ರೈತರು, ಕೂಲಿ, ಕಾರ್ಮಿಕರು, ಯುವಕರ ಬದುಕನ್ನು ನಾಶ ಮಾಡುತ್ತಿರುವ ಜನವಿರೋಧಿ ಬಿಜೆಪಿ ಸರ್ಕಾರ ತೊಲಗಲಿ ಎಂದು ‘ಸಮಾಜ ಪರಿವರ್ತನಾ ಸಮುದಾಯ’ದ ಸಂಸ್ಥಾಪಕ ಎಸ್.ಆರ್. ಹಿರೇಮಠ ಹೇಳಿದರು.
ಧಾರವಾಡ ಜ.6) : ರೈತರು, ಕೂಲಿ, ಕಾರ್ಮಿಕರು, ಯುವಕರ ಬದುಕನ್ನು ನಾಶ ಮಾಡುತ್ತಿರುವ ಜನವಿರೋಧಿ ಬಿಜೆಪಿ ಸರ್ಕಾರ ತೊಲಗಲಿ ಎಂದು ‘ಸಮಾಜ ಪರಿವರ್ತನಾ ಸಮುದಾಯ’ದ ಸಂಸ್ಥಾಪಕ ಎಸ್.ಆರ್. ಹಿರೇಮಠ ಹೇಳಿದರು. ಜನಾಂದೋಲನಗಳ ಮಹಾಮೈತ್ರಿ, ಸಿಟಿಜನ್ ಫಾರ್ ಡೆಮಾಕ್ರಸಿ ಹಾಗೂ ಜನತಂತ್ರ ಪ್ರಯೋಗ ಶಾಲೆ ಜಂಟಿಯಾಗಿ ಇಲ್ಲಿಯ ‘ಕರ್ನಾಟಕ ವಿದ್ಯಾವರ್ಧಕ ಸಂಘ’ದಲ್ಲಿ ಗುರುವಾರ ಆಯೋಜಿಸಿದ್ದ ಜನಜಾಗೃತಿ ಜಾಥಾ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಬೆವರು ಹರಿಸಿ ದುಡಿಯುವ ರೈತರು(Farmers), ಕೃಷಿ ಕೂಲಿಕಾರರು(Agricultural laborers), ಸಂಘಟಿತ, ಅಸಂಘಟಿತ ಹಾಗೂ ಮಹಿಳೆಯರು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಅಗತ್ಯ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿ ನಿರ್ಮಿಸಬೇಕಾದ ಸರ್ಕಾರಗಳು ತಮ್ಮ ಜವಾಬ್ದಾರಿ ಮರೆತು ನಡೆಯುತ್ತಿವೆ ಎಂದು ಕಿಡಿಕಾರಿದರು.
undefined
Karnataka Politics: ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಬಿಜೆಪಿ ಸರ್ಕಾರ ಕಿತ್ತೊಗೆಯಲು ಹೋರಾಟ: ಸಿದ್ದು
ಸಮಾಜದಲ್ಲಿ ದುಡ್ಡಿದ್ದವರ ಪರವಾಗಿ ಆಡಳಿತ ನಡೆಯುತ್ತಿದೆ. ಅಸಮಾನತೆ ಎದ್ದು ಕಾಣುತ್ತಿದ್ದು ಆಡಳಿತ ವ್ಯವಸ್ಥೆ ನೋಡಿದ್ದು ಕುರುಡಾಗಿ ವರ್ತಿಸುತ್ತಿದೆ. ಸಮಾಜದಲ್ಲಿ ಕೋಮು-ಸೌಹಾರ್ದ ಹೆಚ್ಚುತ್ತಿದ್ದು ನೆಮ್ಮದಿ ಬದುಕಿಗಾಗಿ ಹೋರಾಡುವ ಸ್ಥಿತಿ ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ತಿಳಿಸಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಇಂದು ಅಧಿಕಾರ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ(BJP govt) ಕರಾಳ ಕೃಷಿ ಕಾಯ್ದೆಗಳನ್ನು ಈ ವರೆಗೆ ಹಿಂಪಡೆದಿಲ್ಲ. ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾಯ್ದೆ ಜಾರಿಗೊಳಿಸಿಲ್ಲ. ಇದರಿಂದಾಗಿ ರೈತರ ಬದುಕು ಸಂಕಷ್ಟಕ್ಕೀಡಾಗಿದೆ. ಕೃಷಿ ಕ್ಷೇತ್ರದ ಮೇಲೆ ಗದಾಪ್ರಹಾರ ಮಾಡುತ್ತಿರುವ ಸರ್ಕಾರ, ಇನ್ನೊಂದೆಡೆ ತನ್ನ ಬೆಲೆ ಏರಿಕೆ ನೀತಿಯಿಂದಾಗಿ ಜನಸಮಾನ್ಯರ ಬದುಕನ್ನು ಅಸಹನೀಯಗೊಳಿಸಿದೆ. ಸರ್ಕಾರದ ನೀತಿಯಿಂದ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಒಟ್ಟಿನಲ್ಲಿ ತನ್ನ ಜನ ವಿರೋಧಿ ನೀತಿಗಳಿಂದ ಬಿಜೆಪಿ ಸರ್ಕಾರ ಜನರ ಬದುಕನ್ನು ಅಕ್ಷರಶ ಬೀದಿಗೆ ತಂದಿದೆ. ಹೀಗಾಗಿ ಇಂತಹ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯುವಂತೆ ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸಮಾಜದಲ್ಲಿ ಅನ್ಯಾಯ, ದಬ್ಬಾಳಿಕೆ, ಜನ ವಿರೋಧಿ ನೀತಿಗಳು ಹೆಚ್ಚಾದಾಗ ಅವುಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಜನಾಂದೋಲನಗಳ ಮಹಾಮೈತ್ರಿ ಮತ್ತಿತರ ಸಂಘಟನೆಗಳು ನಡೆಸುತ್ತಿರುವ ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆ ಶ್ಲಾಘನಿಯ ಎಂದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪೂರ ನಾಗೇಂದ್ರ ಮಾತನಾಡಿ, ಆಳುವ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡದೆ ಧರ್ಮದ ಹೆಸರಿನಲ್ಲಿ ಜನರ ಮನಸ್ಸಿನಲ್ಲಿ ವೀಷಬೀಜ ಬಿತ್ತುತ್ತಿದೆ. ಆ ಮೂಲಕ ಬ್ರಿಟಿಷರಂತೆ ಒಡೆದಾಳುವ ನೀತಿಯನ್ನು ತನ್ನದಾಗಿಸಿಕೊಂಡಿರುವ ಬಿಜೆಪಿ ನಾಯಕರು ಬ್ರಿಟಿಷರಿಗಿಂತಲೂ ಕ್ರೂರವಾದ ಆಡಳಿತ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತದಿಂದ ಅಭಿವೃದ್ಧಿ ಶೂನ್ಯ: ಸಲೀಂ ಅಹ್ಮದ್
ಇದೇ ವೇಳೆ ‘ಮೂರು ಕರಾಳ ಕಾಯ್ದೆಗಳು ಮತ್ತು ಸರ್ಕಾರವನ್ನು ಕಿತ್ತೊಗೆಯುವ ಜನತೆಯ ಹಕ್ಕು’ ಪುಸ್ತಕವನ್ನು ಹಿರಿಯ ಸಾಹಿತಿ ಡಾ. ಮಾಲತಿ ಪಟ್ಟಣಶೆಟ್ಟಿಬಿಡುಗಡೆ ಮಾಡಿದರು. ಪ್ರಾಸ್ತಾವಿಕವಾಗಿ ಬಸವಪ್ರಭು ಹೊಸಕೇರಿ, ರೈತರ ಸಮಸ್ಯೆ ಮತ್ತು ಪರಿಹಾರಗಳ ಕುರಿತು ಸಿಂಧೋಗಿಯ ಶಿವನಗೌಡ ಗೌಡಪ್ಪ ಮಾತನಾಡಿದರು. ಕಾರ್ಮಿಕರ ಸವಾಲುಗಳು ಹಾಗೂ ಕಾನೂನು ಕುರಿತು ರೇಣುಕಾ ಬಿಸರಹಳ್ಳಿ, ಪ್ರಚಲಿತ ಘಟನಾವಳಿ ಕುರಿತು ಡಾ. ವೆಂಕನಗೌಡ ಪಾಟೀಲ ಮಾತನಾಡಿದರು. ಚಿಂತಕ ಎಲ್.ಸಿ. ಬಕ್ಕಾಯಿ ಅಧ್ಯಕ್ಷತೆ ವಹಿಸಿದ್ದರು. ರಿಯಾಜ್ ಅಹಮ್ಮದ್ ನದಾಫ್ ವಂದಿಸಿದರು. ಇಕ್ಬಾಲ್ ಪುಲ್ಲಿ ಇದ್ದರು. ಇದಕ್ಕೂ ಮುಂಚೆ ರೈತರ, ಕಾರ್ಮಿಕರೊಂದಿಗೆ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ವರೆಗೂ ಯಾತ್ರೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.