ಬೆಳಗಾವಿ ಜಿಲ್ಲೆಯಲ್ಲಿ ಒಂದಲ್ಲ.. ಎರಡಲ್ಲ.. ಮೂರು ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆ ಕರುವನ್ನು ಹೊತ್ತೊಯ್ಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ, (ಆಗಸ್ಟ್.11): ಗಡಿ ಜಿಲ್ಲೆ ಬೆಳಗಾವಿಗೆ ಚಿರತೆ ಕಾಟ ಶುರುವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಚಿರತೆ ಸೆರೆ ಹಿಡಿಯುವುದೇ ಒಂದು ದೊಡ್ಡ ಸವಾಲಾಗಿದೆ. ಬೆಳಗಾವಿ ಜಿಲ್ಲೆಯ ಮೂರು ದಿಕ್ಕುಗಳಲ್ಲಿ ಮೂರು ಚಿರತೆಗಳು ಪ್ರತ್ಯಕ್ಷವಾಗಿವೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಬಳಿ ಚಿರತೆ ಪ್ರತ್ಯಕ್ಷವಾಗಿ 15 ದಿನ ಕಳೆದರೂ ಚಿರತೆ ಸಿಕ್ಕಿಲ್ಲ. ಮತ್ತೊಂದೆಡೆ ಬೆಳಗಾವಿಯ ಜಾಧವ್ ನಗರದಲ್ಲಿ ಕಟ್ಟಡ ಕಾರ್ಮಿಕ ಸಿದರಾಯಿ ಎಂಬುವರ ಮೇಲೆ ಆಗಸ್ಟ್ 5ರಂದು ಚಿರತೆ ಪ್ರತ್ಯಕ್ಷವಾಗಿತ್ತು. ಜಾಧವ್ ನಗರದಿಂದ ಒಂದು ಕಿಲೋಮೀಟರ್ ಅಂತರದಲ್ಲಿ ಇರುವ ಗಾಲ್ಫ್ ಮೈದಾನಕ್ಕೆ ಚಿರತೆ ನುಗ್ಗಿದೆ ಎಂಬ ಅನುಮಾನದಡಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಟ್ರ್ಯಾಪ್ ಕ್ಯಾಮರಾದಲ್ಲಿ ಚಿರತೆ ಚಿತ್ರ ಸೆರೆಯಾಗಿತ್ತು. ಇದಾದ ಬಳಿಕ 16 ಟ್ರ್ಯಾಪ್ ಕ್ಯಾಮರಾ ಎಂಟು ಬೋನುಗಳನ್ನು ಇರಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಆದರೂ ಚಿರತೆ ಸೆರೆ ಸಿಕ್ಕಿಲ್ಲ.
ಬೆಳಗಾವಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನು ಚಿರತೆ ಸೆರೆ ಸಿಗದ ಹಿನ್ನೆಲೆ ಬೆಳಗಾವಿ ನಗರದ ಗಾಲ್ಫ್ ಮೈದಾನದ ಒಂದು ಕಿಲೋಮೀಟರ್ ವ್ಯಾಪ್ತಿಯ 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಚಿರತೆ ಸೆರೆ ಹಿಡಿಯಲು 7ನೇ ದಿನವೂ ಕಾರ್ಯಾಚರಣೆ ಮುಂದುವರಿದಿದ್ದು ಇಂದು ಚಿರತೆ ಪತ್ತೆಗಾಗಿ ಮೂರು ಡ್ರೋಣ್ ಕ್ಯಾಮರಾಗಳನ್ನು ಬಳಸಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೇ ಮೂವ್ಮೆಂಟ್ ಕ್ಯಾಮರಾಗಳನ್ನು ಸಹ ಗಾಲ್ಫ್ ಮೈದಾನದಲ್ಲಿ ಫಿಕ್ಸ್ ಮಾಡಲಾಗಿದೆ ಎಂದು ಡಿಎಫ್ಒ ಆ್ಯಂಥೋನಿ ಮರಿಯಮ್ ತಿಳಿಸಿದ್ದಾರೆ
ಚಿರತೆ ಕರುವನ್ನು ಹೊತ್ತೊಯ್ಯುವ ದೃಶ್ಯ CC TVಯಲ್ಲಿ ಸೆರೆ
ಇನ್ನು ಇತ್ತ ಯಡೂರವಾಡಿ ಹಾಗೂ ಬೆಳಗಾವಿ ನಗರದಲ್ಲಿ ಚಿರತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಬೆಳಗಾವಿ ಆಯ್ತು, ಯಡೂರವಾಡಿ ಆಯ್ತು ಈಗ ಮೂಡಲಗಿ ತಾಲೂಕಿನ ಧರ್ಮಟ್ಟಿಯಲ್ಲೂ ಸಹ ಚಿರತೆ ಪ್ರತ್ಯಕ್ಷವಾಗಿದೆ. ಮಲಗಿದ್ದ ಕರುವನ್ನು ಚಿರತೆ ಎತ್ತಿಕೊಂಡು ಹೋಗಿದೆ. ಅನೀಲ್ ಮಂದ್ರೋಳಿ ಎಂಬುವವರಿಗೆ ಸೇರಿದ ಕರುವನ್ನು ಚಿರತೆ ಹೊತ್ತಿಕೊಂಡು ಹೋಗಿದ್ದು ಚಿರತೆಯ ಚಲನವಲನ ಸ್ಪಷ್ಟವಾಗಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಸಾರ್ವಜನಿಕರು ಭಯಭೀತರಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಗೋಕಾಕ್ ಹಾಗೂ ಬೆಳಗಾವಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಚಿರತೆ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೇ ಗದಗ, ದಾಂಡೇಲಿ, ಭೀಮಗಡ ಅರಣ್ಯ ವಲಯದಿಂದ ತಜ್ಞ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯಾಚರಣೆ ನಡೆಸಿದ್ದರೂ ಚಿರತೆ ಪತ್ತೆಯಾಗದೇ ಇರೋದು ಅರಣ್ಯ ಇಲಾಖೆ ಸಿಬ್ಬಂದಿ ನಿದ್ದೆಗೆಡಿಸಿದೆ. ಆದಷ್ಟು ಬೇಗ ಚಿರತೆ ಪತ್ತೆ ಹಚ್ಚಿ ಜನರಲ್ಲಿರುವ ಭಯ ಹೋಗಲಾಡಿಸಲಿ ಎಂಬುದು ಸಾರ್ವಜನಿಕರ ಆಗ್ರಹ.