ದಾಸೋಹದ ಪಾತ್ರೆ ತೊಳೆದ ನೀರು ಸಾಗುವ ಚರಂಡಿ| ಬೆಳ್ಳಂಬೆಳಗ್ಗೆ ಚರಂಡಿ ಸ್ವಚ್ಛ ಮಾಡಿದ ಶ್ರೀಗಳು| ಅಲ್ಲಿದ್ದವರಿಗೆ ಮಾಡುವಂತೆ ಹೇಳದೆ ತಾವೇ ಮಾಡಿದ ಶ್ರೀಗಳು| ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಚರಂಡಿ ಸ್ವಚ್ಛ ಮಾಡಿರುವ ವಿಡಿಯೋ ವೈರಲ್|
ಕೊಪ್ಪಳ(ಫೆ.03): ದಾಸೋಹದ ಪಾತ್ರೆಗಳನ್ನು ತೊಳೆದ ನೀರು ಸಾಗುವ ಚರಂಡಿಯನ್ನು ಸ್ವತಃ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸ್ವಚ್ಛ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.
ಪ್ರತಿವರ್ಷವೂ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜಾತ್ರೆಯ ಬಳಿಕ ಇಂಥ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಬೆಳಗ್ಗೆಯೇ ಎದ್ದು ಬರುವ ಅವರು, ಸ್ವಚ್ಛತೆಯನ್ನು ಪರಿಶೀಲನೆ ಮಾಡುತ್ತಾರೆ. ಅಲ್ಲಿ ಸ್ವಚ್ಛತೆ ಕಾಣಲಿಲ್ಲ ಎಂದರೆ ಸಾಕು ಅದನ್ನು ಬೇರೆಯವರಿಗೆ ಹೇಳುವುದಿಲ್ಲ, ಬದಲಾಗಿ ತಾವೇ ಸ್ವಚ್ಛ ಮಾಡುತ್ತಾರೆ.
ಶೌಚಾಲಯ ಶುಚಿಗೊಳಿಸಿದ ಗವಿಸಿದ್ಧೇಶ್ವರ ಶ್ರೀಗಳು!
ಈ ವರ್ಷ ದಾಸೋಹದಲ್ಲಿನ ಪಾತ್ರೆಗಳನ್ನು ತೊಳೆದ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಲಾಗಿದೆ. ಆದರೆ, ಅತ್ತ ಯಾರೂ ಹೊರಳಿಯೂ ನೋಡಿಲ್ಲ. ನೀರು ಸಾಗುವುದಕ್ಕೆ ಚರಂಡಿಯಲ್ಲಿ ಸರಿಯಾದ ದಾರಿ ಇರಲಿಲ್ಲ, ಅದು ತುಂಬಿಕೊಂಡಿತ್ತು. ಅದನ್ನು ಗಮನಿಸಿದ ಶ್ರೀಗಳು, ತಾವೇ ಖುದ್ದು ಸ್ವಚ್ಛ ಮಾಡಿದ್ದಾರೆ. ಯಾರೋ ಭಕ್ತರು ಅದನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅದೀಗ ವೈರಲ್ ಆಗಿದೆ.
ಹೀಗೆ ಮಾಡುವ ಕೆಲಸದ ಫೋಟೋಗಳನ್ನು ತೆಗೆಯುವುದಕ್ಕೆ ಬಿಡುವುದಿಲ್ಲ. ಅಕ್ಕಪಕ್ಕದಲ್ಲಿ ಯಾರಾದರೂ ವಿಡಿಯೋ ಮಾಡುತ್ತಾರೆ ಎಂದು ಗೊತ್ತಾದರೆ ಸಾಕು ಅವರಿಂದ ಮೊಬೈಲ್ ಪಡೆದು, ವಿಡಿಯೋ ಡಿಲೀಟ್ ಮಾಡುತ್ತಾರೆ. ಆದರೂ, ಇದರ ಮಧ್ಯೆ ಅವರು ಚರಂಡಿ ಸ್ವಚ್ಛ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.