ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇನಂದಿಹಾಳದಲ್ಲಿ ನಡೆದ ಘಟನೆ| ಅವ್ಯಾಹತವಾಗಿ ಮುಂದುವರಿದ ಅಕ್ರಮ ಮರಳು ಗಣಿಗಾರಿಕೆ| ಮುಂದುವರಿದ ಅಕ್ರಮ|
ಕುಷ್ಟಗಿ(ಫೆ.03): ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ಮುಂದುವರಿದಿದ್ದು, ಮಣ್ಣುಗುಡ್ಡೆ ಕುಸಿದು ವ್ಯಕ್ತಿಯೊಬ್ಬ ಸಿಲುಕಿ ಹಾಕಿಕೊಂಡು ಸಾವನ್ನಪ್ಪಿದ ಘಟನೆ ತಾಲೂಕಿನ ಹಿರೇನಂದಿಹಾಳ ಗ್ರಾಮದ ಕೆರೆಯಲ್ಲಿ ನಡೆದಿದೆ.
ಗ್ರಾಮದ ಮಹಾದೇವಪ್ಪ ಮುರಡಿ (45)ಮೃತ ವ್ಯಕ್ತಿ. ಪತ್ನಿ ಲಕ್ಷ್ಮವ್ವ ನೀಡಿದ ದೂರಿನ ಅನ್ವಯ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಸರ್ಕಲ್ ಇನಸ್ಪೆಕ್ಟರ್ ನಿಂಗಪ್ಪ ರುದ್ರಪ್ಪಗೋಳ, ಸಬ್ ಇನಸ್ಪೆಕ್ಟರ್ ತಿಮ್ಮಣ್ಣ ನಾಯಕ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.
ನಂತರ ಗ್ರಾಮಸ್ಥರ ಸಹಕಾರದಿಂದ ಮೃತದೇಹವನ್ನು ಹೊರತೆಗೆಯಲಾಯಿತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಗ್ರಾಮದ ವ್ಯಕ್ತಿಯೊಬ್ಬ ರಾತ್ರಿ ವೇಳೆ ಕೆರೆಯಲ್ಲಿ ಮರಳು ಬಗೆಯಲು ಟ್ರ್ಯಾಕ್ಟರ್ ಸಹಿತ ಕೂಲಿಕಾರರನ್ನು ಕರೆದುಕೊಂಡು ಹೋಗಿದ್ದರು. ಆದರೆ, ಅಸುರಕ್ಷಿತ ರೀತಿಯಲ್ಲಿ ಗುಂಡಿಗೆ ಇಳಿದು ಮರಳು ತೆಗೆಯುವಾಗ ಮೇಲಿನ ಮಣ್ಣಿನ ಗುಡ್ಡೆ ಕುಸಿದಿದೆ. ಸ್ಥಳದಲ್ಲಿದ್ದ ಇತರರು ವ್ಯಕ್ತಿಗಳು ಸಿಲುಕಿಕೊಂಡ ವ್ಯಕ್ತಿಯನ್ನು ತೆಗೆಯಲು ಮುಂದಾಗಿದ್ದಾರೆ. ಆದರೆ ಆತ ಸಾವಿಗೀಡಾಗಿದ್ದು ತಿಳಿಯುತ್ತಿದ್ದಂತೆ ಪರಾರಿಯಾಗಿದ್ದಾರೆ.
ಕೊಪ್ಪಳ: ಸ್ವತಃ ಚರಂಡಿ ಸ್ವಚ್ಛಗೊಳಿಸಿದ ಗವಿಸಿದ್ಧೇಶ್ವರ ಶ್ರೀ..!
ಮುಂದುವರಿದ ಅಕ್ರಮ:
ತಾಲೂಕಿನ ಹಿರೇನಂದಿಹಾಳ, ನಿಡಶೇಸಿ, ವಣಗೇರಿ, ತಾವರಗೇರಾ, ಹನುಮಸಾಗರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ಮುಂದುವರಿದಿದೆ. ಅಲ್ಲದೆ, ಕೆಲವರು ರಾತ್ರಿ ವೇಳೆ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದಾರೆ. ಆದರೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾತ್ರ ಸೂಕ್ತ ಕಾನೂನು ಕ್ರಮ ಜರುಗಿಸದಿರುವುದರಿಂದ ಅಕ್ರಮ ಮರಳು ಸಾಗಾಣಿಕೆ ಮುಂದುವರಿದಿದೆ.