ಚಿತ್ರದುರ್ಗ: ಈ ರಸ್ತೆ ನಾಲ್ಕು ವರ್ಷ ಬಾಳಿಕೆ ಬಂದಿದ್ದೇ ಹೆಚ್ಚು..!

Published : Sep 18, 2022, 10:31 AM IST
ಚಿತ್ರದುರ್ಗ: ಈ ರಸ್ತೆ ನಾಲ್ಕು ವರ್ಷ ಬಾಳಿಕೆ ಬಂದಿದ್ದೇ ಹೆಚ್ಚು..!

ಸಾರಾಂಶ

ಬಿವಿಕೆಎಸ್‌ ಲೇಔಟ್‌ ರಾಜಕಾಲುವೆ ಬ್ರಿಡ್ಜ್‌ ಮೇಲೆ ಕಂದಕ, ದುಸ್ಥಿತಿಯಲ್ಲಿ 120 ಕೋಟಿ ರು. ಅಮೃತ ಯೋಜನೆ ಕಾಮಗಾರಿಗಳು

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ(ಸೆ.18):  ಯಾವ ಯೋಜನೆಗಳನ್ನಾದರೂ ತನ್ನಿ. ಕೇಂದ್ರದ್ದಾದರೂ ಸರಿ, ರಾಜ್ಯದದ್ದಾದರೂ ಸರಿ. ನಾವು ಏನು ಮಾಡಬೇಕೋ ಅದನ್ನೇ ಮಾಡ್ತೇವೆ. ನಮ್ಮನ್ನು ನೀವು ಬದಲಾವಣೆ ಮಾಡೋಕೆ ಆಗೋಲ್ಲ! ಚಿತ್ರದುರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆ ಹೊತ್ತ ವ್ಯವಸ್ಥೆ ಸ್ಪಷ್ಟೋಕ್ತಿಯಿದು. ಕಳಪೆ ಕಾಮಗಾರಿ ಎನ್ನುವುದು ಈ ನೆಲದ ಗುಣ ಎಂಬುವಷ್ಟರ ಮಟ್ಟಿಗೆ ಜಗಜಾಹೀರಾದಂತೆ ಕಾಣಿಸುತ್ತಿದೆ. ಚಿತ್ರದುರ್ಗ ನಗರದ ರಸ್ತೆ ಸೇರಿದಂತೆ ಇತರೆ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಅನುದಾನ ತಂದು ಸುರಿಯಲಾಗಿದ್ದು, ಸಮಾಧಾನ ಎನ್ನುವಷ್ಟರ ಮಟ್ಟಿಗೆ ಎಲ್ಲೂ ಕಾಮಗಾರಿಗಳಾಗಿಲ್ಲ. ನಗರದ ಹೊರ ವಲಯದ ಬಿವಿಕೆಎಸ್‌ ಲೇಔಟ್‌ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಅನುದಾನದ ಅಮೃತ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿ ಇಡೀ ಇಂಜಿನಿಯರಿಂಗ್‌ ಹಾಗೂ ಗುತ್ತಿಗೆದಾರ ವ್ಯವಸ್ಥೆಗೆ ಸವಾಲಾಗಿದೆ. ರಾಜಕಾಲುವೆ ಮೇಲೆ ನಿರ್ಮಿಸಲಾದ ರಸ್ತೆಯಲ್ಲಿ ಬೃಹದಾಕಾರದ ಕಂದಕ ಬಿದ್ದಿದ್ದು ಸೋಜಿಗ ತರಿಸಿದೆ. ಕಾಂಕ್ರಿಟ್‌ ಸ್ಲಾಬ್‌ ಅಳವಡಿಸದೆ ಅದ್ಹೇಗೆ ರಸ್ತೆ ಮಾಡಲಾಯಿತು ಎಂಬ ಅಚ್ಚರಿಗಳು ಮೂಡುತ್ತವೆ.

ಅಮೃತ ಯೋಜನೆಯಡಿ 120 ಕೋಟಿ ರು:

ಅಮೃತ ಯೋಜನೆಯಡಿ ಕೇಂದ್ರ ಸರ್ಕಾರ 60 ಕೋಟಿ , ರಾಜ್ಯ ಸರ್ಕಾರ 40 ಕೋಟಿ ಹಾಗೂ ಸ್ಥಳೀಯ ನಗರಸಭೆ ತನ್ನ ಪಾಲಿನ 20 ಕೋಟಿ ರುಪಾಯಿ ಒಳಗೊಂಡಂತೆ ಯೋಜನೆ ರೂಪಿಸಲಾಗಿದೆ. ರಸ್ತೆ ಡಾಂಬರೀಕರಣ, ಚರಂಡಿ ಮುಂತಾದ ಮೂಲ ಸೌಕರ್ಯಕಲ್ಪಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಇದರಲ್ಲಿ ಸ್ಥಳೀಯ ಬಿವಿಕೆಎಸ್‌ ಲೇಔಟ್‌ನಲ್ಲಿ ರಾಜಕಾಲುವೆ ಮೇಲ್ಬಾಗ ಓಡಾಡಲು ರಸ್ತೆ ನಿರ್ಮಿಸುವ ಕಾಮಗಾರಿ ಕೂಡಾ ಸೇರಿತ್ತು. ಹೊಳಲ್ಕೆರೆ ರಸ್ತೆಯಲ್ಲಿ ಬರುವ ಜ್ಞಾನಭಾರತಿ ಶಾಲೆ ಹಿಂಭಾಗ ರಾಜಕಾಲುವೆ ಹೋಗುತ್ತಿದೆ. ಬಡಾವಣೆ ಸೀಳಿಹೋಗುತ್ತಿರುವ ಈ ರಾಜ ಕಾಲುವೆಗೆ ಪುಟ್ಟದೊಂದು ಸೇತುವೆ ನಿರ್ಮಿಸಿದಲ್ಲಿ ಆಕಡೆಯಿಂದ ಈ ಕಡೆ, ಈ ಕಡೆಯಿಂದ ಆಕಡೆ ಓಡಾಡಬಹುದಾಗಿದೆ. ಅದರಂತೆ ಅಮೃತ ಯೋಜನೆ ಅನುದಾನ ಬಳಸಿ ಸೇತುವೆ ನಿರ್ಮಿಸಿ ಅದರ ಮೇಲೆ ಡಾಂಬರೀಕರಣ ಕೈಗೊಂಡು ರಸ್ತೆ ಮಾಡಲಾಗಿದೆ.

ಚಿತ್ರದುರ್ಗ: ರೋಡೇ ಮಾಡಿಲ್ಲ, ಆಗ್ಲೆ ತಡೆಗೋಡೆ ಕೆಲ್ಸ ಶುರು..!

ಕಾಣೆಯಾದ ಸ್ಲಾಬ್‌:

ರಾಜಕಾಲುವೆ ಮೇಲೆ ಸೇತುವೆ ನಿರ್ಮಿಸಬೇಕೆಂದರೆ ಕಾಂಕ್ರಿಟ್‌ ಸ್ಲಾ್ಯಬ್‌ ಇಲ್ಲವೇ ಕಾಂಕ್ರೀಟ್‌ ರಿಂಗ್‌ಗಳ ಬಳಸಲಾಗುತ್ತದೆ. ಬ್ರಿಡ್ಜ್‌ ಕಂ ರೋಡ್‌ ನಲ್ಲಿ ಬಿದ್ದಿರುವ ಕಂದಕದಲ್ಲಿ ಇಣುಕಿ ನೋಡಿದರೆ ಕಾಂಕ್ರಿಟ್‌ ವರ್ಕ್ ಕಾಣಿಸುತ್ತಿಲ್ಲ. ಯಾವ ತಂತ್ರಜ್ಞಾನ ಬಳಸಿ ಸೇತುವೆ ಮತ್ತು ರಸ್ತೆ ಮಾಡಿದರೋ ಅರ್ಥವಾಗದಂತಾಗಿದೆ. ನಾಲ್ಕು ಬೆಟ್ಟು ದಪ್ಪದ ಡಾಂಬರ್‌ ಹಾಕಿ ರಸ್ತೆ ಮುಗಿಸಲಾಗಿದೆ. ಈ ರಸ್ತೆ ಮಾಡಿ ನಾಲ್ಕು ವರ್ಷಗಳಾಗಿದ್ದು ಇಷ್ಟೊಂದು ದಿನ ಬಾಳಿಕೆ ಬಂದಿದ್ದೇ ಹೆಚ್ಚು ಅನ್ನಿಸುತ್ತೆ. ಬಡಾವಣೆ ಜನರು ನಗರದ ಕಡೆ ಹೋಗಬೇಕೆಂದರೆ ಇದೇ ರಸ್ತೆ ಬಳಸಬೇಕು. ಕಂದಕ ಬಿದ್ದ ರಸ್ತೆ ಪಕ್ಕದಲ್ಲಿಯೇ ಜಿಲ್ಲಾ ಕೇಂದ್ರ ಗ್ರಂಥಾಲಯದ ಶಾಖೆ ಇದೆ. ನಿತ್ಯ ಯುವಕರು, ವೃದ್ದರು ಇದೇ ರಸ್ತೆ ಬಳಸುತ್ತಿದ್ದಾರೆ. ಭಾರೀ ಗಾತ್ರದ ವಾಹನಗಳು ಅಲ್ಲದಿದ್ದರೂ ಸ್ಕೂಟರ್‌, ಕಾರುಗಳು ಈ ಸೇತುವೆ ಮೇಲೆ ಸಂಚರಿಸುತ್ತವೆ. ಕಾರೊಂದು ಚಲಿಸುವಾಗ ಈ ಕಂದಕ ಬಿದ್ದಿದ್ದು ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ.

ಈ ಕಂದಕ ಬಿದ್ದು ಹತ್ತು ದಿನಗಳು ಉರುಳಿವೆ. ನಗರಸಭೆಯ ಯಾರೊಬ್ಬ ಅಧಿಕಾರಿಗಳು, ಇಂಜಿನಿಯರ್‌ಗಳು ತಿರುಗಿ ನೋಡಿಲ್ಲ. ಕಂದಕ ತಪ್ಪಿಸಿಯೇ ಪಕ್ಕದಲ್ಲಿ ವಾಹನಗಳ ಓಡಾಟವಿದೆ. ಯಾವ ಸಂದರ್ಭದಲ್ಲಾದರೂ ಅನಾಹುತಗಳು ಮರುಕಳಿಸಬಹುದು.
 

PREV
Read more Articles on
click me!

Recommended Stories

Bigg boss 12 winner ‘ಗಿಲ್ಲಿ’ ನಟನಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ; ಮಂಡ್ಯದ ಮಣ್ಣಿನ ಮಗನ ಸಾಧನೆಗೆ ಮೆಚ್ಚುಗೆ!
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!