ವರದಿ: ಭರತ್ ರಾಜ್, ಕಲ್ಲಡ್ಕ
ಕಾರವಾರ (ಸೆ.2) : ಅದು ಪೆಪ್ಪರ್ ಕ್ವೀನ್ ಎಂದೇ ಖ್ಯಾತಿ ಪಡೆದಿದ್ದ ರಾಣಿ ಚೆನ್ನ ಭೈರಾದೇವಿ ತನ್ನ ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದ ಬಾವಿ. ತನ್ನ ಆಡಳಿತ ಪ್ರದೇಶದಲ್ಲಿ ಬೆಳೆಸುತ್ತಿದ್ದ 'ಬ್ಲ್ಯಾಕ್ ಗೋಲ್ಡ್' ಎಂದು ಗುರುತಿಸಲ್ಪಡುವ ಕಾಳುಮೆಣಸನ್ನು ಇದೇ ಬಾವಿಯಲ್ಲಿ ಹಾಕಿ ರಾಶಿ ಬಳಿಕ ಬೋಟ್ ಮೂಲಕ ರಫ್ತು ಮಾಡಲಾಗುತ್ತಿತ್ತು. ಆದರೆ, ಪ್ರಸ್ತುತ, ಈ ಬಾವಿ ಹಾಳು ಕೊಂಪೆಯಂತಾಗಿದ್ದು, ಪ್ರಾಚ್ಯಶಾಸ್ತ್ರ ಇಲಾಖೆ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ.
undefined
ಕಾಫಿನಾಡಿಗೆ ಸಾವಿರಾರು ಪ್ರವಾಸಿಗರ ಲಗ್ಗೆ, ಚೆಕ್ ಪೋಸ್ಟ್ ಬಳಿ ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಮ್!
ಒಂದೆಡೆ ಸುತ್ತಲೂ ಗಿಡ-ಗಂಟೆಗಳು ಬೆಳೆದು ಪಾಳು ಬಿದ್ದಿರುವ ಐತಿಹಾಸಿಕ ಬಾವಿ. ಮತ್ತೊಂದೆಡೆ ಈ ಬಾವಿಯನ್ನು ನೋಡಲು ಬಂದಿರುವ ಪ್ರವಾಸಿಗರು. ಇನ್ನೊಂದೆಡೆ ಬಾವಿಯ ರಕ್ಷಣೆಗೆ ಆಗ್ರಹಿಸುತ್ತಿರುವ ಸ್ಥಳೀಯರು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಉತ್ತರಕನ್ನಡ(Uttara Kannada) ಜಿಲ್ಲೆಯ ಹೊನ್ನಾವರ(Honnavar) ತಾಲೂಕಿನ ಜನಕಡ್ಕಾಲ್(Janakadkal) ಗ್ರಾಮದ ರಸ್ತೆಯ ಬಳಿ. ಹೌದು, ಸಾಳ್ವ ರಾಜಮನೆತನದ ರಾಣಿಚೆನ್ನಭೈರಾದೇವಿ (Chennabhairadevi) 16ನೇ ಶತಮಾನದಲ್ಲಿ ಉತ್ತರಕನ್ನಡ ಜಿಲ್ಲೆಯನ್ನು ಒಳಗೊಂಡಂತೆ ತನ್ನ ಆಡಳಿತ ಪ್ರದೇಶವನ್ನು ಸಮರ್ಥವಾಗಿ ಆಳಿದ್ದ ಜನಪ್ರಿಯ ಪರಾಕ್ರಮಿ ವೀರವನಿತೆ.
ತನ್ನ ಸುತ್ತಮುತ್ತಲಿನ ರಾಜ್ಯದ ವಿರೋಧಿಗಳನ್ನು ಸಮರ್ಥವಾಗಿ ಎದುರಿಸಿ 54 ವರ್ಷ ರಾಜ್ಯವನ್ನಾಳಿದ್ದಾಳೆ. ಈ ರಾಣಿಯ ಕಾಲದಲ್ಲಿ ಕಾಳು ಮೆಣಸಿನ ರಫ್ತಿಗೆ ಉತ್ತೇಜನ ನೀಡಿ ರಾಜ್ಯವನ್ನು ಸುಭಿಕ್ಷವಾಗಿಟ್ಟಿದ್ದಕ್ಕೆ ಈಕೆ ಕಾಳುಮೆಣಸಿನ ರಾಣಿ(The Pepper Queen) ಎಂದೇ ಪ್ರಸಿದ್ಧಿಯಾಗಿದ್ದಳು. ಪಶ್ಚಿಮ ಘಟ್ಟ(Western Ghats)ದ ಸೆರಗಿನ ಕಾಡಿನಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಕಾಳು ಮೆಣಸನ್ನು ಸಂಗ್ರಹ ಮಾಡುವುದೇ ಆಗಿನ ಕಾಲದ ಜನರ ಪ್ರಮುಖ ಉದ್ಯೋಗಗಳಲ್ಲಿ ಒಂದಾಗಿತ್ತು. ಕಾಳು ಮೆಣಸಿನ ಜತೆಗೆ ಇತರ ಸಾಂಬಾರ ಪದಾರ್ಥಗಳ ಉತ್ಪಾದನೆಗೂ ರಾಣಿ ಬೆಂಬಲ ನೀಡಿದ್ದಳು ಎಂದು ಹೇಳಲಾಗುತ್ತದೆ.
ಕಾರ್ಮಿಕರ ಮೂಲಕ ಸಂಗ್ರಹ ಮಾಡಲಾದ ಕಾಳುಮೆಣಸುಗಳನ್ನು ಇದೇ ಬಾವಿಯಲ್ಲಿ ತುಂಬಿಸಿ ನಂತರ ಇಲ್ಲಿಂದ ಕೇವಲ 200 ಮೀಟರ್ ದೂರದಲ್ಲಿರುವ ಮುಕ್ತಿ ನದಿಗೆ ಸಂಪರ್ಕ ಹೊಂದಿರುವ ಸುರಂಗದ ಮೂಲಕ ಹರಿಸಿ ಅಲ್ಲಿಂದ ಸಂಗ್ರಹ ಮಾಡಲಾಗುತ್ತಿತ್ತು. ಬಳಿಕ ದೋಣಿಗಳ ಮೂಲಕ ಸಾಗಿಸಿ ಹೊರ ದೇಶಗಳಿಗೆ ಹಡಗುಗಳ ಮೂಲಕ ರಪ್ತು ಮಾಡಲಾಗುತ್ತಿತ್ತು. ಇಂತಹ ಐತಿಹಾಸಿಕ ಬಾವಿ ಇದೀಗ ಹಾಳು ಕೊಂಪೆಯಂತಾಗಿದ್ದು, ಇದನ್ನು ಸಂರಕ್ಷಿಸಿ ಸೂಕ್ತ ಮಾಹಿತಿ ನೀಡುವ ಬೋರ್ಡ್ ಅಳವಡಿಸುವ ಮೂಲಕ ಒಂದು ಪ್ರವಾಸಿ ತಾಣವಾಗಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಅಂದಹಾಗೆ, ರಾಣಿ ಚೆನ್ನಭೈರಾದೇವಿಯ ಸಮಯದ ಈ ಬಾವಿ ಹಾಗೂ ಇದಕ್ಕೆ ಸಂಪರ್ಕಿಸುವ ಸಣ್ಣ ಸುರಂಗ ಇನ್ನೂ ಈ ಪ್ರದೇಶದಲ್ಲಿ ಕಾಣಬಹುದಾಗಿದೆ. ಇದರ ಮಾಹಿತಿ ಸ್ಥಳೀಯರು ಮಾತ್ರ ಹೊಂದಿದ್ದಾರೆ ಹೊರತು ಹೊರಗಿನಿಂದ ಬಂದಂತಹ ಯಾವುದೇ ಪ್ರವಾಸಿಗರಿಗೂ ಇಲ್ಲೊಂದು ಐತಿಹಾಸಿಕ ಬಾವಿಯಿದೆ ಎಂದು ತಿಳಿದಿಲ್ಲ. ಇಲ್ಲಿನ ರಸ್ತೆಯಲ್ಲಿ ಸಾಗುವ ಜನರಿಗೂ ಈ ಬಗ್ಗೆ ತಿಳಿದು ಬರುವ ಸಾಧ್ಯತೆಗಳಿಲ್ಲ. ಈ ಪ್ರದೇಶದಲ್ಲಿ ಸೂಕ್ತ ನೆಟ್‌ವರ್ಕ್(Network) ಕೂಡಾ ಇಲ್ಲದ ಕಾರಣ ಯಾರೂ ಗೂಗಲ್ ಮ್ಯಾಪ್(Google map) ಹಾಕಿಕೊಂಡು ಹುಡುಕಾಡಲು ಕೂಡಾ ಅಸಾಧ್ಯ. ಈ ಬಾವಿಯ ಸ್ಥಿತಿ ಹದಗೆಟ್ಟು ಹೋಗಿದ್ದು, ಗಿಡ– ಗಂಟಿಗಳು ಬೆಳೆದು ಮಣ್ಣಿನಲ್ಲಿ ಮುಚ್ಚಿ ಹೋಗಿದೆ.
ಇನ್ನು ಜಿಲ್ಲಾಡಳಿತ ಹಲವು ಅಧಿಕಾರಿಗಳಿಗೆ ಈ ಬಗ್ಗೆ ಕೊಂಚ ಮಾಹಿತಿಯೂ ಇಲ್ಲ. ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳಂತೂ ಸಾಕಷ್ಟು ನಿರ್ಲಕ್ಷ್ಯ ವಹಿಸಿದ್ದಾರೆ. ಆಗಿನ ಕಾಲದಲ್ಲಿ ಇತರ ಯಾವುದೇ ರಾಜ್ಯಗಳ ಮಹಾರಾಣಿಗಿಂತಲೂ ಕಡಿಮೆ ಇರದ ಚೆನ್ನ ಭೈರಾದೇವಿ ತನ್ನ ಇಡೀ ರಾಜ್ಯವನ್ನು ಸುಭಿಕ್ಷವಾಗಿ ಇರಿಸಿದ್ದವಳು. ಅಂತಹ ರಾಣಿಯ ಇತಿಹಾಸ ಸಾರುವ ಈ ಕಾಳುಮೆಣಸಿನ ಬಾವಿಯನ್ನು ಅಭಿವೃದ್ಧಿ ಪಡಿಸಬೇಕಿದೆ. ಅಲ್ಲದೇ, ಇಲ್ಲಿ ಪ್ರಾಣಿಗಳು ಬಿದ್ದು ಸಾಯುತ್ತಿರುವುದರಿಂದ ಅವುಗಳ ರಕ್ಷಣೆಗಾಗಿಯೂ ಕಟ್ಟೆಯನ್ನು ಕಟ್ಟಬೇಕೆನ್ನುವುದು ಪ್ರವಾಸಿಗರ ಅಭಿಪ್ರಾಯ.
ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳಿಗೆ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ: ಪ್ರವಾಸಿಗರಿಗೆ ಸಮಸ್ಯೆ
ಒಟ್ಟಿನಲ್ಲಿ ರಾಣಿ ಚೆನ್ನಭೈರಾದೇವಿಯ ಇತಿಹಾಸವನ್ನು ನೆನಪಿಸುವ ಐತಿಹಾಸಿಕ ಕಾಳುಮೆಣಸಿನ ಬಾವಿ ಸಂಪೂರ್ಣ ಹಾಳಾಗಿ ನಶಿಸುವ ಹಂತಕ್ಕೆ ಬಂದಿದೆ. ಜತೆಗೆ ಈ ಬಾವಿಗೆ ಬಿದ್ದು ಸಾಕಷ್ಟು ಪ್ರಾಣಿಗಳು ಪ್ರಾಣ ಬಿಟ್ಟಿವೆ. ಹೀಗಾಗಿ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಐತಿಹಾಸಿಕ ಸ್ಮಾರಕವನ್ನ ಅಭಿವೃದ್ಧಿ ಪಡಿಸಬೇಕಿದೆ.