356 ಎಕರೆಯ ಪಿಲಿಕುಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌, ತಾರಾಲಯಕ್ಕೆ 10 ಕೋಟಿ ರೂ. ವೆಚ್ಚದ ಲೇಸರ್ ತಂತ್ರಜ್ಞಾನ!

Published : Jul 25, 2026, 09:35 AM IST
Pilikula Nisargadhama

ಸಾರಾಂಶ

ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲು ಕರ್ನಾಟಕ ರಾಜ್ಯ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿ ನಿರ್ದೇಶನ ನೀಡಿದೆ. ಪಿಲಿಕುಳ ಉತ್ಸವ ಆಯೋಜನೆ, ತಾರಾಲಯದ ಉನ್ನತೀಕರಣ ಮತ್ತು ಮೃಗಾಲಯವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತಹ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಮಂಗಳೂರು: ಸಮಾರು 356 ಎಕರೆಯಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಪಿಲಿಕುಳ ನಿಸರ್ಗಧಾಮವನ್ನು ವಾಣಿಜ್ಯ, ಪರಿಸರ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಸಮಗ್ರ ಅಭಿವೃದ್ಧಿಪಡಿಸುವ ಸಲುವಾಗಿ ಕೂಡಲೇ ಮಾಸ್ಟರ್‌ ಪ್ಲ್ಯಾನ್‌ ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿ ನಿರ್ದೇಶನ ನೀಡಿದೆ. ಶುಕ್ರವಾರ ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅಧ್ಯಕ್ಷತೆಯಲ್ಲಿ ನಡೆದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದಕ್ಕೂ ಮುನ್ನ ಈ ಸಮಿತಿಯ ಶಾಸಕ ಸದಸ್ಯರು ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿ ಅವಲೋಕನ ನಡೆಸಿದರು. ಬಳಿಕ ಜಿಲ್ಲಾಡಳಿತದ ಜೊತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಎಸ್‌. ಆರ್‌.ಶ್ರೀನಿವಾಸ್, ಪಿಲಿಕುಳದಲ್ಲಿ ಪ್ರಸ್ತುತ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮಾಸ್ಟರ್‌ ಪ್ಲ್ಯಾನ್‌ ಸಿದ್ಧಗೊಂಡ ಕೂಡಲೇ ಅಧ್ಯಕ್ಷರ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬಜೆಟ್‌ನಲ್ಲಿ ಸೂಕ್ತ ಅನುದಾನಕ್ಕೆ ಒತ್ತಾಯಿಸಲಿದೆ. ಮುಂದಿನ ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಯಲಿದ್ದು, ಅದಕ್ಕೂ ಮೊದಲೇ ಸಿಎಂಗೆ ವರದಿ ಸಲ್ಲಿಕೆಯಾಗಲಿದೆ ಎಂದರು.

ಪಿಲಿಕುಳ ಉದ್ಯಾನವನ್ನು ಸರ್ಕಾರವೇ ವಹಿಸಿಕೊಳ್ಳುವುದಾ ಅಥವಾ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾ ಎಂಬುದು ತಕ್ಷಣಕ್ಕೆ ತೀರ್ಮಾನವಾಗಿಲ್ಲ. ಅಗತ್ಯ ಸಿಬ್ಬಂದಿ ನೇಮಕವೇ ಮೊದಲಾದ ಕಾರ್ಯಗಳು ಆಗಬೇಕಾಗಿದೆ ಎಂದರು.

ಪ್ರತಿ ತಿಂಗಳು ಕಾರ್ಯಕ್ರಮ ರೂಪಿಸಿ:

ಸದಸ್ಯ ಶಿವಕುಮಾರ್‌ ಮಾತನಾಡಿ, ಪಿಲಿಕುಳ ನಿಸರ್ಗಧಾಮದಲ್ಲಿ ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಬೇಕು. ಪ್ರವಾಸಿಗರು ಸೆಳೆಯುವ ಪ್ರಯತ್ನ ಆಗಬೇಕು ಎಂದರು.

ಪಿಲಿಕುಳ ಉತ್ಸವ ಏರ್ಪಡಿಸಿ:

ಪಿಲಿಕುಳ ನಿಸರ್ಗಧಾಮದಲ್ಲಿ ಕರಾವಳಿ ಉತ್ಸವ ಮಾದರಿಯಲ್ಲೇ ಪಿಲಿಕುಳ ಉತ್ಸವ ಏರ್ಪಡಿಸಬೇಕು. ಕೇವಲ ದ.ಕ. ಮಾತ್ರವಲ್ಲ ಬೇರೆ ಜಿಲ್ಲೆಗಳಿಂದಲೂ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಬರುವಂತಾಗಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಹಾಗೂ ಖಾಸಗಿ ಶಾಲೆಗಳ ಮಕ್ಕಳಿಗೆ ಶೇ.50ರ ರಿಯಾಯ್ತಿಯಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು ಎಂದು ಇನ್ನೋರ್ವ ಸದಸ್ಯ ಶಿವಣ್ಣ ಹೇಳಿದರು.

ತಾರಾಲಯ ಅಪ್‌ಡೇಟ್‌ ಇರಲಿ:

ನಿಸರ್ಗಧಾಮದಲ್ಲಿರುವ ತಾರಾಲಯದಲ್ಲಿ ವೀಕ್ಷಿಸಿದಾಗ ಅದು ಹಳೆಯ ವಿಜ್ಞಾನದ ಸಂಗತಿಗಳಾಗಿವೆ. ಅದರ ಬದಲು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಬೇಕು. ಅದು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇರಬೇಕು. ಇಲ್ಲದಿದ್ದರೆ ತಾರಾಲಯವನ್ನು ಬಂದ್‌ ಮಾಡುವುದು ಒಳ್ಳೆಯದು ಎಂದು ಸದಸ್ಯ ಶಿವಕುಮಾರ್‌ ಹೇಳಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ದರ್ಶನ್‌, ತಾರಾಲಯದಲ್ಲಿ ಲೇಸರ್‌ ತಂತ್ರಜ್ಞಾನ ಬಳಸುವ ಪ್ರಸ್ತಾಪ ಇದೆ. ಆದರೆ ಅದಕ್ಕೆ 10 ಕೋಟಿ ರು. ಬೇಕಾಗುತ್ತದೆ. ಇಷ್ಟೊಂದು ಮೊತ್ತವನ್ನು ಪಿಪಿಪಿ ಮಾದರಿಯಲ್ಲಿ ಭರಿಸಿದರೆ ಅನುಕೂಲವಾಗುತ್ತದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ಪಿಲಿಕುಳಕ್ಕೆ ಸರ್ಕಾರದಿಂದ ಎಷ್ಟು ಅನುದಾನ ಬಂದಿದೆ? ಯಾವೆಲ್ಲಾ ಕಂಪನಿಗಳ ಸಹಕಾರ ಪಡೆಯಲಾಗಿದೆ ಎಂದು ಶಾಸಕ ಶರವಣ ಪ್ರಶ್ನಿಸಿದಾಗ, 2023-24ನೇ ಸಾಲಿನಲ್ಲಿ 6.7 ಕೋಟಿ ರು., 24-25ಲ್ಲಿ 10.2 ಕೋಟಿ ರು. ಹಾಗೂ 25-26ನೇ ಸಾಲಿನಲ್ಲಿ 8 ಕೋಟಿ ರು. ಅನುದಾನ ಬಂದಿದೆ. ವಾರ್ಷಿಕ ನಿರ್ವಹಣಾ ವೆಚ್ಚವೇ ಸುಮಾರು 13 ಕೋಟಿ ರು. ಗಳವರೆಗೆ ಇದೆ. ಸಿಬ್ಬಂದಿ ಹಾಗೂ ಅನುದಾನದ ಕೊರತೆಯಿಂದ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಪಿಲಿಕುಳದ ಉಸ್ತುವಾರಿ ಹೊಂದಿರುವ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಅರುಣ್‌ ಕುಮಾರ್‌ ಶೆಟ್ಟಿ ಮಾಹಿತಿ ನೀಡಿದರು.

ಸಮಿತಿ ಸದಸ್ಯ ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ, ಡಾ. ಮಂತರ್‌ ಗೌಡ, ಶಿವಣ್ಣ ಬಿ.ಎಸ್‌., ಸಚಿವಾಲಯದ ಉಪ ಕಾರ್ಯದರ್ಶಿ ಗೋಪಾಲ ರೆಡ್ಡಿ, ಜಿಪಂ ಸಿಇಒ ವಿನಾಯಕ್‌ ಕರ್ಭಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‌, ಪಿಲಿಕುಳ ವಿಜ್ಞಾನ ಕೇಂದ್ರದ ಡಾ. ಶ್ರೀನಿಕೇತನ್‌ ಮತ್ತಿತರರಿದ್ದರು.

ಪಿಲಿಕುಳ ಮೃಗಾಲಯ ಶೀಘ್ರ ಅರಣ್ಯ ಇಲಾಖೆಗೆ ಹಸ್ತಾಂತರ

ಕಂದಾಯ ಇಲಾಖೆಗೊಳಪಟ್ಟಿರುವ ಪಿಲಿಕುಳ ಭೂಮಿಯನ್ನು ಲೀಸ್‌ನಡಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಬಳಕೆ ಮಾಡುತ್ತಿದೆ. 2030ಕ್ಕೆ ಲೀಸ್‌ ಅವಧಿ ಮುಗಿಯಲಿದ್ದು, ಭೂಮಿಯನ್ನು ಕಂದಾಯ ಇಲಾಖೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಬೇಕಿದೆ. ಮೃಗಾಲಯವನ್ನು ಅರಣ್ಯ ಇಲಾಖೆಯಡಿ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಈ ಹಿಂದೆಯೇ ಸಮಿತಿ ಸಲಹೆ ನೀಡಲಾಗಿತ್ತು. ಆ ಪ್ರಕ್ರಿಯೆ ನಡೆಯುತ್ತಿದ್ದು, ಕಾಯಂ ನೆಲೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯ ನೇಮಕವಾಗಿದೆ. ಮೃಗಾಲಯ ಪ್ರಾಧಿಕಾರ ನಿರ್ವಹಣೆಗೆ ಒಪ್ಪಿಕೊಂಡಿದೆ ಎಂದು ಜಿಲ್ಲಾಧಿಕಾರಿ ದರ್ಶನ್‌ ಮಾಹಿತಿ ನೀಡಿದರು.

PREV
Read more Articles on
click me!

Recommended Stories

Tumakuru: ಏಕಕಾಲದಲ್ಲಿ ಹಲವು ಇಲಾಖೆಗಳ ಸಚಿವರಾಗಿದ್ದ ಹಿರಿಯ ನಾಯಕ ಸಿ. ವೀರಪ್ಪ ನಿಧನ
‘ವಿಸ್ಕಿ, ಬಿಯರ್ ಹಾಗೂ ರಮ್.. ಸ್ವಾಮಿ.. ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ, ಸರ್ಕಾರದ ವಿರುದ್ಧ ಕೋರ್ಟ್ ಗರಂ