲ್ಲಿ ಟಿಬಿಎಂ ತುಂಗಾ ಯಂತ್ರ 308 ಮೀ. ಸುರಂಗ ಕೊರೆದಿದ್ದು ಕೂಡ ಒಂದು ತಿಂಗಳಿನ ಸುರಂಗ ಕೊರೆತದ ದಾಖಲೆಯಾಗಿದೆ.

ಸಿಲುಕಿದ್ದ ಯಂತ್ರಗಳು: ಕ್ಲಿಷ್ಟಕರ ಸುರಂಗ ಕಾಮಗಾರಿಯಲ್ಲಿ ಹಲವು ಸಂದರ್ಭದಲ್ಲಿ ಟಿಬಿಎಂ ಯಂತ್ರಗಳು ನೆಲದೊಳಗೆ ಹಿಂದೆ ಮುಂದೆ ಚಲಿಸಲಾಗದೆ ಸಿಲುಕಿದ್ದವು. 2022ರಲ್ಲಿ ಡೈರಿ ಸರ್ಕಲ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರುದ್ರ ಟಿಬಿಎಂ ನೆಲದೊಳಗಿನ ಬೃಹತ್ ತ್ಯಾಜ್ಯದ ರಾಶಿಯಲ್ಲಿ ಸಿಲುಕಿತ್ತು. ಐದು ತಿಂಗಳ ಕಾಲ ಕೆಲಸ ಸ್ಥಗಿತಗೊಂಡು ಕಾಮಗಾರಿಗೆ ಹಿನ್ನಡೆಯಾಗಿತ್ತು. ಅದೇ ರೀತಿ ಟಿಬಿಎಂ ಯಂತ್ರ ಕೆಳಭಾಗದಲ್ಲಿ ಕೆಲಸ ಮಾಡುವಾಗ ಪಾಟರಿ ಟೌನ್‌, ಎಂಜಿ ರಸ್ತೆ ಸೇರಿ ಮತ್ತಿತರೆಡೆ ಮೇಲ್ಭಾಗದ ರಸ್ತೆ ಕುಸಿದು ಕಾಮಗಾರಿ ನಿಂತಿತ್ತು.

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ: ಸ್ಟಾರ್‌ವಾರ್ ಮಾತ್ರವಲ್ಲ ಕುಟುಂಬ ಕದನಕ್ಕೂ ಸಿದ್ಧ!

ಸುರಂಗದ ನಿಲ್ದಾಣಗಳು: ಸುರಂಗ ಮಾರ್ಗದಲ್ಲಿ 12 ನಿಲ್ದಾಣಗಳಿದ್ದು, ಶೇ.90ರಷ್ಟು ಕಾಮಗಾರಿ ಮುಗಿದಿದೆ. ಡೇರಿ ವೃತ್ತ, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್‌ ಟೌನ್‌, ರಾಷ್ಟ್ರೀಯ ಮಿಲಿಟರಿ ಶಾಲೆ, ಎಂ.ಜಿ.ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್, ಪಾಟರಿ ಟೌನ್‌, ವೆಂಕಟೇಶಪುರ, ಕಾಡುಗೊಂಡನಹಳ್ಳಿ, ನಾಗವಾರ.

click me!