ಪಿಇಎಸ್‌ ವಿವಿಯಲ್ಲಿ ಲೈವ್‌ ಆನ್‌ಲೈನ್‌ ತರಗತಿ ಆರಂಭ

By Kannadaprabha NewsFirst Published Mar 20, 2020, 7:55 AM IST
Highlights

ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಯಲ್ಲಿ ಪಠ್ಯಕ್ರಮ ಪೂರ್ಣಗೊಳಿಸುವ ಉದ್ದೇಶದಿಂದ ಪಿಇಎಸ್‌ ವಿಶ್ವವಿದ್ಯಾಲಯ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದೆ.

ಬೆಂಗಳೂರು(ಮಾ.20): ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಯಲ್ಲಿ ಪಠ್ಯಕ್ರಮ ಪೂರ್ಣಗೊಳಿಸುವ ಉದ್ದೇಶದಿಂದ ಪಿಇಎಸ್‌ ವಿಶ್ವವಿದ್ಯಾಲಯ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದೆ.

ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್‌ ವಿವಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗಾಗಿ ‘ಪಿಇಎಸ್‌ಯು ಲೈವ್‌ ಕ್ಲಾಸಸ್‌’ ಎಂಬ ಶೀರ್ಷಿಕೆಯಡಿ ತರಗತಿಗಳನ್ನು ಆರಂಭಿಸಿದೆ. ಎಂದಿನಂತೆ ಪ್ರಾಧ್ಯಾಪಕರು ತರಗತಿಗಳಲ್ಲಿ ಬೋಧನೆ ಮಾಡಲಿದ್ದು, ಇದು ಲೈವ್‌ ಸ್ಟ್ರೀಮಿಂಗ್‌ ಆಗಲಿದೆ.

ಬೆಂಗ್ಳೂರಲ್ಲಿ ವಾಯು ಮಾಲಿನ್ಯ ಪ್ರಮಾಣ ಕುಸಿತ: ಕಾರಣ ಕೊರೋನಾ ವೈರಸ್..!

ಈ ಮೊದಲೇ ವೇಳಾಪಟ್ಟಿಪ್ರಕಟಿಸಿರುವುದರಿಂದ ಅದರ ಅನುಗುಣವಾಗಿ ವಿದ್ಯಾರ್ಥಿಗಳು ಲಾಗ್‌ ಇನ್‌ ಆಗಿ ಪಾಠ ಕೇಳಬಹುದು. ಗೊಂದಲವಿದ್ದರೆ, ಅಲ್ಲೇ ಚಾಟ್‌ನಲ್ಲಿ ಪ್ರಶ್ನೆ ಕೇಳಿದರೆ ಉಪನ್ಯಾಸಕರು ಗೊಂದಲಕ್ಕೆ ಪರಿಹಾರ ನೀಡುತ್ತಾರೆ. ಈ ವೇಳೆ ತಾಂತ್ರಿಕ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕಾಗಿ ಪಿಇಎಸ್‌ ವಿವಿಯು ‘ಕಮಾಂಡ್‌ ಕೊಠಡಿ’ ನಿರ್ಮಾಣ ಮಾಡಿದೆ. ಇಲ್ಲಿ ತಂತ್ರಜ್ಞರು ಸಮಸ್ಯೆ ಎದುರಾದರೆ ತಕ್ಷಣ ಸರಿ ಪಡಿಸುತ್ತಾರೆ.

ಈ ಕುರಿತು ಮಾತನಾಡಿದ ಪಿಇಎಸ್‌ ವಿವಿ ಕುಲಪತಿ ಡಾ ಜೆ.ಸೂರ್ಯಪ್ರಸಾದ್‌, ಪ್ರತಿ ಒಂದು ತರಗತಿಯು 40 ನಿಮಿಷಯದ ಅವಧಿಯನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ಮೊಬೈಲ್‌ನಲ್ಲೇ ಲಾಗಿನ್‌ ಆಗಿ ಪಾಠಗಳನ್ನು ಕೇಳಬಹುದು. ನಾವು ಕಳೆದ ನಾಲ್ಕೂ ವರ್ಷದಿಂದ ತರಗತಿಗಳನ್ನು ರೆಕಾರ್ಡ್‌ ಮಾಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದೇವೆ. ಆದರೆ, ಈ ಬಾರಿ ರಾಜ್ಯ ಸರ್ಕಾರ 15 ದಿನಗಳು ರಜೆ ಘೋಷಣೆ ಮಾಡಿದೆ. ಮೇ ನಲ್ಲಿ ಪರೀಕ್ಷೆಗಳು ಆರಂಭವಾಗುತ್ತವೆ. ಏಪ್ರಿಲ್‌ ಅಂತ್ಯದೊಳಗೆ ಪಾಠಗಳನ್ನು ಸಂಪೂರ್ಣವಾಗಿ ಮುಗಿಸಿಕೊಡಬೇಕಿದೆ. ಹೀಗಾಗಿ, ಅನಿವಾರ್ಯವಾಗಿ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಅನರ್ಹ ಶಾಸಕ ಮುನಿರತ್ನ ಗೆಲುವು ಅಕ್ರಮವಾ ? ಸಕ್ರಮವಾ? ಆದೇಶಕ್ಕೆ ಕ್ಷಣಗಣನೆ..!

ವಿವಿ ಕುಲಸಚಿವ ಕೆ.ಶ್ರೀಧರ್‌ ಮಾತನಾಡಿ, ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಒಟ್ಟಾರೆ 8,674 ವಿದ್ಯಾರ್ಥಿಗಳಿದ್ದು, ಈ ಪೈಕಿ 6,412 ವಿದ್ಯಾರ್ಥಿಗಳು ತರಗತಿಗಳನ್ನು ಆನ್‌ಲೈನ್‌ ಮೂಲಕ ವೀಕ್ಷಿಸುತ್ತಿದ್ದಾರೆ. 855 ಉಪನ್ಯಾಸಕರ ಪೈಕಿ 313 ಉಪನ್ಯಾಸಕರು ಲೈವ್‌ ತರಗತಿಗಳಲ್ಲಿ ನಿರತರಾಗಿದ್ದಾರೆ. ಪ್ರತಿ ದಿನ 38 ವಿಷಯಗಳಿಗೆ 40 ನಿಮಿಷದ ಒಂಭತ್ತು ತರಗತಿಗಳನ್ನು ನಡೆಸಲಾಗುತ್ತದೆ. ಸುಮಾರು 22,105 ಉಪನ್ಯಾಸ ವೀಡಿಯೋಗಳನ್ನು ಈಗಾಗಲೇ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಒಂದು ವೇಳೆ ಲೈವ್‌ ತರಗತಿ ಭಾಗವಹಿಸಲು ಸಾಧ್ಯವಾಗದಿದ್ದರೆ ಸಂಜೆ ವೇಳೆಗೆ ವೀಡಿಯೋ ತುಣುಕುಗಳನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಸಮಯ ಸಿಕ್ಕಾಗ ವಿದ್ಯಾರ್ಥಿಗಳು ನೋಡಿ ಮಾಹಿತಿ ತಿಳಿಯಬಹುದು ಎಂದು ತಿಳಿಸಿದರು.

click me!